ದೇಶ

ಮತ್ತೊಂದು 'ಕಾವೇರಿ ಕಲಾಪ': 'ಮರಣ ಶಾಸನ' ಮಾರ್ಪಾಡಿಗೆ ನಾಯಕರ ಹರಸಾಹಸ

ರಾಜ್ಯದ ಪಾಲಿಗೆ 'ಮರಣ ಶಾಸನ'ವೆಂದೇ ಹೇಳಲಾಗುವ 'ಕಾವೇರಿ ನಿರ್ವಹಣಾ ಮಂಡಳಿ' ಮಾರ್ಪಾಡಿಗೆ ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದ್ದು, ಈ ಹಿಂದೆ ವಿಧಾನಮಂಡಲದಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯ ತಿದ್ದುಪಡಿ ಮಾಡಲು...

ಮತ್ತೊಂದು 'ಕಾವೇರಿ ಕಲಾಪ': 'ಮರಣ ಶಾಸನ' ಮಾರ್ಪಾಡಿಗೆ ನಾಯಕರ ಹರಸಾಹಸ
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜ್ಯದ ಪಾಲಿಗೆ 'ಮರಣ ಶಾಸನ'ವೆಂದೇ ಹೇಳಲಾಗುವ 'ಕಾವೇರಿ ನಿರ್ವಹಣಾ ಮಂಡಳಿ' ಮಾರ್ಪಾಡಿಗೆ ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದ್ದು, ಈ ಹಿಂದೆ ವಿಧಾನಮಂಡಲದಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯ ತಿದ್ದುಪಡಿ ಮಾಡಲು ಸೋಮವಾರ ವಿಶೇಷ ಅಧಿವೇಶವನ್ನು ನಡೆಸಲಿದೆ.

ಸೆ.23 ರಂದು ನಡೆಸಲಾಗಿದ್ದ ಅಧಿವೇಶನದಲ್ಲಿ ಕಾವೇರಿ ಕೊಳ್ಳದ ಜಲಾಶಯದಲ್ಲಿರುವ ನೀರು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳುವುದಾಗಿ ನಿರ್ಣಯ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ಸುಪ್ರೀಂಕೋರ್ಟ್ ಆದೇಶವನ್ನು ಸತತವಾಗಿ 3 ಬಾರಿ ರಾಜ್ಯ ಸರ್ಕಾರ ಪರೋಕ್ಷವಾಗಿ ಧಿಕ್ಕರಿಸಲು ನಿರ್ಧರಿಸಿತ್ತು.

ಕಾವೇರಿ ಕೊಳ್ಳದ ಬೆಳೆಗಳು ಸಂಪೂರ್ಣವಾಗಿ ನಾಶವಾಗುವ ಹಂತದಲ್ಲಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಅಲ್ಪ ಮಟ್ಟದಲ್ಲಾದರೂ ನೀರು ಬಿಡುವಂತೆ ಈ ಹಿಂದೆ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ ನಾಯಕರು ಸಲಹೆಗಳನ್ನು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ನಡೆಸಲಾಗಿದ್ದ ನಿರ್ಣಯ ಮಾರ್ಪಾಡು ಮಾಡುವ ಅನಿವಾರ್ಯವಾದ್ದರಿಂದ ರಾಜ್ಯ ಸರ್ಕಾರ ಇಂದು ವಿಶೇಷ ಅಧಿವೇಶನವನ್ನು ಕರೆದಿದೆ. ಇಂದು ನಡೆಯುವ ವಿಶೇಷ ಅಧಿವೇಶನದಲ್ಲಿ ಕುಡಿಯುವ ನೀರಿಗಾಗಿ ಮಾತ್ರ ಎನ್ನುವುದನ್ನು 'ಅಗತ್ಯ ಕುಡಿಯುವ ನೀರಿನ ಪ್ರಮಾಣಕ್ಕಿಂತ ಹೆಚ್ಚುವರಿ ನೀರನ್ನು ಇತರೆ ಚಟುವಟಿಕೆಗಳಿಗೆ ಬಳಕೆ 'ಎಂದು ಮಾರ್ಪಾಡು ಮಾಡುವ ಸಾಧ್ಯತೆಗಳಿವೆ.

