ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕ ವರದಿಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ
ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ 2015ರಲ್ಲಿ ಕುಸಿದುಹೋಗಿತ್ತು. ಅಲ್ಪಸಂಖ್ಯಾತರು ಹಿಂದೂ ಧರ್ಮದವರಿಂದ ಅಪಾರ ಶೋಷಣೆ...

ನವದೆಹಲಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ 2015ರಲ್ಲಿ ಕುಸಿದುಹೋಗಿತ್ತು. ಅಲ್ಪಸಂಖ್ಯಾತರು ಹಿಂದೂ ಧರ್ಮದವರಿಂದ ಅಪಾರ ಶೋಷಣೆ, ನಿಂದನೆಗೆ ಒಳಗಾಗುತ್ತಿದ್ದಾರೆ ಎಂಬ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ(ಯುಎಸ್ ಸಿಐಆರ್ಎಫ್) ವರದಿಗೆ ಭಾರತ ತೀಕ್ಷ್ಣವಾಗಿ ತಿರುಗೇಟು ನೀಡಿದೆ. ಭಾರತವನ್ನು ಮತ್ತು ಅದರ ಸಂವಿಧಾನ, ಸಮಾಜವನ್ನು ಸರಿಯಾಗಿ ಅರ್ಥೈಸುವಲ್ಲಿ ಅಮೆರಿಕದ ಆಯೋಗ ವಿಫಲವಾಗಿದೆ ಎಂದು ಹೇಳಿದೆ.
ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಕುರಿತಂತೆ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಅಮೆರಿಕ ಆಯೋಗ ವರದಿ ನೀಡಿದ್ದು, ಭಾರತದ ನಾಗರಿಕರ ಸಂವಿಧಾನದ ಹಕ್ಕಿನ ಬಗ್ಗೆ ಪ್ರಶ್ನಿಸಲು ವಿದೇಶಿ ಘಟಕಕ್ಕೆ ಅಧಿಕಾರವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಭಾರತ ಅತ್ಯಂತ ಸುಂದರವಾದ ಬಹುಮುಖ ಸಾಂಸ್ಕೃತಿಕ ಸಮಾಜವನ್ನು ಹೊಂದಿದ್ದು, ಭದ್ರವಾದ ಪ್ರಜಾಪ್ರಭುತ್ವ ತತ್ವಗಳನ್ನು ಒಳಗೊಂಡಿದೆ. ಭಾರತದ ಸಂವಿಧಾನ, ದೇಶದ ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯ ಸೇರಿದಂತೆ ಮೂಲಭೂತ ಹಕ್ಕುಗಳನ್ನು ಒದಗಿಸುತ್ತದೆ. ಅಮೆರಿಕದ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ ಎಂದರು.
2015ರಲ್ಲಿ ಭಾರತದಲ್ಲಿ ಧಾರ್ಮಿಕ ಸಹಷ್ಣುತೆ ಕುಸಿದು ಹೋಗಿದ್ದು, ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಅಧಿಕವಾಗಿತ್ತು ಎಂದು ಅಮೆರಿಕದ ಆಯೋಗ ನೀಡಿದ ವರದಿಗೆ ವಿಕಾಸ್ ಸ್ವರೂಪ್ ಪ್ರತಿಕ್ರಿಯೆ ನೀಡಿದರು.
ಧಾರ್ಮಿಕ ಸಮುದಾಯಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಧಾರ್ಮಿಕ ಮುಖಂಡರು ಮತ್ತು ಅಧಿಕಾರಿಗಳ ವಿರುದ್ಧ ಸಾರ್ವಜನಿಕವಾಗಿ ಛೀಮಾರಿ ಹಾಕುವಂತೆ ಯುಎಸ್ ಸಿಐಆರ್ ಎಫ್ ತನ್ನ ವಾರ್ಷಿಕ ವರದಿಯಲ್ಲಿ ಹೇಳಿತ್ತು. ಆಯೋಗದ ಸದಸ್ಯರಿಗೆ ಈ ವರ್ಷದ ಆರಂಭಕ್ಕೆ ಭಾರತಕ್ಕೆ ಬರಲು ಸರ್ಕಾರ ವೀಸಾ ನಿರಾಕರಿಸಿತ್ತು. ಭಾರತದ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸ್ಥಾನವಿದ್ದು, ಈ ಬಗ್ಗೆ ವಿಶ್ಲೇಷಣೆ ನಡೆಸಲು ಅಥವಾ ತನಿಖೆ ಮಾಡಲು ವಿದೇಶಗಳ ಮೂರನೇ ವ್ಯಕ್ತಿಗೆ ಅಥವಾ ಸಂಸ್ಥೆಗೆ ಅಧಿಕಾರವಿಲ್ಲ ಎಂದು ಭಾರತ ಹೇಳಿದೆ.
ಭಾರತದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಹಿಂದೂಗಳು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಹಿಂಸೆ ನಡೆಸುವಂತೆ ಬೆಂಬಲ ನೀಡುತ್ತದೆ ಎಂದು ಕೂಡ ಆಯೋಗ ಆರೋಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


