ಶಿವಸೇನೆ ವ್ಯಂಗ್ಯಚಿತ್ರ ವಿವಾದ: ಬೇಷರತ್ ಕ್ಷಮೆಯಾಚಿಸಿದ ಉದ್ಧವ್ ಠಾಕ್ರೆ
ವಿವಾದಕ್ಕೀಡಾಗಿದ್ದ ಸಾಮ್ನಾ ಪತ್ರಿಕೆಯ ವ್ಯಂಗ್ಯಚಿತ್ರ ಕುರಿತಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು ಶನಿವಾರ ಬೇಷರತ್ ಕ್ಷಮೆಯಾಚಿಸಿದ್ದಾರೆ...

ನವದೆಹಲಿ: ವಿವಾದಕ್ಕೀಡಾಗಿದ್ದ ಸಾಮ್ನಾ ಪತ್ರಿಕೆಯ ವ್ಯಂಗ್ಯಚಿತ್ರ ಕುರಿತಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು ಶನಿವಾರ ಬೇಷರತ್ ಕ್ಷಮೆಯಾಚಿಸಿದ್ದಾರೆ.
ವಿವಾದಿತ ವ್ಯಂಗ್ಯಚಿತ್ರ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಅವರು, ಉದ್ದೇಶಪೂರ್ವಕವಾಗಿ ಯಾವುದೇ ಕೆಲಸವನ್ನು ನಾವು ಮಾಡಿಲ್ಲ. ವ್ಯಂಗ್ಯಚಿತ್ರದ ಮೂಲಕ ಜನರ ಮನಸ್ಸನ್ನು ನೋಯಿಸಬೇಕೆಂಬ ಉದ್ದೇಶ ನಮ್ಮದಾಗಿರಲಿಲ್ಲ. ತಿಳಿಯದೇ ತಪ್ಪಾಗಿದೆ. ಹೀಗಾಗಿ ಮಹಾರಾಷ್ಟ್ರ ಜನತೆಯ ಬಳಿ ಕ್ಷಮೆಯಾಚಿಸುತ್ತಿದ್ದೇನೆಂದು ಹೇಳಿದ್ದಾರೆ.
ವ್ಯಂಗ್ಯಚಿತ್ರ ಕುರಿತಂತೆ ವಿರೋಧ ವ್ಯಕ್ತವಾದ ಬಳಿಕ ವಿವಾದಗಳನ್ನು ಹುಟ್ಟುಹಾಕಲು ಸಾಕಷ್ಟು ಜನರು ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ, ಮಹಾರಾಷ್ಟ್ರ ಜನತೆ ಇದಕ್ಕೆ ಆಸ್ಪದ ನೀಡದಿರುವುದಕ್ಕೆ ಹಾಗೂ ಪ್ರತಿಕ್ರಿಯೆಗಳನ್ನು ನೀಡದಿರುವುದಕ್ಕೆ ಸಂತೋಷವಾಗಿದೆ ಎಂದಿದ್ದಾರೆ.
ಇದೇ ವೇಳೆ ಕ್ಷಮೆಯಾಚಿಸುವುದಕ್ಕೆ ಹಾಗೂ ಪ್ರತಿಕ್ರಿಯೆ ನೀಡುವುದಕ್ಕೆ ಇಷ್ಟು ತಡವೇಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ವಿಚಾರವನ್ನು ದೊಡ್ಡದು ಮಾಡುವುದು ನಮಗಿಷ್ಟವಿರಲಿಲ್ಲ. ಕೆಲ ಸಂಚುಕೋರರಿಂದಾಗಿ ವಿಚಾರ ದೊಡ್ಡದಾಗಿದೆ. ಸಂಚಿನ ಹಿಂದೆ ಯಾರಿದ್ದಾರೆಂಬುದನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವುದರ ಕುರಿತಂತೆ ಮಾತನಾಡಿರುವ ಅವರು, ಮೀಸಲಾತಿ ಕುರಿತಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವಿಶೇಷ ಅಧಿವೇಶವನ್ನು ನಡೆಸುವಂತೆ ಈ ಹಿಂದೆ ಮನವಿ ಸಲ್ಲಿಸಿದ್ದೆ. ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದರು. ಶೀಘ್ರದಲ್ಲಿಯೇ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಮೀಸಲಾತಿಗೆ ಆಗ್ರಹಿಸಿ ಮರಾಠಾ ಸಮುದಾಯ ನಡೆಸುತ್ತಿರುವ ಮೌನ ಪ್ರತಿಭಟನೆ ಸಂಬಂಧಿಸಿದಂತೆ ಸಾಮ್ನಾ ವ್ಯಂಗ್ಯಚಿತ್ರಕಾರ ಶ್ರೀನಿವಾಸ್ ಪ್ರಭುದೇಸಾಯಿಯವರು, ಮೌನ ಮೆರವಣಿಗೆಯನ್ನು ಟೀಕಿಸುವ ವ್ಯಂಗ್ಯಚಿತ್ರವೊಂದನ್ನು ರಚಿಸಿದ್ದರು. ಈ ವ್ಯಂಗ್ಯಚಿತ್ರ ಸಾಮ್ನಾ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿತ್ತು.
ಶ್ರೀನಿವಾಸ್ ಪ್ರಭುದೇಸಾಯಿಯವರ ಈ ವ್ಯಂಗ್ಯಚಿತ್ರಕ್ಕೆ ಮರಾಠಾ ಸಮುದಾಯದ ಜನರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕ್ಷಮೆಯಾಚಿಸುವಂತೆ ಕೋರಿ ಪ್ರತಿಭಟನೆಗಿಳಿದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