ನಿರ್ಣಯಕ್ಕೂ ಮುನ್ನ ಸಭಾಪತಿ ಹಾಗೂ ಸಭಾಧ್ಯಕ್ಷರ ನೇತೃತ್ವದಲ್ಲಿ ಉಭಯ ಸದನಗಳ ನಾಯಕರ ಸಭೆ ನಡೆಸಲಿದ್ದು. ಈ ವೇಳೆ ಕರಡು ನಿರ್ಣಯವನ್ನು ರೂಪಿಸಲಾಗುತ್ತದೆ. ತದನಂತರ ವಿಧಾನಮಂಡಲದಲ್ಲಿ ಚರ್ಚೆ ನಡೆಸಲಾಗುತ್ತದೆ.

ಇಂದು ನಡೆಯಲಿರುವ ಈ ಅಧಿವೇಶನ ರಾಜ್ಯದ ಕಾವೇರಿ ಹೋರಾಟದ ಹಾದಿಯಲ್ಲಿ ಮೈಲುಗಲ್ಲಾಗಿ ದಾಖಲಾಗಲಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಕೂಡ ನಿರ್ಣಯವೊಂದನ್ನು ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಲಾಗುತ್ತದೆ.

ಸೆ.23 ರಂದು ನಡೆದ ವಿಶೇಷ ಅಧಿವೇಶನದಲ್ಲಿ ಅತ್ಯಂತ ಜಾಣ್ಮೆ ಮರೆದಿದ್ದ ರಾಜ್ಯ ಸರ್ಕಾರ ಸಾಕಷ್ಟು ಜಾಗರೂಕತೆಯಿಂದ ನಿರ್ಣಯವನ್ನು ಕೈಗೊಂಡಿತ್ತು. ಅಂದು ತೆಗೆದುಕೊಂಡ ನಿರ್ಣಯದಲ್ಲಿ ಎಲ್ಲೂ ತಮಿಳುನಾಡಿಗೆ ನೀರು ಹರಿಸಲಾಗದು, ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಲು ಸಾಧ್ಯವಿಲ್ಲ ಎಂದು ಪ್ರಸ್ತಾಪಿಸಿರಲಿಲ್ಲ.

ಈ ಹಿಂದಿನಿಂದಲೂ ಸುಪ್ರೀಂ ಬಳಿ ರಾಜ್ಯ ಸರ್ಕಾರ ಕುಡಿಯುವ ನೀರಿಗೆ ರಾಜ್ಯದಲ್ಲಿ ಅಭಾವವಿದೆ. ಹೀಗಾಗಿ ತಮಿಳುನಾಡಿಗೆ ನೀರು ಹರಿಸಲು ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ವಾದಿಸುತ್ತಲೇ ಬಂದಿದೆ.

ಇದೀಗ ನಾಯಕರ ಸಲಹೆಯಂತೆಯೇ ಬೆಳೆಗಳಿಗೆ ನೀರು ಹರಿಸುವ ನಿರ್ಣಯವನ್ನು ರಾಜ್ಯಸರ್ಕಾರ ಕೈಗೊಂಡಿದ್ದೇ ಆದರೆ, ರಾಜ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಆಭಿಪ್ರಾಯಗಳು ಇದೀಗ ವ್ಯಕ್ತವಾಗುತ್ತಿವೆ.

ಆದೇಶವನ್ನು ಪಾಲಿಸದೆ ಈಗಾಗಲೇ ರಾಜ್ಯ ಸರ್ಕಾರ ಸುಪ್ರೀಂ ಕೆಂಗಣ್ಣಿಗೆ ಗುರಿಯಾಗಿದೆ, ನೀರಿದ್ದೂ ನೀರು ಹರಿಸಲಿಲ್ಲ ಎಂಬ ತಮಿಳುನಾಡು ವಾದಕ್ಕೆ ಈ ನಿರ್ಣಯ ಪುಷ್ಟಿ ನೀಡಲಿದೆ. ಇಂತಹ ನಿರ್ಣಯಗಳು ರಾಜ್ಯದ ಮುಂದಿನ ಹೋರಾಟಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.