ಜಲ ಸಂರಕ್ಷಣೆ, ವೈವಿಧ್ಯ ಬೆಳೆ, ಪರ್ಯಾಯ ಉದ್ಯೋಗ ರೈತರಿಗೆ ಮುಖ್ಯ: ಮೋದಿ ಸಲಹೆ
ದೇಶದ ಕೃಷಿ ವಲಯ ತೀವ್ರ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಇರುವ ನೀರನ್ನು ಸಂಗ್ರಹಿಸಿ ಜಾಗರೂಕತೆಯಿಂದ...

ನವದೆಹಲಿ: ದೇಶದ ಕೃಷಿ ವಲಯ ತೀವ್ರ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಇರುವ ನೀರನ್ನು ಸಂಗ್ರಹಿಸಿ ಜಾಗರೂಕತೆಯಿಂದ ಬಳಸುವಂತೆ ಮತ್ತು ರೈತರು ಬೆಳೆ ವೈವಿಧ್ಯೀಕರಣದ ಮೇಲೆ ಗಮನಹರಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅಲ್ಲದೆ ಪರ್ಯಾಯ ಆದಾಯ ಮೂಲವಾಗಿ ಡೈರಿ ಉತ್ಪಾದನೆ, ಪಶು ಸಾಕಾಣಿಕೆ ಮತ್ತು ಆಹಾರ ಸಂಸ್ಕರಣೆಯಂತಹ ಕೆಲಸಗಳನ್ನು ಹುಡುಕಬೇಕು ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಇಂದು ಅವರು ಮೂರು ದಿನಗಳ ಕೃಷಿ ಉನ್ನತಿ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಮೇ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ರೈತರ ಅಭಿವೃದ್ಧಿಗೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 2022ರ ವೇಳೆಗೆ ರೈತರ ಆದಾಯಗಳನ್ನು ದುಪ್ಪಟ್ಟು ಹೆಚ್ಚಿಸಲು ಹೊಸ ವಿಮಾ ಯೋಜನೆ ಮತ್ತು ರೈತರಿಗೆ ಮಣ್ಣು ಆರೋಗ್ಯ ಕಾರ್ಡು ಮೊದಲಾದ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇತ್ತೀಚಿನ ಸರ್ಕಾರಿ ದಾಖಲೆಗಳ ಪ್ರಕಾರ, 2012-13 ಬೆಳೆ ವರ್ಷದಲ್ಲಿ ದೇಶದ ರೈತರ ಸರಾಸರಿ ಆದಾಯ 6 ಸಾವಿರದ 426 ರೂಪಾಯಿಗಳಾಗಿದ್ದವು.
ಇದೇ ಸಂದರ್ಭದಲ್ಲಿ ಅವರು ಪೂರ್ವದ ರಾಜ್ಯಗಳಲ್ಲಿ ಎರಡನೇ ಹಸಿರು ಕ್ರಾಂತಿಗೆ ಕರೆ ನೀಡಿದರು. ಅಲ್ಲಿ ಸಾಕಷ್ಟು ನೀರು ಮತ್ತು ಫಲವತ್ತತೆ ಇದ್ದು ಆಧುನಿಕ ತಂತ್ರಜ್ಞಾನಗಳನ್ನು ಕೂಡ ಕೃಷಿಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದರು.
ದೇಶದಲ್ಲಿ 90 ನೀರಾವರಿ ಯೋಜನೆಗಳು ಹಾಗೆಯೇ ಉಳಿದುಕೊಂಡಿದ್ದು, ಇದರಿಂದ 80 ಲಕ್ಷ ಹೆಕ್ಟೇರ್ ಗೆ ನೀರಾವರಿ ಒದಗಿಸಬಹುದು. ನೀರಾವರಿ ಯೋಜನೆಗಳಿಗಾಗಿ ಸರ್ಕಾರ 20 ಸಾವಿರ ಕೋಟಿ ರೂಪಾಯಿ ಒದಗಿಸಲಿದೆ ಎಂದರು.
ನೀರುಗಳನ್ನು ಸಂಗ್ರಹಿಸಿಡಲು ಕೊಳಗಳ ನಿರ್ಮಾಣಕ್ಕೆ ಮನ್ರೇಗಾ ಕಾರ್ಯಕ್ರಮ ಹಣವನ್ನು ಈ ಬೇಸಿಗೆಯಲ್ಲಿ ಬಳಸಿಕೊಳ್ಳಲಾಗುವುದು. ಕೃಷಿಗಾಗಿ ರೈತರು ಮಾಡುತ್ತಿರುವ ಖರ್ಚನ್ನು ಕಡಿಮೆಮಾಡಿ ಅವರ ಆದಾಯವನ್ನು ಹೆಚ್ಚಿಸಲು ಸೂಕ್ಷ್ಮ ಮತ್ತು ಹನಿ ನೀರಾವರಿ ಹಾಗೂ ದ್ರವ ರಸಗೊಬ್ಬರವನ್ನು ಬಳಸುವಂತೆ ಪ್ರೋತ್ಸಾಹಿಸಲಾಗುವುದು. ನೀರಿನ ಸಂರಕ್ಷಣೆಯಷ್ಟೇ ನೀರು ಕೊಯ್ಲು ಕೂಡ ಮುಖ್ಯವಾದದ್ದು. ನಮಗೆ ನೀರನ್ನು ಪೋಲು ಮಾಡುವ ಹಕ್ಕು ಇಲ್ಲ. ಪ್ರತಿ ಹನಿಗೆ ಹೆಚ್ಚು ಬೆಳೆಯನ್ನು ನಾವು ತೆಗೆಯಬಹುದು ಎಂದರು ಪ್ರಧಾನಿ.
ರೈತರು ತಮ್ಮ ಜೀವನೋಪಾಯ ಸುಧಾರಣೆಗಾಗಿ ಪಶು ಸಂಗೋಪನೆ, ಮರ ಬೆಳೆಯುವಿಕೆ ಮತ್ತು ಆಹಾರ ಸಂಸ್ಕರಣೆಯಂತಹ ಕೆಲಸಗಳನ್ನು ಮಾಡಬೇಕು ಎಂದು ಕರೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


