ದೇಶ

ನಿನ್ನೆ ಕರ್ನಾಟಕ, ಇಂದು ಆಂಧ್ರ ಪದೇಶ ಸರದಿ; ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ "ಆಂಧ್ರ ಬಂದ್"!

ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಆಚರಣೆ ಬೆನ್ನಲ್ಲೇ ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಶನಿವಾರ ಆಂಧ್ರ ಪ್ರದೇಶ ಬಂದ್ ಆಚರಿಸಲಾಗುತ್ತಿದೆ.

ನಿನ್ನೆ ಕರ್ನಾಟಕ, ಇಂದು ಆಂಧ್ರ ಪದೇಶ ಸರದಿ; ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ "ಆಂಧ್ರ ಬಂದ್"!
ಆಂಧ್ರ ಪ್ರದೇಶ ಬಂದ್ (ಸಂಗ್ರಹ ಚಿತ್ರ)
Published On :

ಅಮರಾವತಿ: ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಆಚರಣೆ ಬೆನ್ನಲ್ಲೇ ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಶನಿವಾರ ಆಂಧ್ರ ಪ್ರದೇಶ ಬಂದ್  ಆಚರಿಸಲಾಗುತ್ತಿದೆ.

ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್, ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಬಂದ್ ಗೆ ಬೆಂಬಲ ನೀಡಿದ್ದು, ವಿಭಜಿತ ಆಂಧ್ರ ಪ್ರದೇಶದಲ್ಲಿ  ಜನಜೀವನ ಅಸ್ತವ್ಯಸ್ಥಗೊಂಡಿದೆ. ಪ್ರಮುಖವಾಗಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಪಿ ಪಕ್ಷದ ಪ್ರಾಬಲ್ಯವಿರುವ ರಾಯಲಸೀಮ ಪ್ರಾಂತ್ಯದಲ್ಲಿ ಬಂದ್ ಗೆ ವ್ಯಾಪಕ ಬೆಂಬಲ  ವ್ಯಕ್ತವಾಗಿದ್ದು, ಸ್ವಯಂ ಪ್ರೇರಿತರಾಗಿ ಜನತೆ ಅಂಗಡಿ ಮುಂಗಟ್ಟು ಮುಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೂತನ ರಾಜ್ಯ ತೆಲಂಗಾಣ ರಚನೆ ಬಳಿಕ ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎನ್ನುವ ತೆಲುಗು ಪ್ರಜೆಗಳ ಆಗ್ರಹಕ್ಕೆ ಕೇಂದ್ರ ಸರ್ಕಾರ ನಕಾರಾ ವ್ಯಕ್ತಪಡಿಸಿತ್ತು.  ವಿಶೇಷ ಸ್ಥಾನ ಮಾನ ನೀಡಲು ಸಾಧ್ಯವಿಲ್ಲ. ಆದರೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲು ಸಿದ್ಧ ಎಂದು ಹೇಳಿ ಇತ್ತೀಚೆಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಆಂಧ್ರ ಪ್ರದೇಶಕ್ಕೆ  ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು.

ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಆರ್ಥಿಕ ಪ್ಯಾಕೇಜ್ ಅನ್ನು ಆಂಧ್ರ ಪ್ರದೇಶ ಸರ್ಕಾರ ಕೂಡ ಅಂಗೀಕಾರ ಮಾಡಿತ್ತು. ಆದರೆ ಇದರ ಹೊರತಾಗಿಯೂ ತಮಗೆ ವಿಶೇಷ ಸ್ಥಾನಮಾನ ಬೇಕು  ಎಂದು ಪಟ್ಟುಹಿಡಿದಿದ್ದ ವಿರೋಧ ಪಕ್ಷಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಬಂದ್ ಗೆ ಕರೆ ನೀಡಿದ್ದವು. ಇಂದು ಆಂಧ್ರ ಪ್ರದೇಶದಲ್ಲಿ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಬಂದ್  ಆಚರಣೆ ಮಾಡಲಾಗುತ್ತಿದೆ.

ಮತ್ತೊಂದೆಡೆ ಪ್ರತಿಪಕ್ಷಗಳ ಬಂದ್ ಗೆ ತಿರುಗೇಟು ನೀಡಿರುವ ಟಿಡಿಪಿ ಸರ್ಕಾರ ಪ್ರತಿಭಟನಾ ನಿರತ ವೈಎಸ್ ಆರ್ಪಿ, ಸಿಪಿಐಎಂ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಗೃಹಬಂಧನ ವಿಧಿಸಿದೆ  ಎಂದು ಹೇಳಲಾಗುತ್ತಿದೆ. ಈ ಹಿಂದೆ ಬಂದ್ ಕುರಿತಂತೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದ ಸಿಎಂ ಚಂದ್ರಬಾಬು ನಾಯ್ಡು ಅವರು, ಈಗಾಗಲೇ ರಾಜ್ಯ ವಿಭಜನೆಯಿಂದಾಗಿ ರಾಜ್ಯದ ಪ್ರಜೆಗಳು  ಗಾಯಗೊಂಡಿದ್ದಾರೆ. ಬಂದ್ ಆಚರಣೆ ಮೂಲಕ ಗಾಯದ ಮೇಲೆ ಬರೆ ಎಳೆಯುವ ಕೆಲಸಕ್ಕೆ ಪ್ರತಿಪಕ್ಷಗಳು ಕೈಹಾಕಿವೆ. ಬಂದ್ ನಿಂದಾಗಿ ರಾಜ್ಯ ಆರ್ಥಿಕತೆ ಮೇಲೆ ಎಷ್ಟು ಹೊಡೆತ ಬೀಳುತ್ತದೆ  ಎಂಬ ಕನಿಷ್ಠ ಜ್ಞಾನವೂ ಅವರಿಗಿಲ್ಲ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.