ಇಂಡಿಗೋ ವಿಮಾನದ ಪೈಲಟ್ ಪರವಾನಗಿ, ಇಂಧನ ಪರಿಶೀಲನೆಗೆ ಬೇಡಿಕೆ ಇಟ್ಟಿದ್ದ ರಾಹುಲ್ ಗಾಂಧಿ ಭದ್ರತಾ ಪಡೆ
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಭದ್ರತೆ ಒದಗಿಸುವ ವಿಶೇಷ ಭದ್ರತಾ ಪಡೆ ಇಂಡಿಗೋ ವಿಮಾನದ ಪೈಲಟ್ ಗಳ ಪರವಾನಗಿಯನ್ನು ಪರಿಶೀಲನೆ ನಡೆಸಲು ಮುಂದಾಗಿದ್ದ ಬಗ್ಗೆ ಮಾಹಿತಿ ಬಹಿರಂಗವಾಗಿದೆ

ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಭದ್ರತೆ ಒದಗಿಸುವ ವಿಶೇಷ ಭದ್ರತಾ ಪಡೆ ಇಂಡಿಗೋ ವಿಮಾನದ ಪೈಲಟ್ ಗಳ ಪರವಾನಗಿಯನ್ನು ಹಾಗೂ ವಿಮಾನಕ್ಕೆ ಬಳಸಲಾಗುವ ಇಂಧನದ ಮಾದರಿಯನ್ನು ಪರಿಶೀಲನೆ ನಡೆಸಲು ಮುಂದಾಗಿದ್ದ ಮಾಹಿತಿ ಬಹಿರಂಗವಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸೆ.14 ರಂದು ರಾಹುಲ್ ಗಾಂಧಿ ವಾರಾಣಸಿಗೆ ಇಂಡಿಗೋ ವಿಮಾನದಲ್ಲಿ ತೆರಳಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರ ಭದ್ರತಾ ಸಿಬ್ಬಂದಿಗಳು ಇಂಡಿಗೋ ವಿಮಾನದ ಪೈಲಟ್ ಗಳ ಪರವಾನಗಿಯನ್ನು ಹಾಗೂ ವಿಮಾನಕ್ಕೆ ಬಳಸಲಾಗುವ ಇಂಧನದ ಮಾದರಿಯನ್ನು ಪರಿಶೀಲನೆ ನಡೆಸಲು ಮುಂದಾಗಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.
ವಿಶೇಷ ಭದ್ರತಾ ಪಡೆ (ಎಸ್ ಪಿಜಿ)ಯ ಬೇಡಿಕೆಯನ್ನು ನಿರಾಕರಿಸಿದ್ದ ಪೈಲಟ್ ಗಳು, ಎಸ್ ಪಿಜಿ ಗಳಿಗೆ ಪೈಲಟ್ ಗಳ ಪರವಾನಗಿ ಕೇಳುವ ಅಧಿಕಾರವಿಲ್ಲವಾದ್ದರಿಂದ ವಿಮಾನಯಾನ ಸಂಸ್ಥೆ ಮೂಲಕವೇ ಪರವಾನಗಿಯನ್ನು ಪರಿಶೀಲಿಸಿಕೊಳ್ಳುವಂತೆ ಹೇಳಿದ್ದಾರೆ. ಆದರೆ ಇಂಧನದ ಮಾದರಿಯನ್ನು ಪರಿಶೀಲಿಸಲು ವಿಶೇಷ ಭದ್ರತಾ ಪಡೆ ಸಿಬ್ಬಂದಿಗಳಿಗೆ ಅವಕಾಶ ನೀಡಲಾಗಿದೆ.
ವಿಮಾನಕ್ಕೆ ಬಳಕೆ ಮಾಡುವ ಇಂಧನದ ಮಾದರಿಯನ್ನು ಪರಿಶೀಲಿಸಿದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ 45 ನಿಮಿಷಗಳು ತಡವಾಗಿ ಟೇಕ್ ಆಫ್ ಆಗಿದೆ ಎಂದು ತಿಳಿದುಬಂದಿದೆ. ಬಹುಶಃ ಹಿಂದೆಂದೂ ಸಹ ವಿಶೇಷ ಭದ್ರತಾ ಸಿಬ್ಬಂದಿಗಳು ಪೈಲಟ್ ಗಳ ಪರವಾನಗಿ ಪರಿಶೀಲನೆ ನಡೆಸಲು ಕೇಳಿದ ಉದಾಹರಣೆಗಳಿಲ್ಲ. ವಿಐಪಿ ಗಳಿಗಾಗಿ ಏರ್ ಇಂಡಿಯಾ ಅತ್ಯುತ್ತಮ ಪೈಲಟ್ ಗಳನ್ನೇ ನಿಯೋಜಿಸುವುದು ಶಿಷ್ಟಾಚಾರವಾಗಿದೆ. ಆದರೆ ಐಐಪಿಗಳು ವಾಣಿಜ್ಯ ವಿಮಾನಗಳನ್ನು ಬಳಸಿದಾಗ ಪೈಲಟ್ ಗಳ ಪರವಾನಗಿ ಪರಿಶೀಲನೆ ನಡೆಸಿದ ಉದಾಹರಣೆಗಳಿಲ್ಲ ಎಂದು ಇಂಡಿಗೋ ವಿಮಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ರಾಹುಲ್ ಗಾಂಧಿಯ ಎಸ್ ಪಿಜಿ ತಂಡ ಪೈಲಟ್ ಗಳ ಪರವಾನಗಿ ಪರಿಶೀಲನೆ ನಡೆಸಲು ಮುಂದಾಗಿದ್ದ ಘಟನೆ ಅಚ್ಚರಿ ಮೂಡಿಸಿದೆ ಎಂದು ವಿಮಾನಯಾನ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


