ಭ್ರಷ್ಟರೊಂದಿಗೆ ಆಡಳಿತ ನಡೆಸಿದ ಮನಮೋಹನ್ ಸಿಂಗ್ ಉಪದೇಶ ನಮಗೆ ಬೇಕಿಲ್ಲ: ನಾಯ್ಡು
ಹಲವು ವರ್ಷಗಳ ಕಾಲ ದೇಶವನ್ನು ಕೊಳ್ಳೆಹೊಡೆದು ಭ್ರಷ್ಟಾಚಾರ ನಡೆಸಿದ ಕಾಂಗ್ರೆಸ್ ಪಕ್ಷದ ಉಪದೇಶ ನಮಗೆ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು...

ವಿಶಾಖಪಟ್ಟಣ: ಹಲವು ವರ್ಷಗಳ ಕಾಲ ದೇಶವನ್ನು ಕೊಳ್ಳೆಹೊಡೆದು ಭ್ರಷ್ಟಾಚಾರ ನಡೆಸಿದ ಕಾಂಗ್ರೆಸ್ ಪಕ್ಷದ ಉಪದೇಶ ನಮಗೆ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಶನಿವಾರ ಹೇಳಿದ್ದಾರೆ.
ನೋಟು ನಿಷೇಧ ಕುರಿತಂತೆ ಈ ಹಿಂದೆ ಕೆಲ ಕಾಂಗ್ರೆಸ್ ನಾಯಕರು ಹೇಳಿಕೆಯನ್ನು ನೀಡಿದ್ದರು. ನಿಷೇಧ ಹೇರುವುದಕ್ಕೂ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಥವಾ ಸರ್ಕಾರ ಮಾಜಿ ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರ ಸಲಹೆಯನ್ನು ಪಡೆದುಕೊಳ್ಳಬೇಕಿತ್ತು ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವೆಂಕಯ್ಯ ನಾಯ್ಡು ಅವರು, ಕಾಂಗ್ರೆಸ್ ಪಕ್ಷ ದೇಶವನ್ನು ಸಾಕಷ್ಟು ವರ್ಷಗಳ ಕಾಲ ಕೊಳ್ಳೆ ಹೊಡೆದಿದೆ. ಕಲ್ಲಿದ್ದಲು ಹಗರಣ, 2ಜಿ ಹಗರಣ, ಕಾಮನ್ ವೆಲ್ತ್ ಹಗರಣ, ಶುಗರ್ ಹಗರಣ, ಯೂರಿಯಾ ಹಗರಣ, ರಕ್ಷಣಾ ಹಗರಣ, ಅಗಸ್ಟಾವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣಗಳಂತಹ ಹಗರಣಗಳು ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿತ್ತು. ಹಗರಣಗಳನ್ನು ಲೆಕ್ಕಹಾಕುತ್ತಾ ಹೋದರೆ, ಅದಕ್ಕೆ ಅಂತ್ಯವಿರುವುದಿಲ್ಲ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ದೇಶದಲ್ಲಿ 70 ವರ್ಷಗಳ ಕಾಲ ಭ್ರಷ್ಟಾಚಾರ ನಡೆಸಿದ ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ಆಡಳಿತ ನಡೆಸಿದ್ದರು. ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲೇ ಹೆಚ್ಚು ಹಗರಣಗಳು ನಡೆದಿವೆ. ಇಂತಹವರಿಂದ, ಇಂತಹ ಪಕ್ಷದಿಂದ ಹಾಗೂ ಇಂತರ ಸರ್ಕಾರದ ಕಡೆಯಿಂದ ಉಪದೇಶಗಳು, ಸಲಹೆಗಳನ್ನು ಪಡೆಯುವ ಅಗತ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡೆಯನ್ನು ಹೊಗಳಿರುವ ಅವರು, ಮೋದಿಯವರು ಹಗರಣ ಮುಕ್ತ ಸರ್ಕಾರವನ್ನು ಜನತೆಗೆ ನೀಡಿದ್ದಾರೆ. ಪ್ರಸ್ತುತ ಯಾವುದೇ ಹಗರಣಗಳು, ಕಾಳಧನ ಮಾರುಕಟ್ಟೆಗಳು ದೇಶದಲ್ಲಿ ಇಲ್ಲ. ಇದು ಮೋದಿಯವರ ದೊಡ್ಡತನವಾಗಿದೆ. ದೇಶಕ್ಕೆ ಮೋಸ ಮಾಡಿರುವ ಹಾಗೂ ಕೊಳ್ಳೆಹೊಡೆದಿರುವ ಕಾಂಗ್ರೆಸ್ ಪಕ್ಷದಿಂದ ಪಾಠ ಕಲಿಯುವ ಅಗತ್ಯತೆ ನಮಗಿಲ್ಲ. ನಮಗೆ ಉಪದೇಶ ಮಾಡುವ ಪ್ರಯತ್ನಗಳನ್ನು ಕಾಂಗ್ರೆಸ್ ಮಾಡಬಾರದು ಎಂದು ತಿಳಿಸಿದ್ದಾರೆ.
ನೋಟು ನಿಷೇಧ ಕುರಿತಂತೆ ಈ ಹಿಂದೆ ಸಂಸತ್ತಿನಲ್ಲಿ ಮಾತನಾಡಿದ್ದ ಮನಮೋಹನ್ ಸಿಂಗ್ ಅವರು, ಕೇಂದ್ರ ಸರ್ಕಾರ ಈ ಕ್ರಮ ಅತಿ ದೊಡ್ಡ ನಿರ್ವಹಣಾ ವೈಫಲ್ಯ. ನೋಟು ರದ್ಧತಿ ಸಂಘಟಿತ ಲೂಟಿ ಮತ್ತು ಕಾನೂನಾತ್ಮಕ ಸುಲಿಗೆಯಾಗಿದೆ. ನೋಟು ರದ್ದತಿಯಿಂದಾಗಿ ಜಿಡಿಪಿ ಕಮಿಷ್ಠ ಶೇ.2 ಕುಸಿಯಲಿದೆ. ಇದು ಕನಿಷ್ಠ ಅಂದಾಜೇ ಹೊರತು ಗರಿಷ್ಠ ಅಂದಾಜಲ್ಲ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


