ದೇಶ

ಎನ್ಎಸ್ ಜಿ ಪ್ರತೀಕಾರಕ್ಕೆ ತಂತ್ರ: ದಕ್ಷಿಣ ಚೀನಾ ಸಮುದ್ರ ವಿವಾದದಲ್ಲಿ ಚೀನಾ ವಿರುದ್ಧ ಭಾರತದ ನಿಲುವು?

ಪಾಕ್ ಭಯೋತ್ಪಾದಕ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಭಾರತದ ಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಅಡ್ಡಗಾಲು ಹಾಕಿದ್ದ ಚೀನಾಗೆ ಬಲವಾದ ತಿರುಗೇಟು ನೀಡಲು ಭಾರತ ಸಿದ್ಧಗೊಂಡಿದೆ

ಎನ್ಎಸ್ ಜಿ ಪ್ರತೀಕಾರಕ್ಕೆ ತಂತ್ರ: ದಕ್ಷಿಣ ಚೀನಾ ಸಮುದ್ರ ವಿವಾದದಲ್ಲಿ ಚೀನಾ ವಿರುದ್ಧ ಭಾರತದ ನಿಲುವು?
ವಿವಾದಿತ ದಕ್ಷಿಣ ಚೀನಾ ಸಮುದ್ರ
Published On :
ನವದೆಹಲಿ: ಪರಮಾಣು ಇಂಧನ ಪೂರೈಕೆದಾರರ ಸಮೂಹದ ಸದಸ್ಯತ್ವ ಪಡೆಯಲು ಅಡ್ಡಿ ಪಡಿಸಿದ್ದು, ಪಾಕ್ ಭಯೋತ್ಪಾದಕ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಭಾರತದ ಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಅಡ್ಡಗಾಲು ಹಾಕಿದ್ದ ಚೀನಾಗೆ ಬಲವಾದ ತಿರುಗೇಟು ನೀಡಲು ಭಾರತ ಸಿದ್ಧಗೊಂಡಿದ್ದು, ದಕ್ಷಿಣ ಚೀನಾ ಸಮುದ್ರ ವಿವಾದಲ್ಲಿ ಚೀನಾ ವಿರುದ್ಧ ಸ್ಪಷ್ಟ ನಿಲುವು ಪ್ರಕಟಿಸಲು ತೀರ್ಮಾನಿಸಿದೆ ಎಂಬ ವರದಿಗಳು ಪ್ರಕಟವಾಗಿವೆ. 
ದಕ್ಷಿಣ ಚೀನಾ ಸಮುದ್ರ ವಿವಾದದಲ್ಲಿ ವಿಶ್ವಸಂಸ್ಥೆ ನ್ಯಾಯಮಂಡಳಿ ಚೀನಾ ವಿರುದ್ಧ ನೀಡಿದ್ದ ತೀರ್ಪಿನ ಬಗ್ಗೆ ಭಾರತ ಈ ವರೆಗೂ ತಟಸ್ಥ ನಿಲುವು ಹೊಂದಿತ್ತು. ಆದರೆ ಎನ್ಎಸ್ ಜಿ ಹಾಗೂ ಭಯೋತ್ಪಾದಕರಿಗೆ ನಿಷೇಧ ವಿಧಿಸುವ ವಿಚಾರದಲ್ಲಿ ಚೀನಾ ಭಾರತದ ಯತ್ನಗಳಿಗೆ ನಿರಂತರವಾಗಿ ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಚೀನಾಗೆ ಮರ್ಮಾಘಾತ ನೀಡಲು ಭಾರತ ಸರ್ಕಾರ ತೀರ್ಮಾನಿಸಿದ್ದು, ನ್ಯಾಯಮಂಡಳಿಯ ತೀರ್ಪಿನ ಕುರಿತು ಚೀನಾ ವಿರುದ್ಧ ನಿಲುವು ಪ್ರಕಟಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಜಂಟಿ ಪ್ರಕಟಣೆಯನ್ನು ನೀಡುವ ಬಗ್ಗೆ ಸಿಂಗಾಪುರಕ್ಕೆ ಪ್ರಸ್ತಾವನೆ ನೀಡಿತ್ತು, ಆದರೆ ದಕ್ಷಿಣ ಚೀನಾ ಸಮುದ್ರದ ಯಾವುದೇ ಪ್ರದೇಶಕ್ಕೆ ತಾನು ಹಕ್ಕುದಾರನಲ್ಲದ ಕಾರಣ ಸಿಂಗಾಪುರ ಜಂಟಿ ಹೇಳಿಕೆ ಮೂಲಕ ಚೀನಾ ಪರ ಅಥವಾ ವಿರುದ್ಧದ ನಿಲುವು ಪ್ರಕಟಿಸುವ ಪ್ರಸ್ತಾವನೆಯಿಂದ ದೂರ ಉಳಿದಿತ್ತು. ಈಗ ಭಾರತ ಸರ್ಕಾರ ಜಪಾನ್, ವಿಯೆಟ್ನಾಮ್, ಮಲೇಷ್ಯಾ ಸೇರಿದಂತೆ ದಕ್ಷಿಣ ಚೀನಾ ಸಮುದ್ರದ ಹಕ್ಕುದಾರ ರಾಷ್ಟ್ರಗಳನ್ನು ಒಗ್ಗೂಡಿಸಿ ಜಂಟಿ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಚೀನಾ ವಿರುದ್ಧದ ನಿಲುವು ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
ಚೀನಾ ಈಗಾಗಲೇ ತಿರಸ್ಕರಿಸಿರುವ ವಿಶ್ವಸಂಸ್ಥೆ ನ್ಯಾಯಮಂಡಳಿ ತೀರ್ಪನ್ನು ಅಂಗೀಕರಿಸುವ ಬಗ್ಗೆ ಭಾರತ ಈಗಾಗಲೇ ಜಾಪನ್ ನೊಂದಿಗೆ ಚರ್ಚೆ ನಡೆಸುತ್ತಿದೆ. ಮುಂದಿನ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಭೇಟಿ ಮಾಡಲಿದ್ದು ಈ ಬಗ್ಗೆ ಅಧಿಕೃತ ಜಂಟಿ ಹೇಳಿಕೆ ಬಿಡುಗಡೆ ಮಾಡುವ ಸಾಧ್ಯತೆ ಎನ್ನಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.