ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ: ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಸಮಾನ ವೇತನ ಮತ್ತು ಸಮಾಜ ಪಿಂಚಣಿ ಯೋಜನೆ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರುನ್ನು ದೆಹಲಿ ಪೊಲೀಸರು ಗುರುವಾರ ಮತ್ತೆ ಬಂಧನಕ್ಕೊಳಪಡಿಸಿದ್ದಾರೆಂದು ಮೂಲಗಳಿಂದ...

ನವದೆಹಲಿ: ಸಮಾನ ವೇತನ ಮತ್ತು ಸಮಾಜ ಪಿಂಚಣಿ ಯೋಜನೆ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ದೆಹಲಿ ಪೊಲೀಸರು ಗುರುವಾರ ಮತ್ತೆ ಬಂಧನಕ್ಕೊಳಪಡಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ನಿನ್ನೆಯಷ್ಟೇ ಮಾಜಿ ಯೋಧ ರಾಮ್ ಕಿಶನ್ ಗ್ರೆವಾಲ್ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೆ ಸಮಾನ ವೇತನ ಮತ್ತು ಸಮಾನ ಪಿಂಚಣಿ ಜಾರಿಯಾಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಯೋಧ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು.
ಕೇಂದ್ರ ಸರ್ಕಾರ ಈ ನಡೆಗೆ ಖಂಡನೆ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ನಿನ್ನೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇದರಂತೆ ರಾಹುಲ್ ಗಾಂಧಿಯವರನ್ನು ದೆಹಲಿ ಪೊಲೀಸರು ಎರಡು ಬಾರಿ ಬಂಧನಕ್ಕೊಳಪಡಿಸಿದ್ದರು.
ಯೋಧ ಆತ್ಮಹತ್ಯೆ ಪ್ರಕರಣ ಕುರಿತಂತೆ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ಹಾಗೂ ರಾಹುಲ್ ಗಾಂಧಿಯವರನ್ನು ಬಂಧನಕ್ಕೊಳಪಡಿಸಿದ್ದರ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಕ್ಷ ಇಂದು ರಾಜಧಾನಿ ದೆಹಲಿಯ ಜಂತರ್ ಮಂತರ್ ಹಾಗೂ ಇಂಡಿಯಾ ಗೇಟ್ ಬಳಿ ಕಾಲ್ನಡಿಗೆಯ ಪ್ರತಿಭಟನೆಯನ್ನು ನಡೆಸಲು ಆರಂಭಿಸಿತ್ತು.
ಜಂತರ್ ಮಂತರ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿಯವರು ಭಾಗಿಯಾಗಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ರಾಹುಲ್ ಗಾಂಧಿಯವರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ರಾಹುಲ್ ಗಾಂಧಿಯವರ ಬಂಧನ ಹಿನ್ನೆಲೆಯಲ್ಲಿ ಹಲವೆಡೆ ಕಾಂಗ್ರೆಸ್ ನ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದು, ಕೇಂದ್ರ ಸರ್ಕಾರ ವೈಫಲ್ಯದ ವಿರುದ್ಧ ಕಿಡಿಕಾಡುತ್ತಿದ್ದಾರೆ. ಅಲ್ಲದೆ, ಮಾಜಿ ಯೋಧನ ಆತ್ಮಹತ್ಯೆ ಕುರಿತಂತೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ನೀಡಿದ್ದ ಹೇಳಿಕೆ ವಿರುದ್ಧ ಕಿಡಿಕಾಡಿದ್ದಾರೆ.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಕೂಡ ಭಾಗಿಯಾಗಿದ್ದು, ರಾಷ್ಟ್ರದಲ್ಲಿರುವ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಮೋದಿ ಸರ್ಕಾರ ಜನರನ್ನು ಮೂರ್ಖರನ್ನಾಗಿಸುತ್ತಿದೆ. ಸೇನೆ ನಡೆಸಿದ್ದ ಸೀಮಿತ ದಾಳಿಯನ್ನೂ ವಿವಾದಕ್ಕೀಡಾಗುವಂತೆ ಮಾಡಲಾಗಿತ್ತು. ಸೀಮಿತ ದಾಳಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ರಾಜಕೀಯ ಬಣ್ಣ ನೀಡಿದ್ದರು. ಪರಿಕ್ಕರ್ ಅವರು ಮೋದಿಯವರ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದಾರೆ. ಮಾಜಿ ಯೋಧನ ಕುರಿತಂತೆ ಪರಿಕ್ಕರ್ ಅವರು ನೀಡಿರುವ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ.
ಇನ್ನು ರಾಹುಲ್ ಗಾಂಧಿಯವರ ಬಂಧನ ಕುರಿತಂತೆ ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ರಾಹುಲ್ ಗಾಂಧಿಯವರನ್ನು ಅವರ ನಿವಾಸದಲ್ಲಿಯೇ ವಶಕ್ಕೆ ಪಡೆಯಲಾಗಿದೆಯೇ ವಿನಃ ರಾಹುಲ್ ಅವರನ್ನು ಬಂಧನಕ್ಕೊಳಪಡಿಸಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


