ದೇಶ

ಪಠಾಣ್ ಕೋಟ್"ಗೆ ಪಾಕ್ ತನಿಖಾ ತಂಡ: ಕಾಂಗ್ರೆಸ್'ನಿಂದ ಸಲಹೆ ಕೇಳಿಲ್ಲ ಎಂದ ಬಿಜೆಪಿ

ಪಠಾಣ್ ಕೋಟ್ ವಾಯು ನೆಲೆ ಮೇಲೆ ಉಗ್ರರ ದಾಳಿ ಪ್ರಕರಣದ ತನಿಖೆ ನಡೆಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ತನಿಖಾ ತಂಡಕ್ಕೆ ಪ್ರತಿಭಟನೆಯ ಬಿಸಿ ತಟ್ಟಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ...

ಪಠಾಣ್ ಕೋಟ್"ಗೆ ಪಾಕ್ ತನಿಖಾ ತಂಡ: ಕಾಂಗ್ರೆಸ್'ನಿಂದ ಸಲಹೆ ಕೇಳಿಲ್ಲ ಎಂದ ಬಿಜೆಪಿ
ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಪಠಾಣ್ ಕೋಟ್ ವಾಯು ನೆಲೆ ಮೇಲೆ ಉಗ್ರರ ದಾಳಿ ಪ್ರಕರಣದ ತನಿಖೆ ನಡೆಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ತನಿಖಾ ತಂಡಕ್ಕೆ ಪ್ರತಿಭಟನೆಯ ಬಿಸಿ ತಟ್ಟಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಬಿಜೆಪಿಯು ಕಾಂಗ್ರೆಸ್ ನಿಂದ ನಾವು ಯಾವುದೇ ಸಲಹೆಗಳನ್ನು ಕೇಳಿಲ್ಲ ಎಂದು ಮಂಗಳವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಅವರು, ಕಾಂಗ್ರೆಸ್ ಸಲಹೆ ನೀಡುವಂತೆ ಯಾರೂ ಕೇಳಿಲ್ಲ. ಆದರೆ, ಅವರೇ ಉಚಿತವಾಗಿ ಸಲಹೆ ನೀಡುತ್ತಿದ್ದಾರೆ. ಸಲಹೆ ನೀಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನಾನು ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಆದರೆ, ಒಂದರ ಹಿಂದೆ ಒಂದಂತೆ ಭಾರತದ ಮೇಲೆ ದಾಳಿಯಾಗುತ್ತಿದ್ದಾಗ ಕೈಕಟ್ಟಿ ಕುಳಿತಿದ್ದ ಕಾಂಗ್ರೆಸ್ ಪಕ್ಷ, ಅಂದು ಸಲಹೆ ನೀಡದೆ ಇಂದು ಸಲಹೆ ನೀಡುತ್ತಿದೆ. ಮೋದಿ ಸರ್ಕಾರ ದೇಶದ ಭದ್ರತೆಯ ಕುರಿತು ಚಿಂತಿಸುತ್ತಿದೆ. ದೇಶದ ಭದ್ರತೆ ನಮಗೆ ಅತ್ಯಂತ ಪ್ರಮುಖವಾದದ್ದು ಎಂದು ಹೇಳಿದ್ದಾರೆ.

ಪಠಾಣ್ ಕೋಟ್ ವಾಯುನೆಲೆ ಉಗ್ರರ ದಾಳಿ ಕುರಿತಂತೆ ಇದೀಗ ಪಾಕಿಸ್ತಾನ ತನಿಖಾ ತಂಡ ಭಾರತಕ್ಕೆ ಆಗಮಿಸಿ ತನಿಖೆ ನಡೆಸುತ್ತಿದೆ. ಇದಕ್ಕೆ ಅನುಮತಿ ನೀಡಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಹಲವು ಟೀಕೆಗಳನ್ನು ವ್ಯಕ್ತಪಡಿಸುತ್ತಿದೆ.

ಪಾಕ್ ತನಿಖಾ ತಂಡಕ್ಕೆ ಅನುಮತಿ ನೀಡಿರುವುದನ್ನು ಟೀಕಿಸಿದ್ದ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು, ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆ. ನಮ್ಮ ಸಂಸ್ಥೆಗಳು ಪಾಕಿಸ್ತಾನಕ್ಕಿಂತ ಶಕ್ತಿಶಾಲಿಯಾಗಿದೆ. ಇದೀಗ ಪಾಕಿಸ್ತಾನ ತನಿಖಾ ತಂಡ ಭಾರತಕ್ಕೆ ಆಗಮಿಸಿದೆ. ಇದಕ್ಕೆ ಕಾರಣ ಅವರಿಗೆ ತಮ್ಮ ದೇಶದ ತನಿಖಾ ತಂಡದ ಮೇಲೆ ನಂಬಿಕೆ ಇಲ್ಲದಿರುವುದು. ಇಂತಹ ಪಾಕ್ ತಂಡಕ್ಕೆ ಅನುಮತಿ ನೀಡುವ ಮೂಲಕ ನಮ್ಮ ತನಿಖಾ ಸಂಸ್ಥೆಗೆ ನಾವೇ ಅವಮಾನ ಮಾಡಿದಂತಾಗಿದೆ. ಮೋದಿ ಸರ್ಕಾರ ಈ ಒಂದು ಹೆಜ್ಜೆ ದೇಶಕ್ಕೆ ಅಪಮಾನ ತಂದಂತಾಗಿದೆ ಎಂದು ಹೇಳಿದ್ದರು.

ಇನ್ನು ಪಿ.ಎಲ್. ಪುಣ್ಯ ಅವರು ಕೂಡ ಇದೇ ರೀತಿಯಾಗಿ ಪ್ರತಿಕ್ರಿಯೆ ನೀಡಿ, ಪಾಕಿಸ್ತಾನ ತನಖಾ ತಂಡವನ್ನು ಭಾರತಕ್ಕೆ ಬರಲು ಅನುವು ಮಾಡಿಕೊಟ್ಟಿರುವುದು ನಮ್ಮ ದೌರ್ಭಾಗ್ಯ ಎಂದು ಹೇಳಿದ್ದರು.

ಇನ್ನು ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಜೊತೆ ಕೈಜೊಡಿಸಿರುವ ದೆಹಲಿ ಆಡಳಿತರೂಢ ಆಮ್ ಆದ್ಮಿ ಪಕ್ಷ ಕೂಡ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಕಿಡಕಾರಿದೆ. ಅಲ್ಲದೆ, ಎರಡೂ ಪಕ್ಷಗಳು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.