ಆಂಧ್ರ, ತೆಲಂಗಾಣದಲ್ಲಿ ಮುಂದುವರೆದ ಮಳೆ ಅಬ್ಬರ; ಸಾವಿನ ಸಂಖ್ಯೆ 13ಕ್ಕೇರಿಕೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿದ ಪರಿಣಾಮ ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 13ಕ್ಕೇರಿಕೆಯಾಗಿದೆ.

ಅಮರಾವತಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿದ ಪರಿಣಾಮ ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 13ಕ್ಕೇರಿಕೆಯಾಗಿದೆ.
ಆಂಧ್ರ ಮತ್ತು ತೆಲಂಗಾಣದಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಶುಕ್ರವಾರ 8 ಮಂದಿ ಸಾವಿಗೀಡಾಗಿದ್ದು, ಮಳೆ ಸಂಬಂಧಿ ಅನಾಹುತದಲ್ಲಿ ಈವರೆಗೂ ಅಸುನೀಗಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಆಂಧ್ರ ಪ್ರದೇಶದ ಪ್ರಮುಖ ಕರಾವಳಿ ಜಿಲ್ಲೆ ವಿಶಾಖಪಟ್ಟಣಂನಲ್ಲಿ ಸಂಭವಿಸಿದ್ದ ಪ್ರವಾಹದಲ್ಲಿ ನಿನ್ನೆ ಇಬ್ಬರು ಕೊಚ್ಚಿ ಕೊಂಡು ಹೋಗಿರುವ ಕುರಿತು ವರದಿಯಾಗಿದೆ. ಕೇವಲ ವಿಶಾಖಪಟ್ಟಣಂನಲ್ಲಿ ಮಾತ್ರವಲ್ಲದೇ ಗುಂಟೂರಿನಲ್ಲೂ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಇಲ್ಲಿ ವಿವಿಧ ಪ್ರಕರಣಗಳಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ.
ಕೊಂಗುಡು ಗ್ರಾಮದ ಸೇತುವೆ ಮೇಲೆ ನಿಲ್ಲಿಸಿದ್ದ ಕಾರಿನಲ್ಲಿ ಸಿಲುಕಿದ್ದ ತನ್ನ ಮಗು ರಕ್ಷಣೆಗೆ ಯತ್ನಿಸಿದ್ದ ನಾಯಿನಿ ಸ್ವಾಮಿ(58) ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಮೇಡಕ್ ಜಿಲ್ಲೆಯ ಮುಬಾರಕ್‌ಪುರ ಗ್ರಾಮದಲ್ಲಿ ಮನೆ ಕುಸಿದು ವೃದ್ಧೆಯೊಬ್ಬರು ಅಸುನೀಗಿದ್ದಾರೆ. ಕಾನುಕುಂಟ ಗ್ರಾಮದಲ್ಲೂ ಮನೆ ಕುಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಹೈದರಾಬಾದ್‌ನ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆಯ ಪರಿಣಾಮ ಗುಂಟೂರಿನ ಪಲ್ನಾಡು ಪ್ರಾಂತ್ಯ ಸೇರಿದಂತೆ ವಿವಿಧ ಕಡೆಗಳಲ್ಲಿ ರಸ್ತೆ ಮತ್ತು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಗ್ರಾಮೀಣ ಪ್ರದೇಶದ ಕೆಲವೆಡೆ ಸೇತುವೆಗಳು ಕೊಚ್ಚಿಹೋಗಿವೆ. ರೆಡ್ಡಿ ಪಾಳ್ಯ ಸೇತುವ ಕೊಚ್ಚಿ ಹೋಗಿದ್ದು ಈಭಾಗದಲ್ಲಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಹೈದರಾಬಾದ್ ನಲ್ಲೂ ಮಳೆ ಅಬ್ಬರ ಮುಂದುವರೆದಿದ್ದು, ಮಳೆಯಿಂದಾಗಿ ಗುಂಟೂರು ಮತ್ತು ಸಿಕಿಂದ್ರಾಬಾದ್ ನಡುವಿನ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದಿನ 48 ಗಂಟೆಗಳ ಕಾಲ ಮತ್ತೆ ಮಳೆ ಸುರಿಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಹೈದರಾಬಾದ್ ಸೇರಿ ಎರಡೂ ರಾಜ್ಯಗಳ ವಿವಿಧ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಂತೆಯೇ ಸೇನೆ ನೆರವಿಗೆ ಆಂಧ್ರ ಹಾಗೂ ತೆಲಂಗಾಣ ಸರ್ಕಾರಗಳು ಮನವಿ ಮಾಡಿವೆ. ಗುಂಟೂರಿನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ನೌಕಾಪಡೆಯ ಕಾಪ್ಟರ್ ಗಳನ್ನು ಬಳಕೆ ಮಾಡಲಾಗುತ್ತಿದೆ.
ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಮಳೆಯಿಂದಾಗಿ ಉಭಯ ರಾಜ್ಯಗಳಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು, 40 ಜನರ ಮೂರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಆದರೆ, ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಸಹಕಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿಕೊಂಡಿದೆ. ತೆಲಂಗಾಣದ ಕಡಿಮೆ ಒತ್ತಡ ಪ್ರದೇಶದಲ್ಲಿರುವ ಜನತೆಯನ್ನು ಪೊಲೀಸ್ ಮತ್ತು ವಿಪತ್ತು ನಿರ್ವಹಣಾ ದಳ ತಂಡದ ನೆರವಿನಿಂದ ಸುರಕ್ಷಿತ ಪ್ರದೇಶಗಳಿಗೆ ರವಾನಿಸುವಂತೆ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಆಂಧ್ರ ಪ್ರದೇಶದಲ್ಲಿ ಎನ್ ಡಿಆರ್ ಎಫ್ ನ 2 ತಂಡ ಕಾರ್ಯಾಚರಣೆಯಲ್ಲಿ ತೊಡಗಿದೆ.
ಮನೆಯಿಂದಲೇ ಕೆಲಸಕ್ಕೆ ಸೂಚನೆ
ಇನ್ನು ಹೈಟೆಕ್ ಸಿಟಿ ಹೈದರಾಬಾದ್‌ನಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಐಟಿ ಸಂಸ್ಥೆಗಳು ಮನೆಯಿಂದಲೇ ಕಾರ್ಯ ನಿರ್ವಹಿಸಲು ತಮ್ಮ ನೌಕರರಿಗೆ ಅನುವು ಮಾಡಿಕೊಡುವಂತೆ ತೆಲಂಗಾಣ ಸರ್ಕಾರ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 11 ಸೆ.ಮೀ. ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಾಗಾಗಿ, ಈ ಭಾಗದಲ್ಲಿ ರಸ್ತೆ ಮತ್ತು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಚಿನ್ನ ಶಂಕರ್‌ಪೇಟೆ ಮಂಡಲದಲ್ಲಿ 21 ಸೆ.ಮೀ.ನಷ್ಟುಮಳೆಯಾಗಿದೆ. ಇನ್ನೂ ಮೂರು ದಿನಗಳ ಉಭಯ ರಾಜ್ಯಗಳಲ್ಲಿ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


