ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಿಯಾಂಕಾ ಸಕ್ರಿಯ ಪಾತ್ರ?
ರಾಷ್ಟ್ರ ರಾಜಕಾರಣದ ದಿಕ್ಸೂಚಿ ಬದಲಾಯಿಸುವುದೆಂದೇ ನಂಬಲಾಗಿರುವ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ...

ನವದೆಹಲಿ: ಭಾರತೀಯ ಮಿಲಿಟರಿ ಸೇನೆಯ ದಿಲ್ಲಿ ಚಲೋ ಭಾರೀ ಸುದ್ದಿಯಾಗಿತ್ತು. ಈಗ ಲಕ್ನೋ ಚಲೋ ಎಂಬ ಸ್ಲೋಗನ್ ಎಲ್ಲೆಡೆ ಕೇಳಿಬರುತ್ತಿದೆ. ರಾಷ್ಟ್ರ ರಾಜಕಾರಣದ ದಿಕ್ಸೂಚಿ ಬದಲಾಯಿಸುವುದೆಂದೇ ನಂಬಲಾಗಿರುವ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಬಹಳ ಮುಖ್ಯವಾಗಿದೆ ಎನ್ನಬಹುದು.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಉತ್ತರ ಪ್ರದೇಶ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ಕಳೆದ ವಾರ ಅಲಹಾಬಾದ್ ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿದ್ದು, ಕಾಂಗ್ರೆಸ್ ನ ಅಧಿವೇಶನ ಲಕ್ನೋದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಕೆಲವು ಘೋಷಣೆಗಳು ಪ್ರಕಟಗೊಳ್ಳುವ ನಿರೀಕ್ಷೆಯಿದೆ.
ಉತ್ತರ ಪ್ರದೇಶದಲ್ಲಿ ಹೇಗಾದರೂ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಕಳೆದ ವಾರವಷ್ಟೇ ಗುಲಾಂ ನಬಿ ಆಜಾದ್ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ವಹಿಸಿತ್ತು.ಇನ್ನು ರಾಜ್ಯಾದ್ಯಂತ ಪ್ರಚಾರಕ್ಕೆ ಪ್ರಿಯಾಂಕಾ ಗಾಂಧಿ ಸಕ್ರಿಯವಾಗಿ ಇಳಿಯುತ್ತಾರೆ ಎಂಬ ಮಾತುಗಳು ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದೆ.
ಪ್ರಿಯಾಂಕಾ ಗಾಂಧಿ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರವನ್ನು ಬಿಟ್ಟು ಆಚೆ ಬಂದು ರಾಜ್ಯಾದ್ಯಂತ ಪ್ರಚಾರ ನಡೆಸಬೇಕು.ಕಾರ್ಯಕರ್ತರ ಆಶಯದಂತೆ ಪ್ರಿಯಾಂಕಾ ಅವರು ಈ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ, ಆದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ ಎನಿಸುತ್ತದೆ ಎನ್ನುತ್ತಾರೆ ಗುಲಾಂ ನಬಿ ಆಜಾದ್.
ರಾಜ್ಯ ಉಸ್ತುವಾರಿ ವಹಿಸಿಕೊಂಡ ನಂತರ ನಿನ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಆಜಾದ್, ಸೋನಿಯಾರ ಪುತ್ರಿ ಪ್ರಿಯಾಂಕಾ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಕೆಲಸವನ್ನು ಹಂಚಿಕೊಳ್ಳಲು ಪ್ರಿಯಾಂಕಾರವರು ಸಾಥ್ ನೀಡುತ್ತಾರೆ ಎಂದು ನಾವು ನಂಬಿದ್ದೇವೆ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಅಖಾಡಕ್ಕೆ: ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಚಾರಕ್ಕೆ ಪ್ರಿಯಾಂಕಾರವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಆಲೋಚನೆಯನ್ನು ಮೊದಲು ತೇಲಿಸಿಬಿಟ್ಟವರು ಪಕ್ಷದ ಚುನಾವಣೆ ಸಮೀಕ್ಷಕ ಪ್ರಶಾಂತ್ ಕಿಶೋರ್. ಅದು ಕಾಂಗ್ರೆಸ್ ಹೈಕಮಾಂಡ್ ಗೆ ಕೂಡ ಹಿಡಿಸಿದಂತಿದೆ. ಹಾಗಾಗಿ ಪ್ರಿಯಾಂಕಾ ವಾದ್ರಾ ರಾಜ್ಯದಲ್ಲಿ ಪಕ್ಷದ ಮುಖ್ಯ ಪ್ರಚಾರಕರಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಗುಲಾಂ ನಬಿ ಆಜಾದ್ ರಾಹುಲ್ ಗಾಂಧಿ ಜೊತೆ ಸಭೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ.
ಈ ಪ್ರಸ್ತಾಪಕ್ಕೆ ಪ್ರಿಯಾಂಕಾ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇಷ್ಟು ದಿನ ತೆರೆಯ ಹಿಂದೆ ತನ್ನ ತಾಯಿ ಮತ್ತು ಅಣ್ಣನಿಗೆ ಸಹಾಯ ಮಾಡುತ್ತಿದ್ದ, ಆರಂಭದಲ್ಲಿ ಈ ಪ್ರಸ್ತಾಪಕ್ಕೆ ಒಪ್ಪದಿದ್ದ ಪ್ರಿಯಾಂಕಾ ಗಾಂಧಿ ಇದೀಗ ಅಸ್ತು ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಇಂಬು ನೀಡುವಂತೆ ಪ್ರಿಯಾಂಕಾ ಅವರ ಫೇಸ್ ಬುಕ್ ಖಾತೆ ಇತ್ತೀಚೆಗೆ ಹೆಚ್ಚು ಸಕ್ರಿಯವಾಗಿದ್ದು, ಅಲ್ಲಿ ಗಾಂಧಿ ಕುಟುಂಬದ ಅಪರೂಪದ ಫೋಟೋಗಳನ್ನು ಮತ್ತು ತಮ್ಮ ಸ್ವಂತ ಚುನಾವಣಾ ಪ್ರಚಾರದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಗುಲಾಂ ನಬಿ ಆಜಾದ್ ಸದ್ಯದಲ್ಲಿಯೇ ಉತ್ತರ ಪ್ರದೇಶದಲ್ಲಿ ಎರಡು ದಿನಗಳ ಕಾಲ ಪ್ರವಾಸ ಮಾಡಿ ಜನರ ನಾಡಿಮಿಡಿತ ಅರ್ಥ ಮಾಡಿಕೊಳ್ಳಲಿದ್ದಾರೆ. ನಂತರ ಕಾಂಗ್ರೆಸ್ ಅಧಿವೇಶನ ಲಕ್ನೋದಲ್ಲಿ ನಡೆಯಲಿದೆ. ಪಕ್ಷ ಜಿತಿನ್ ಪ್ರಸಾದ್ ಅವರನ್ನು ರಾಜ್ಯದ ಪಕ್ಷದ ಉಸ್ತುವಾರಿಯನ್ನಾಗಿ ನೇಮಿಸುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


