ಹುತಾತ್ಮ ವೀರ ಯೋಧ ಮನ್ದೀಪ್ ಸಿಂಗ್'ಗೆ ಕಂಬನಿಯ ವಿದಾಯ
ಉಗ್ರರ ಗುಂಡಿಗೆ ಎದೆಗೊಟ್ಟು ವೀರ ಮರಣವನ್ನಪ್ಪಿದ ಯೋಧ ಮನ್ದೀಪ್ ಸಿಂಗ್ ಅವರ ಅಂತಿಮ ಸಂಸ್ಕಾರದವನ್ನು ಅವರ ಹುಟ್ಟೂರಾದ ಹರಿಯಾಣದ ಕುರುಕ್ಷೇತ್ರದಲ್ಲಿ ಸಕಲ ಗೌರವಗಳೊಂದಿಗೆ ಭಾನುವಾರ...

ಕುರುಕ್ಷೇತ್ರ: ಉಗ್ರರ ಗುಂಡಿಗೆ ಎದೆಗೊಟ್ಟು ವೀರ ಮರಣವನ್ನಪ್ಪಿದ ಯೋಧ ಮನ್ದೀಪ್ ಸಿಂಗ್ ಅವರ ಅಂತಿಮ ಸಂಸ್ಕಾರದವನ್ನು ಅವರ ಹುಟ್ಟೂರಾದ ಹರಿಯಾಣದ ಕುರುಕ್ಷೇತ್ರದಲ್ಲಿ ಸಕಲ ಗೌರವಗಳೊಂದಿಗೆ ಭಾನುವಾರ ನೆರವೇರಿಸಲಾಯಿತು.
ಎರಡು ದಿನಗಳ ಹಿಂದಷ್ಟೇ ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರೊಂದಿಗೆ ಯೋಧ ಮನ್ದೀಪ್ ಸಿಂಗ್ ಅವರು ಸೆಣೆಸಾಡಿದ್ದರು. ಈ ವೇಳೆ ಉಗ್ರರು ಮನ್ದೀಪ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅಲ್ಲದೆ, ದೇಹವನ್ನು ವಶಕ್ಕೆ ಪಡೆದುಕೊಂಡು ಅಂಗಾಂಗಗಳನ್ನು ಕತ್ತರಿಸಿ ಸ್ಥಳದಿಂದ ಕಾಲ್ಕಿತ್ತಿದ್ದರು.
ಮನ್ದೀಪ್ ಸಿಂಗ್ ಅವರು ಸಾವಿನ ಸುದ್ದಿ ಇಡೀ ಕುರುಕ್ಷೇತ್ರದ ಜನತೆಗೆ ಆಘಾತವನ್ನು ತಂದೊಡ್ಡಿತ್ತು. ವೀರ ಯೋಧನನ್ನು ಕಳೆದುಕೊಂಡ ದುಃಖದಲ್ಲಿದ್ದ ಜನರು ಮುಳುಗಿದ್ದರು. ಕುರುಕ್ಷೇತ್ರದಾದ್ಯಂತ ಮೌನ ಆವರಿಸಿತ್ತು. ಎಲ್ಲೆಡೆ ಮನ್ದೀಪ್ ಸಿಂಗ್ ಅವರಿಗಾಗಿ ಜನರು ಕಂಬನಿ ಮಿಡಿಯುತ್ತಿದ್ದಾರೆ. ಯೋಧನಿಗೆ ಗೌರವ ಸೂಚಿಸಿ ಇದೀಗ ಕುರುಕ್ಷೇತ್ರದ ಜನರು ದೀಪಾವಳಿ ಆಚರಿಸದಿರಲು ನಿರ್ಧಾರ ಕೈಗೊಂಡಿದ್ದಾರೆ.
ಮನ್ ದೀಪ್ ಅವರ ಪಾರ್ಥೀವ ಶರೀರವನ್ನು ಅಧಿಕಾರಿಗಳು ಇಂದು ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದರು. ಇದರಂತೆ ಸಕಲ ಗೌರವಗಳೊಂದಿಗೆ ಮನ್ದೀಪ್ ಅವರ ಅಂತಿಮ ಸಂಸ್ಕಾರವನ್ನು ಇಂದು ನೆರವೇರಿಸಲಾಗಿದೆ.
ಲಾರಿ ಚಾಲಕರ ಮಗನಾಗಿರುವ ಮನ್ದೀಪ್ ಸಿಂಗ್ ಅವರು 2009ರಲ್ಲಿ ಸೇನೆಯನ್ನು ಸೇರಿದ್ದರು. 2014ರಲ್ಲಿ ಪ್ರೇರಣಾ ಎಂಬುವವರನ್ನು ವಿವಾಹವಾಗಿದ್ದರು. ಪ್ರೇರಣಾ ಅವರು ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವೀರ ಯೋಧನ ಕುರಿತಂತೆ ಮಾತನಾಡಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು, ಮನ್ದೀಪ್ ಅವರ ಕುಟುಂಬಸ್ಥರೊಂದಿಗೆ ನಾವಿದ್ದೇವೆ. ಕುಟುಂಬಸ್ಥರಿಗೆ ರು.50 ಲಕ್ಷ ಹಣವನ್ನು ಪರಿಹಾರವಾಗಿ ಘೋಷಿಸುತ್ತಿದ್ದೇನೆ. ಹಾಗೂ ಮನ್ದೀಪ್ ಅವರ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗವನ್ನು ನೀಡಲು ನಿರ್ಧರಿಸಲಾಗಿದೆ. ಮನ್ದೀಪ್ ಅವರ ತ್ಯಾಗವನ್ನು ವ್ಯರ್ಥವಾಗಲು ನಾವು ಬಿಡುವುದಿಲ್ಲ. ಮನ್ದೀಪ್ ಅವರನ್ನು ಎಂದಿಗೂ ಸ್ಮರಿಸುತ್ತೇವೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


