ಸಮಾಜವಾದಿ ಪಕ್ಷದೊಳಗಿನ 'ಆಂತರಿಕ ಯುದ್ಧ'ದಿಂದ ಉ.ಪ್ರ ಜನತೆ ನರಳುವಂತಾಗಿದೆ: ಬಿಜೆಪಿ
ಸಮಾಜವಾದಿ ಪಕ್ಷದ ಆಂತರಿಕ ಯುದ್ಧದಿಂದಾಗಿ ಉತ್ತರ ಪ್ರದೇಶದ ಜನರು ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಬಿಜೆಪಿ ಗುರುವಾರ ಹೇಳಿದೆ...

ನವದೆಹಲಿ: ಸಮಾಜವಾದಿ ಪಕ್ಷದ ಆಂತರಿಕ ಯುದ್ಧದಿಂದಾಗಿ ಉತ್ತರ ಪ್ರದೇಶದ ಜನರು ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಬಿಜೆಪಿ ಗುರುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್ ಅವರು, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರು ತಾವೊಬ್ಬ ಮುಖ್ಯಮಂತ್ರಿ ಎಂಬುದನ್ನು ತೋರಿಸಲು ಬಲ ಪ್ರಯೋಗ ಮಾಡುತ್ತಿದ್ದಾರೆ. ಆದರೆ, ಸಾಕಷ್ಟು ಹಗರಣ ಮತ್ತು ವಿವಾದಗಳಲ್ಲಿ ಸಿಲುಕಿಕೊಂಡಿರುವ ಶಿವಪಾಲ್ ಯಾದವ್ ಅವರ ವಿರುದ್ಧವೇಕೆ ಕ್ರಮ ಕೈಗೊಳ್ಳುತ್ತಿಲ್ಲವೆಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಅವರೂ ಕೂಡ ತಮ್ಮ ಮಗ ಯಶಸ್ವಿಯಾಗಿ ಸಾಗುತ್ತಿಲ್ಲ ಎಂದು ಆಲೋಚಿಸುತ್ತಿದ್ದಾರೆಂದು ಅನಿಸತೊಡಗಿದೆ. ಒಂದು ವೇಳೆ ಇದು ಸತ್ಯವಾದರೆ, ಮುಖ್ಯಮಂತ್ರಿಗಳ ಸ್ಥಾನದಲ್ಲಿ ಅಖಿಲೇಶ್ ಯಾದವ್ ಅವರಿಗೆ ಪ್ರಥಮ ಸ್ಥಾನವನ್ನೇಕೆ ನೀಡಲಾಯಿತು? ಸಮಾಜವಾದಿ ಪಕ್ಷದೊಳಗಿದ್ದ ಆಂತರಿಕ ಯುದ್ಧ ಇಂದು ಸ್ಫೋಟಗೊಂಡಿದ್ದು, ನಾಯಕರು ಬಹಿರಂಗವಾಗಿಯೇ ಹಗ್ಗ ಜಗ್ಗಾಟ ನಡೆಸುತ್ತಿದ್ದಾರೆ. ಆದರೆ ಸಮಾಜವಾದಿ ಪಕ್ಷದ ಈ ಆಂತರಿಕ ಯುದ್ಧಕ್ಕೆ ಉತ್ತರ ಪ್ರದೇಶದ ಜನರು ನರಳುವಂತಾಗಿದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸಮಾಜವಾದಿ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸ್ಥಾನದಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಕಿತ್ತುಹಾಕಿ ಈ ಸ್ಥಾನಕ್ಕೆ ಶಿವಪಾಲ್ ಯಾದವ್ ಅವರನ್ನು ನೇಮಿಸಲಾಗಿತ್ತು. ನಂತರ ಶಿವಪಾಲ್ ಯಾದವ್ ಬಳಿಯಿದ್ದ ಬಹುಮುಖ್ಯ ಖಾತೆಗಳಿಗೆ ಅಖಿಲೇಶ್ ಅವರು ಕತ್ತರಿ ಪ್ರಯೋಗ ಮಾಡಿದ್ದರು. ಈ ಬೆಳವಣಿಗೆಯು ಯಾದವ್ ಕುಟುಂಬದಲ್ಲಿ ಭಿನ್ನಮತ ಸ್ಫೋಟಗೊಳ್ಳುವಂತೆ ಮಾಡಿದೆ ಎಂದು ಹೇಳಲಾಗುತ್ತಿತ್ತು.
ಸ್ಥಾನ ಬದಲಾವಣೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಶಿವಪಾಲ್ ಯಾದವ್ ಅವರು, ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಗೌರವಿಸಿ, ಜವಾಬ್ದಾರಿಯುತವಾಗಿ ಪಾಲನೆ ಮಾಡುತ್ತೇನೆ. ಪಕ್ಷದ ನಿರ್ಧಾರವನ್ನು ಪಾಲಿಸುತ್ತೇನೆ. ಸಂಪುಟದಲ್ಲಿ ಯಾವ ಯಾವ ಸಚಿವರು ಬೇಕು ಮತ್ತು ಅವರ ಆಯ್ಕೆ ವಿಚಾರ ಮುಖ್ಯಮಂತ್ರಿಗಳ ಜವಾಬ್ದಾರಿಯಾಗಿರುತ್ತದೆ. ಇದನ್ನೇ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೂ ಕೂಡ ಮಾಡಿದ್ದಾರೆಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


