ಉತ್ತರಾಖಂಡದಲ್ಲಿ ಮತ್ತೆ ಭಾರಿ ಮಳೆ; ರಕ್ಷಣಾ ಕಾರ್ಯಾಚರಣೆಗೆ ತೀವ್ರ ಹಿನ್ನಡೆ
ಮೇಘಸ್ಫೋಟದಿಂದ ಪ್ರವಾಹದಲ್ಲಿ ಸಿಲುಕಿರುವ ಉತ್ತರಾಖಂಡ ಜನತೆಗೆ ಭಾನುವಾರ ಬೆಳಗ್ಗಿನಿಂದಲೇ ಆರಂಭವಾಗಿರುವ ಭಾರಿ ಮಳೆ ಮತ್ತಷ್ಟು ಸಂಕಷ್ಟ ತಂದೊಡ್ಡಿದ್ದು, ಜಲಾವೃತ್ತ ಪ್ರದೇಶಗಳಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿದೆ...

ಡೆಹ್ರಾಡೂನ್: ಮೇಘಸ್ಫೋಟದಿಂದ ಪ್ರವಾಹದಲ್ಲಿ ಸಿಲುಕಿರುವ ಉತ್ತರಾಖಂಡ ಜನತೆಗೆ ಭಾನುವಾರ ಬೆಳಗ್ಗಿನಿಂದಲೇ ಆರಂಭವಾಗಿರುವ ಭಾರಿ ಮಳೆ ಮತ್ತಷ್ಟು ಸಂಕಷ್ಟ ತಂದೊಡ್ಡಿದ್ದು, ಜಲಾವೃತ್ತ ಪ್ರದೇಶಗಳಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿದೆ.
ಭಾನುವಾರ ಬೆಳಗ್ಗಿನಿಂದಲೇ ಉತ್ತರಾಖಂಡದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರಮುಖ ಹೆದ್ದಾರಿಗಳು ಮತ್ತು ಪ್ರಮುಖ ಯಾತ್ರಾ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳು ಭೂಕುಸಿತದಿಂದಾಗಿ ಸ್ಥಗಿತಗೊಂಡಿವೆ. ಹೀಗಾಗಿ ಚಾರ್ ಧಾಮ್ ಯಾತ್ರೆ ಬಹುತೇಕ ಸ್ಥಗಿತವಾಗಿದ್ದು, ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳು ಇದೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ. ಚಮೋಲಿ-ಭದ್ರಿನಾಥ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 58 ಹಾಗೂ ಚಂಬಾ-ರಿಷಿಕೇಶ ಸಂಪರ್ಕಿಸುವ ರಾಷ್ಟ್ರೀಯ 94ರಲ್ಲಿ ಭೂಕುಸಿತ ಉಂಟಾಗಿ ಎರಡೂ ಹೆದ್ದಾರಿಗಳು ಸ್ಥಗಿತಗೊಂಡಿವೆ.
ಇನ್ನು ಈ ವರೆಗೂ ಉತ್ತರಾಖಂಡದಲ್ಲಿ ಸಂಭವಿಸಿದ ಮೇಘಸ್ಫೋಟಕ್ಕೆ ಸಾವನ್ನಪ್ಪಿದವರ ಸಂಖ್ಯೆ 38ಕ್ಕೇರಿಕೆಯಾಗಿದ್ದು, ಪಿಥೋರ್ ಘಡ ವೊಂದರಲ್ಲೇ 25 ಮಂದಿ ಶವಗಳ ದೊರೆತಿವೆ. ಇನ್ನು ಜಲಾವೃತ್ತ ಪ್ರದೇಶಗಳಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ಸತತ ಭಾರಿ ಮಳೆ ತೀವ್ರ ಅಡ್ಡಿಯುಂಟು ಮಾಡಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸೈನಿಕರೇ ಕೆಲ ಪ್ರದೇಶಗಳಲ್ಲಿ ಅಪಾಯಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.
ಮಳೆ ನಿಲ್ಲದ ಹೊರತು ರಕ್ಷಣಾ ಕಾರ್ಯಾಚರಣೆ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದು, ಮತ್ತೊಂದೆಡೆ ಕೇಂದ್ರ ಹವಾಮಾನ ಇಲಾಖೆ ಇನ್ನು 24 ಗಂಟೆಗಳಲ್ಲಿ ಮತ್ತೆ ಭಾರಿ ಮಳೆ ಸಂಭವಿಸುವ ಕುರಿತು ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಪ್ರಸ್ತುತ ಉತ್ತರಾಖಂದ ಪರಿಸ್ಥಿತಿ 2013 ಭೀಕರ ಪ್ರವಾಹ ಮತ್ತೆ ಮರುಕಳಿಸಲಿದೆಯೇ ಎಂಬ ಭೀತಿ ಹುಟ್ಟಿಸುತ್ತಿದೆ.
ಹಿಮಾಚಲ ಪ್ರದೇಶ, ಮಹಾರಾಷ್ಟ್ರದಲ್ಲೂ ಭಾರಿ ಮಳೆ
ಇದೇ ವೇಳೆ ಹಿಮಾಚಲ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಭಾರಿ ಮಳೆ ಬೀಳುತ್ತಿದ್ದು, ಹಿಮಾಚಲ ಪ್ರದೇಶದಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಪ್ರವಾಸಿಗರು ಪರದಾಡುವಂತಾಗಿದೆ. ಮುಂಬೈ ಗೇಟ್ ವೇ ಆಫ್ ಇಂಡಿಯಾದಲ್ಲಿ ಸಮುದ್ರದ ಅಲೆಗಳು ಮೇಲ್ಸೇತುವೆ ಮೇಲೆ ಅಪ್ಪಳಿಸುತ್ತಿವೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಗೇಟ್ ಆಫ್ ಇಂಡಿಯಾವನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ಭಾನುವಾರ ರಜೆಯನ್ನು ಕಳೆಯುವ ಸಲುವಾಗಿ ಅಲ್ಲಿಗೆ ಆಗಮಿಸಿದ್ದ ಪ್ರವಾಸಿಗರು ಹಾಗೆಯೇ ವಾಪಸ್ ಹೋಗುವಂತಾಗಿದೆ. ಇನ್ನು ತೀವ್ರ ಬರಗಾಲ ಎದುರಿಸಿದ್ದ ಪುಣೆ ಮತ್ತು ನಾಸಿಕ್ ನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇಲ್ಲಿ ರೈತರು ನಗುಮುಖದಿಂದ ತಮ್ಮ ಕೃಷಿ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


