ಪಾಂಪೊರೆ ದಾಳಿ: ಉಗ್ರರನ್ನು ಕರೆತಂದಿದ್ದ ಚಾಲಕನ ಗುರುತು ಪತ್ತೆ
ಎಂಟು ಸಿಬ್ಬಂದಿಯನ್ನು ಬಲಿ ಪಡೆದ ಜಮ್ಮು ಮತ್ತು ಕಾಶ್ಮೀರದ ಪಾಂಪೊರೆಯ ಸಿಆರ್ಪಿಎಫ್ ಬಸ್ ಮೇಲೆ ದಾಳಿ ನಡೆಸಿದ ನಾಲ್ವರು ಉಗ್ರರನ್ನು ಕರೆತಂದಿದ್ದ ಕಾರಿನ...

Published On :
ಶ್ರೀನಗರ: ಎಂಟು ಸಿಬ್ಬಂದಿಯನ್ನು ಬಲಿ ಪಡೆದ ಜಮ್ಮು ಮತ್ತು ಕಾಶ್ಮೀರದ ಪಾಂಪೊರೆಯ ಸಿಆರ್ಪಿಎಫ್ ಬಸ್ ಮೇಲೆ ದಾಳಿ ನಡೆಸಿದ ನಾಲ್ವರು ಉಗ್ರರನ್ನು ಕರೆತಂದಿದ್ದ ಕಾರಿನ ಚಾಲಕನ ಗುರುತು ಪತ್ತೆ ಹಚ್ಚಲಾಗಿದ್ದು, ಆತನ ಬಂಧನಕ್ಕೆ ವ್ಯಾಪಕ ಶೋಧ ನಡೆಸಲಾಗುತ್ತಿದೆ.
ಕಳೆದ ಜೂನ್ನಲ್ಲಿ ಉತ್ತರ ಕಾಶ್ಮೀರದ ಗುಲ್ಮಾರ್ಗ್ ಬಳಿ ಗಡಿ ನಿಯಂತ್ರಣ ರೇಖೆ ದಾಟಿ 4 ಲಷ್ಕರ್ ಎ ತೊಯಿಬಾ ಉಗ್ರರು ಭಾರತದೊಳಗೆ ನುಸುಳಿದ್ದರು. ಅವರನ್ನು ಶ್ರೀನಗರದಿಂದ 57 ಕಿ.ಮೀ. ದೂರದಲ್ಲಿರುವ ಬಾಬಾ ರೇಶಿ ಎಂಬ ಸ್ಥಳದಿಂದ ಟಾಟಾ ಸುಮೋ ವಾಹನದಲ್ಲಿ ಪುಲ್ವಾಮಕ್ಕೆ ಕರೆತರಲಾಗಿತ್ತು. ನಂತರ ಅವರನ್ನು ಪುಲ್ವಾಮದಲ್ಲಿ ಅಡಗಿಸಿಡಲಾಗಿತ್ತು. ಇದೇ ಉಗ್ರರು ಜೂನ್ 25 ರಂದು ಸಿಆರ್ಪಿಎಫ್ ಬಸ್ ಮೇಲೆ ದಾಳಿ ನಡೆಸಿ 8 ಯೋಧರನ್ನು ಹತ್ಯೆ ಮಾಡಿದ್ದರು ಮತ್ತು ಹಲವರನ್ನು ಗಾಯಗೊಳಿಸಿದ್ದರು.
ಘಟನೆ ನಡೆದ ನಂತರ ಕಾರಿನ ಚಾಲಕ ಮತ್ತು ಇಬ್ಬರು ಉಗ್ರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಕಾರಿನ ಚಾಲಕ ಬಹುದಿನಗಳಿಂದ ಉಗ್ರಗಾಮಿ ಚಟುವಟಿಕೆಗಳಿಗೆ ಸಹಕರಿಸುತ್ತಿದ್ದ ಎಂಬ ಮಾಹಿತಿ ಇದ್ದರೂ ಸಹ ಸಾಕ್ಷಾಧಾರಗಳ ಕೊರತೆಯಿಂದ ಆತನ ವಿರುದ್ಧ ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.
ಪುಲ್ವಾಮದಲ್ಲಿ ಉಳಿದುಕೊಂಡಿದ್ದ ಉಗ್ರರು ಹೆದ್ದಾರಿಯಲ್ಲಿ ಸಂಚರಿಸಿ ಬಸ್ ಮೇಲೆ ದಾಳಿ ನಡೆಸಲು ಸ್ಥಳವನ್ನು ನಿಗದಿಪಡಿಸಿಕೊಂಡಿದ್ದರು. ದಾಳಿ ನಡೆದ ದಿನವೇ ಯೋಧರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದರು. ನಂತರ ತಪ್ಪಿಸಿಕೊಂಡಿದ್ದ ಮೂರನೇ ಉಗ್ರನನ್ನು ಜೂನ್ 30ರಂದು ಪುಲ್ವಾಮದ ಮಾಲ್ವಾರಿ ನೇವಾ ಗ್ರಾಮದ ಬಳಿ ಹೊಡೆದುರುಳಿಸಿದ್ದರು. ನಾಲ್ಕನೇ ಉಗ್ರ ಮತ್ತು ಕಾರಿನ ಚಾಲಕನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


