ದಕ್ಷಿಣ ಚೀನಾ ಸಮುದ್ರ ವಿವಾದ: ಫಿಲಿಪೈನ್ಸ್ ಪರ ತೀರ್ಪನ್ನು ಒಪ್ಪಿಕೊಳ್ಳುವಂತೆ ಚೀನಾಗೆ ಭಾರತದ ಸಲಹೆ
ದಕ್ಷಿಣ ಚೀನಾ ಸಮುದ್ರ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ವಿರುದ್ಧ ವಿಶ್ವಸಂಸ್ಥೆಯ ನ್ಯಾಯಮಂಡಳಿಯ ತೀರ್ಪನ್ನು ಗೌರವಿಸುವಂತೆ ಭಾರತ ಚೀನಾಗೆ ಸಲಹೆ ನೀಡಿದೆ.

ನವದೆಹಲಿ: ದಕ್ಷಿಣ ಚೀನಾ ಸಮುದ್ರ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ವಿರುದ್ಧ ವಿಶ್ವಸಂಸ್ಥೆಯ ನ್ಯಾಯಮಂಡಳಿ ನೀಡಿರುವ ತೀರ್ಪಿನ ಬಗ್ಗೆ ಭಾರತ ನಿರೀಕ್ಷಿತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದು ನ್ಯಾಯಮಂಡಳಿಯ ತೀರ್ಪನ್ನು ಗೌರವಿಸುವಂತೆ ಚೀನಾಗೆ ಸಲಹೆ ನೀಡಿದೆ.
ಫಿಲಿಪೈನ್ಸ್ ದಕ್ಷಿಣ ಚೀನಾ ಸಮುದ್ರದಲ್ಲಿ ನಡೆಸುತ್ತಿರುವ ಚಟುವಟಿಕೆಗಳನ್ನು ವಿರೋಧಿಸಿ ಫಿಲಿಪೈನ್ಸ್ ವಿಶ್ವಸಂಸ್ಥೆಯ ಅಂಗವಾಗಿರುವ ಯುಎನ್ ಸಿಎಲ್ ಒಎಸ್ ನಲ್ಲಿ ದಾವೆ ಹೂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ವಿಶ್ವ ಸಂಸ್ಥೆ ನ್ಯಾಯಮಂಡಳಿ ಚೀನಾಗೆ ದಕ್ಷಿಣ ಚೀನಾ ಸಮುದ್ರದ ಮೇಲೆ ಐತಿಹಾಸಿಕ ಹಕ್ಕು ಇಲ್ಲ ಎಂದು ಹೇಳಿತ್ತು. ವಿಶ್ವಸಂಸ್ಥೆ ನ್ಯಾಯಮಂಡಳಿ ನೀಡಿರುವ ತೀರ್ಪನ್ನು ಒಪ್ಪಿಕೊಳ್ಳಲು ಚೀನಾ ನಿರಾಕರಿಸಿದ್ದು ತೀರ್ಪನ್ನು ಹಾಸ್ಯಾಸ್ಪದ ಎಂದು ವ್ಯಾಖ್ಯಾನಿಸಿತ್ತು.
ದಕ್ಷಿಣ ಚೀನಾ ಸಮುದ್ರದಲ್ಲಿ 5 ಟ್ರಿಲಿಯನ್ ಡಾಲರ್ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದು, ಇಲ್ಲಿ ಚೀನಾಗೆ ಐತಿಹಾಸಿಕ ಹಕ್ಕು ಇಲ್ಲ ಎಂಬ ತೀರ್ಪು ಬಂದಿರುವುದು ಚೀನಾಗೆ ಭಾರಿ ಹಿನ್ನಡೆಯಾಗಿದೆ. ತೀರ್ಪಿನ ಬಗ್ಗೆ ಪ್ರರಿಕ್ರಿಯೆ ನೀಡಿರುವ ಭಾರತ, ದಕ್ಷಿಣ ಚೀನಾ ಸಮುದ್ರದಲ್ಲಿ ನೌಕಾಯಾನದ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದು, ಯುಎನ್ ಸಿಎಲ್ ಒಎಸ್ ನ ಸದಸ್ಯ ರಾಷ್ಟ್ರವಾಗಿರುವ ಚೀನಾ, ಯುಎನ್ ಸಿಎಲ್ ಒಎಸ್ ನ್ಯಾಯಮಂಡಳಿ ನೀಡಿರುವ ತೀರ್ಪನ್ನು ಗೌರವಿಸಬೇಕು ಎಂದು ಅಧಿಕೃತ ಹೇಳಿಕೆ ಮೂಲಕ ಸಲಹೆ ನೀಡಿದೆ.
ವಿಶ್ವ ಸಂಸ್ಥೆ ತೀರ್ಪು ಪ್ರಕಟವಾಗುತ್ತಿದ್ದಂತೆ, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಿಯಂತ್ರಿಸುತ್ತಿರುವ ವಿವಾದಾತ್ಮಕ ಜಲಪ್ರದೇಶಗಳಲ್ಲಿ ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು ಅಮೆರಿಕ ವಿಮಾನ ನೌಕೆಯ ದಾಳಿ ಗುಂಪುಗಳನ್ನು ಸ್ಥಳಕ್ಕೆ ಕಳಿಸಿದೆ. ಚೀನಾ ಸಹ ಇದಕ್ಕೆ ಪ್ರತಿತಂತ್ರ ರೂಪಿಸಿದ್ದು, ಫಿಲಿಪೈನ್ಸ್ ಹಾಗೂ ಇನ್ನಿತರ ಸಣ್ಣ ರಾಷ್ಟ್ರಗಳು ಚೀನಾ ನಿಯಂತ್ರಣವನ್ನು ವಿರೋಧಿಸುತ್ತಿದ್ದ ಜಲಪ್ರದೇಶದಲ್ಲಿ ನಿರ್ಮಿಸಲಾಗಿರುವ ಕೃತಕ ದ್ವೀಪಗಳಲ್ಲಿ ಎರಡು ವಾಯುನೆಲೆಗಳನ್ನು ಪರೀಕ್ಷಾರ್ಥವಾಗಿ ಬಳಕೆ ಮಾಡಿದೆ ಈ ಮೂಲಕ ಚೀನಾ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಹಕ್ಕು ಪ್ರತಿಪಾದನೆ ಮಾಡಲು ಮುಂದಾಗಿದೆಯಾದರೂ, ಅಮೆರಿಕ, ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಚೀನಾಗೆ ನ್ಯಾಯಮಂಡಳಿಯ ತೀರ್ಪನ್ನು ಒಪ್ಪಿಕೊಳ್ಳುವಂತೆ ಸಲಹೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


