ದೇಶ

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ತ.ನಾಡಿನಲ್ಲಿ ವ್ಯಾಪಕ ಪ್ರತಿಭಟನೆ

ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಆಗ್ರಹಿಸಿ ತಮಿಳುನಾಡಿನಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ವರೆಗೂ 2 ಸಾವಿರಕ್ಕೂ ಅಧಿಕ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ತ.ನಾಡಿನಲ್ಲಿ ವ್ಯಾಪಕ ಪ್ರತಿಭಟನೆ
ರೈಲು ಸಂಚಾರಕ್ಕೆ ಅಡ್ಡಿ ಪಡಿಸಿದ ಕಾರ್ಯಕರ್ತರನ್ನು ತೆರವುಗೊಳಿಸುತ್ತಿರುವ ಪೊಲೀಸರು (ಎಎನ್ ಐ ಚಿತ್ರ)
Published On :

ಚೆನ್ನೈ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾಳಗಕ್ಕೆ ಕಾರಣವಾಗಿರುವ ಕಾವೇರಿ ವಿವಾದ ಸಂಬಂಧ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಆಗ್ರಹಿಸಿ  ತಮಿಳುನಾಡಿನಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ವರೆಗೂ ಬರೊಬ್ಬರಿ 2 ಸಾವಿರಕ್ಕೂ ಅಧಿಕ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನು ಮುಂದೂಡಿರುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿರುವ ತಮಿಳುನಾಡಿನ ವಿವಿಧ ರೈತಪರ ಸಂಘಟನೆಗಳು 48 ಗಂಟೆಗಳ ರೈಲ್  ರೋಕೋ ಚಳವಳಿಗೆ ಕರೆ ನೀಡಿದ್ದು, ಅದರಂತೆ ತಮಿಳುನಾಡಿನ ವಿವಿಧೆಡೆ ರೈಲು ನಿಲ್ಲಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ತಿರುಚ್ಚಿ ಮತ್ತು ತಂಜಾವೂರಿನಲ್ಲಿ ರೈಲ್ವೇ ಹಳಿಗಳ ಮೇಲೆ ಅಡುಗೆ ಬೇಯಿಸುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದರೆ, ಇತ್ತ ಪೊಲ್ಲಾಚಿ, ಮೆಟ್ಟುಪಾಳಯಂ, ಸುಲೂರು ರೈಲ್ವೇ ನಿಲ್ದಾಣಗಳಲ್ಲಿ  ರೈಲ್ವೇ ಹಳಿಗೆ ಅಡ್ಡಲಾಗಿ ಮಲಗಲು ಪ್ರತಿಭಟನಾಕಾರರು ಯತ್ನಿಸಿದ್ದಾರೆ.

ಇನ್ನು ತಿರುಚ್ಚಿಯಲ್ಲಿ ಕೆಲ ರೈತಪರ ಸಂಘಟನೆಗಳು ರೈಲ್ವೇ ಹಳಿ ಮೇಲೆ ಭತ್ತದ ಬೆಳೆಯನ್ನು ನಾಟುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ನಿರತ  ರೈತರನ್ನು ನಿಭಾಯಿಸಲು ತಮಿಳುನಾಡು ಪೊಲೀಸರು ಹರಸಾಹಸ ಪಡುತ್ತಿದ್ದು, ಕೆಲವೆಡೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆ ಕೂಡ ವರದಿಯಾಗಿದೆ.

ಈ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು ರೈಲು ಸಂಚಾರಕ್ಕೆ ಅಡ್ಡಿ ಪಡಿಸುತ್ತಿರುವ ಸಾವಿರಾರು ರೈತರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ತಮಿಳುನಾಡಿನ  ಶ್ರೀರಂಗಂ, ತಿರುಚ್ಚಿ, ಕೊಯಮತ್ತೂರು, ಪೊಲ್ಲಾಚ್ಚಿ, ಮೆಟ್ಟುಪಾಳಯಂ, ಸುಲೂರಿನಲ್ಲಿ ಡಿಎಂಕೆ ಮುಖಂಡರಾದ ಕೆಎನ್ ನೆಹರೂ ಸೇರಿದಂತೆ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಂತೆಯೇ ಕುಡಲೂರು ರೈಲ್ವೇ ನಿಲ್ದಾಣದಲ್ಲಿ ರೈಲು ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸುಮಾರು 700ಕ್ಕೂ ಅಧಿಕ ರೈತರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ತಮಿಳು  ಸಂಘಟನೆಗಳ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಈರೋಡ್ ಜಿಲ್ಲೆಯಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನಲೆಯಲ್ಲಿ ಪೊಲೀಸರು ಲಾಠಿ  ಚಾರ್ಜ್ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದ್ದಲ್ಲದೇ ಹಿಂಸಾಚಾರದಲ್ಲಿ ತೊಡಗಿದ್ದ 300ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಮಧುರೈನಲ್ಲೂ ಉದ್ವಿಗ್ನ ವಾತಾವಾರಣ  ನಿರ್ಮಾಣವಾಗಿದ್ದು, ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.