ರಾಜೀವ್ ಹಂತಕಿ ನಳಿನಿಗೆ 1 ದಿನದ ಪೆರೋಲ್
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿ ಆಜೀವ ಜೈಲು ಶಿಕ್ಷೆಗೆ ಗುರಿಯಾಗಿರುವ ನಳಿನಿ ಶ್ರೀಹರನ್ ಗೆ ನ್ಯಾಯಾಲಯ 24 ಗಂಟೆಗಳ ಪೆರೋಲ್ ಮಂಜೂರು ಮಾಡಿದೆ...

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿ ಆಜೀವ ಜೈಲು ಶಿಕ್ಷೆಗೆ ಗುರಿಯಾಗಿರುವ ನಳಿನಿ ಶ್ರೀಹರನ್ ಗೆ ನ್ಯಾಯಾಲಯ 24 ಗಂಟೆಗಳ ಪೆರೋಲ್ ಮಂಜೂರು ಮಾಡಿದೆ.
ಕಳೆದ ತಿಂಗಳು ಮೃತರಾದ ನಳಿನಿ ತಂದೆಯ ಪುಣ್ಯತಿಥಿ ಇದೇ ಮಾರ್ಚ್ 9ರಂದು ನೆರವೇರಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 3 ದಿನಗಳ ಪೆರೋಲ್ ನೀಡಬೇಕು ಎಂದು ನಳಿನಿ ಪರ ವಕೀಲರು ಮದ್ರಾಸ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ 1 ದಿನದ ಮಟ್ಟಿಗೆ ನಳಿನಿಗೆ ಪೆರೋಲ್ ಮಂಜೂರು ಮಾಡಿದೆ.
ಮಾರ್ಚ್ 2ರಂದೇ ಜೈಲಿನಿಂದ ನಳಿನಿ ಅರ್ಜಿ ಸಲ್ಲಿಸಿದ್ದು, ವೆಲ್ಲೂರು ಜೈಲಿನ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ನಳಿನಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನಳಿನಿಗೆ 24 ಗಂಟೆಗಳ ಪೆರೋಲ್ ಮಂಜೂರು ಮಾಡಿದೆ. ನಳಿನಿ ತಂದೆ ಶಂಕರನಾರಾಯಣ ಅವರು ನಿಧನರಾದ ಹಿನ್ನಲೆಯಲ್ಲಿ ಕಳೆದ ಫೆಬ್ರವರಿ 24 ರಂದು ನಳಿನಿಗೆ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಳ್ಳಲು ನ್ಯಾಯಾಲಯ 12 ಗಂಟೆಗಳ ಪೆರೋಲ್ ನೀಡಿತ್ತು.
ನಳಿನಿ ತಂದೆ ಶಂಕರನಾರಾಯಣನ್ ಅವರ 16ನೇ ದಿನದ ಪುಣ್ಯತಿಥಿ ಇದೇ ಮಾರ್ಚ್ 9ರಂದು ಕೊಟ್ಟೂರಿನಲ್ಲಿ ನಡೆಯಲಿದೆ.
ತಮಿಳುನಾಡಿನ ಶ್ರೀಪೆರಂಬದೂರ್ ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಎಲ್ ಟಿಟಿಇ ಸಂಘಟನೆ ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ಹತ್ಯೆ ಮಾಡಿತ್ತು. ಪ್ರಕರಣ ಸಂಬಂಧ ಬಂಧಿತರಾಗಿದ್ದ ನಳಿನಿ ಮತ್ತು ಇತರೆ ಸಹಚರರಿಗೆ ನ್ಯಾಯಾಲಯ 1998 ಜನವರಿ 24ರಂದು ಮರಣದಂಡನೆ ಶಿಕ್ಷೆ ವಿಧಿಸಿತ್ತು. ತಮಿಳುನಾಡು ರಾಜ್ಯಪಾಲರು 2000 ಏಪ್ರಿಲ್ 24ರಂದು ನಳಿನಿ ಶಿಕ್ಷೆಯನ್ನು ಮರಣದಂಡನೆಯಿಂದ ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


