ಕಳೆದೆರಡು ದಿನಗಳಿಂದ ಗಡಿಯಲ್ಲಿ ಗುಂಡಿನ ದಾಳಿ ನಿಂತಿದೆ: ಪರಿಕ್ಕರ್
ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದ ಬಳಿಕ ಗಡಿಯಲ್ಲಿ ಕಳೆದೆರಡು ದಿನಗಳಿಂದ ಗುಂಡಿನ ದಾಳಿ ನಿಂತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಹೇಳಿದ್ದಾರೆ...

ಪಣಜಿ: ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದ ಬಳಿಕ ಗಡಿಯಲ್ಲಿ ಕಳೆದೆರಡು ದಿನಗಳಿಂದ ಗುಂಡಿನ ದಾಳಿ ನಿಂತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತಂತೆ ಗೋವಾದ ರ್ಯಾಲಿಯೊಂದರಲ್ಲಿ ಮಾತನಾಡಿರುವ ಅವರು, ಸೀಮಿತ ದಾಳಿ ಬಳಿಕ ಗಡಿಯಲ್ಲಿ ಪರಿಸ್ಥಿತಿ ಉದ್ನಿಗ್ನವಾಗಿತ್ತು. ಪ್ರತೀನಿತ್ಯ ಗಡಿಯಲ್ಲಿ ಗುಂಡಿನ ಚಕಮಕಿ ನಡೆಯುವುದು ಸಾಮಾನ್ಯವಾಗಿತ್ತು. ಪಾಕಿಸ್ತಾನ ಸೈನಿಕರು ಪದೇಪದೇ ಕದನ ವಿರಾಮ ಉಲ್ಲಂಘನೆ ಮಾಡುವುದು, ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದ್ದರು. ಪಾಕಿಸ್ತಾನದ ಈ ವರ್ತನೆಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡಿದೆ. ಅವರ ದಾಳಿಗೆ ನಾವು ನೀಡುತ್ತಿದ್ದ ಪ್ರತ್ಯುತ್ತರ ಅತ್ಯಂತ ಶಕ್ತಿಶಾಲಿಯಾಗಿತ್ತು. ಹೀಗಾಗಿ ಗಡಿಯಲ್ಲಿ ಕಳೆದೆರಡು ದಿನಗಳಿಂದ ಗುಂಡಿನ ದಾಳಿಗಳು ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಪಾಕಿಸ್ತಾನದ ಕಡೆಯಿಂದ ಭಾರತಕ್ಕೆ ಕರೆಯೊಂದು ಬಂದಿತ್ತು. ಪಾಕಿಸ್ತಾನ ಡಿಜಿಎಂಒ ಅಧಿಕಾರಿಗಳು ಭಾರತಕ್ಕೆ ಮನವಿ ಮಾಡಿದ್ದರು. ಮಾತುಕತೆ ವೇಳೆ ಪಾಕಿಸ್ತಾನದ ಅಧಿಕಾರಿಗಳು ದಾಳಿ ನಡೆಸುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದರು.
ನಮಗೆ ದಾಳಿ ನಡೆಸುವ ಉದ್ದೇಶವಿಲ್ಲ. ಈ ಬಗ್ಗೆ ನಮಗೆ ಆಸಕ್ತಿಯೂ ಇಲ್ಲ. ಮೊದಲು (ಪಾಕಿಸ್ತಾನ) ನೀವು ದಾಳಿ ಮಾಡುತ್ತಿರುವುದನ್ನು ನಿಲ್ಲಿಸಿ. ನಂತರ ನಾವು ಪ್ರತ್ಯುತ್ತರ ನೀಡುವುದನ್ನು ನಿಲ್ಲಿಸುತ್ತೇವೆ. ಮಾತುಕತೆ ನಡೆದ ಬಳಿಕ ಕಳೆದೆರಡು ದಿನಗಳಿಂದ ಗಡಿಯಲ್ಲಿ ಗುಂಡಿನ ದಾಳಿಗಳಾವುದೂ ನಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ.
ಪದೇ ಪದೇ ತನ್ನ ದುರ್ನಡೆಯನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಸಲುವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಳಗೆ ಭಾರತೀಯ ಸೇನೆ ಪ್ರವೇಶ ಮಾಡಲು ಇದೇ ಮೊದಲ ಬಾರಿಗೆ ಸರ್ಕಾರ ಅನುಮತಿ ನೀಡಿತ್ತು. ನಮ್ಮ ಯೋಧರ ಬುದ್ಧಿಶಕ್ತಿ ಮೇಲೆ ಯಾವುದೇ ಸಂಶಯವಿಲ್ಲ. ಆದರೆ ದೇಶದಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೀಮಿತ ದಾಳಿ ನಡೆಸುವ ಕುರಿತಂತೆ ಕಠಿಣ ನಿರ್ಧಾರವೊಂದರನ್ನು ತೆಗೆದುಕೊಂಡಿದ್ದು ಪ್ರಮುಖವಾಗಿದೆ.
ಸಂಪುಟಕ್ಕೆ ಸೇರ್ಪಡೆಗೊಳ್ಳುವಂತೆ ನನಗೆ ಆಹ್ವಾನ ಬಂದಾಗ, ಸೇರ್ಪಡೆಗೊಳ್ಳುವುದಕ್ಕೆ ಹಿಂದೇಟು ಹಾಕಿದ್ದೆ. ಗೋವಾ ಬಿಟ್ಟು ಹೋಗುವುದು ನನಗೆ ಇಷ್ಟವಿರಲಿಲ್ಲ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನವಿ ಮಾಡಿದ್ದರು. ಹೀಗಾಗಿ ನಾನು ಜವಾಬ್ದಾರಿಯನ್ನು ತೆಗೆದುಕೊಂಡಿದ್ದೆ.
ನಾನು ಗೋವಾದ ಪ್ರಜೆಯಾಗಿದ್ದು, ಗೋವಾ ನನಗೆ ಸಾಕಷ್ಟು ಸ್ವಾತಂತ್ರ್ಯವನ್ನು ನೀಡಿತ್ತು. ಇದೀಗ ಭಾರತೀಯ ಸೇನೆಗಾಗಿ ಕೆಲಸ ಮಾಡುವ ಸಂದರ್ಭ ನನ್ನದಾಗಿದೆ. ಬ್ರಿಟೀಷರು, ಪೋರ್ಚುಗೀಸರು ಶಾಂತಿಯುತವಾಗಿ ದೇಶ ತೊರೆಯಲು ಇಚ್ಛಿಸಿರಲಿಲ್ಲ. ನಮ್ಮ ಸೇನೆಯೇ ಅವರನ್ನು ಬಲವಂತವಾಗಿ ಹೊರಹಾಕಿತ್ತು. ಗೋವಾದ ಪ್ರಜೆಯಾದ ನನಗೆ ಇದೀಗ ಭಾರತೀಯ ಸೇನೆಗೆ ಧನ್ಯವಾದ ಹೇಳುವ, ಸೇವೆ ಸಲ್ಲುವ ಅವಕಾಶ ದೊರಕಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


