ನೋಟು ಬದಲಾವಣೆ ಬವಣೆ ನಡುವೆಯೇ ತ.ನಾಡು, ಪುದುಚೇರಿ ಉಪಚುನಾವಣೆ ಮತದಾನ ಆರಂಭ
500 ಮತ್ತು 1000 ನೋಟು ನಿಷೇಧದ ಬಳಿಕ ಹಳೆಯ ನೋಟು ಬದಲಾವಣೆಗಾಗಿ ಜನರ ಭವಣೆ ಮುಂದುವರೆದಿರುವಂತೆಯೇ ತಮಿಳುನಾಡಿನ ಮೂರು ಹಾಗೂ ಪುದುಚೇರಿಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ನಿಮಿತ್ತ ಮತದಾನ ಆರಂಭವಾಗಿದೆ.

ಚೆನ್ನೈ: 500 ಮತ್ತು 1000 ನೋಟು ನಿಷೇಧದ ಬಳಿಕ ಹಳೆಯ ನೋಟು ಬದಲಾವಣೆಗಾಗಿ ಜನರ ಭವಣೆ ಮುಂದುವರೆದಿರುವಂತೆಯೇ ತಮಿಳುನಾಡಿನ ಮೂರು ಹಾಗೂ ಪುದುಚೇರಿಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ನಿಮಿತ್ತ ಮತದಾನ ಆರಂಭವಾಗಿದೆ.
ತಮಿಳುನಾಡಿನ ತಂಜಾವೂರು, ಅರವಕುರಿಚ್ಚಿ, ತಿರುಪುರಣ್ ಗುಂಡ್ರಂ ಮತ್ತು ಪುದುಚೇರಿಯ ನೆಲ್ಲಿಥೋಪ್ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ನಿಮಿತ್ತ ಮತದಾನ ಆರಂಭವಾಗಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಉಭಯ ರಾಜ್ಯಗಳ ಮತದಾರರು ಸಾಲುಗಟ್ಟಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದು, ಸುಗಮ ಮತದಾನಕ್ಕಾಗಿ ಒಟ್ಟು 5,304 ಸಿಬ್ಬಂದಿಗಳನ್ನು ಚುನಾವಣಾ ಆಯೋಗ ನೇಮಿಸಿದೆ. ಅಂತೆಯೇ ಭದ್ರತೆಗಾಗಿ ಕೇಂದ್ರೀಯ ಅರೆಸೇನಾ ಪಡೆಯ 12 ತುಕಡಿಗಳನ್ನು ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ನಿಯೋಜಿಸಲಾಗಿದೆ.
ಕಳೆದ ಮೇ 16ರಂದು ನಡೆದಿದ್ದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಂಜಾವೂರು, ಅರವಕುರಿಚ್ಚಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಮತದಾರರಿಗೆ ಅಪಾರ ಪ್ರಮಾಣದ ಹಣ ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ತಮಿಳುನಾಡು ಚುನಾವಣಾ ಆಯೋಗ ರದ್ದುಗೊಳಿಸಿತ್ತು. ಹೀಗಾಗಿ ಇಂದು ಈ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಅರವಕುರಿಚ್ಚಿಯಲ್ಲಿ ಎಐಎಡಿಎಂಕೆ, ಡಿಎಂಕೆ ಪಕ್ಷದ ಅಭ್ಯರ್ಥಿಗಳು ಸೇರಿದಂತೆ 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ತಂಜಾವೂರು ಕ್ಷೇತ್ರದಲ್ಲಿ ಒಟ್ಟು 39 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಬರೆಯುತ್ತಿದ್ದಾರೆ.
ಮದುರೈ ಜಿಲ್ಲೆಯ ತಿರುಪುರಣ್ ಗುಂಡ್ರಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಪಕ್ಷದ ಶಾಸಕರಾಗಿದ್ದ ಎಸ್ ಎಂ ಸೀನಿವೇಲ್ ಅವರು ಅಕಾಲ ಮರಣವನ್ನಪ್ಪಿದ್ದರಿಂದ ಇಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಈ ಬಾರಿ 28 ಅಭ್ಯರ್ಥಿಗಳು ಕಣದಲ್ಲಿದ್ದು, ಎಐಎಡಿಎಂಕೆ ಪರ ಎಕೆ ಬೋಸ್ ಸ್ಪರ್ಧಿಸಿದ್ದರೆ, ಅವರಿಗೆ ಪ್ರಬಲ ಸ್ಪರ್ಧಿಯಾಗಿ ಡಿಎಂಕೆ ಪಕ್ಷದ ಪಿ ಸರವಣನ್ ಸ್ಪರ್ಧಿಸಿದ್ದಾರೆ.
ಅಂತೆಯೇ ಪುದುಚೇರಿಯ ನೆಲ್ಲಿಥೋಪ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಎ ಜಾನ್ ಕುಮಾರ್ ಅವರು ರಾಜಿನಾಮೆ ನೀಡಿದ ಪರಿಣಾಮ ಈ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 8 ಮಂದಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


