ರೋಹಿತ್ ವೇಮುಲ ಆತ್ಮಹತ್ಯೆ ಖಂಡಿಸಿ ಪ್ರತಿಭಟನೆ: ಅಸ್ವಸ್ಥ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಖಂಡಿಸಿ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿರುವ ಆರು ಮಂದಿ ವಿದ್ಯಾರ್ಥಿಗಳನ್ನು...

ಹೈದರಾಬಾದ್: ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಖಂಡಿಸಿ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿ ಅಸ್ವಸ್ಥಕ್ಕೀಡಾಗಿದ್ದ ಆರು ಮಂದಿ ವಿದ್ಯಾರ್ಥಿಗಳನ್ನು ಬುಧವಾರ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಇನ್ನೊಂದೆಡೆ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ.
ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯವರ ನಿವಾಸಕ್ಕೆ ಪ್ರತಿಭಟನೆ ಮೂಲಕ ಸಾಗಿ ಘಟನೆ ಬಗ್ಗೆ ವಿವರಣೆ ನೀಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು.ದೇಶಾದ್ಯಂತ ಪ್ರತಿಭಟನೆಗೆ ವಿದ್ಯಾರ್ಥಿಗಳು ಕರೆ ನೀಡಿ ನಂತರ ವಿದ್ಯಾಲಯದ ಕ್ಯಾಂಪಸ್ ಹೊರಗೆ ಉಪ ಕುಲಪತಿಗಳ ಪ್ರತಿಕೃತಿ ದಹಿಸಿದರು.
ಪ್ರತಿಭಟನಾನಿರತ ಆರು ಮಂದಿ ವಿದ್ಯಾರ್ಥಿಗಳನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ರವೀಂದ್ರ ಕುಮಾರ್ ತಿಳಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಉಪವಾಸ ಸತ್ಯಾಗ್ರಹ ಆರಂಭಿಸಿದ ವಿದ್ಯಾರ್ಥಿ ಅದನ್ನು ಮುಂದುವರಿಸಿದ್ದಾನೆ.
ಇಂದು ಹಂಗಾಮಿ ಉಪ ಕುಲಪತಿ ವಿಪಿನ್ ಶ್ರೀ ವಾಸ್ತವ್ ಅವರ ನಿವಾಸಕ್ಕೆ ಪ್ರತಿಭಟನೆ ಮೂಲಕ ಸಾಗಿದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿರುದ್ಧ ಘೋಷಣೆ ಕೂಗಿದರು. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಎದುರಿಸಲಾಗದೆ ಉಪ ಕುಲಪತಿ ವಿಸಿ ಆಪ್ಪಾ ರಾವ್ ರಜೆ ಮೇಲೆ ತೆರಳಿರುವುದರಿಂದ ಶ್ರೀ ವಾಸ್ತವ್ ಅವರ ಸ್ಥಾನವನ್ನು ಹಂಗಾಮಿಯಾಗಿ ನಿರ್ವಹಿಸುತ್ತಿದ್ದಾರೆ.
ಆದರೆ ವಿಪಿನ್ ಶ್ರೀವಾಸ್ತವ್ ಅವರ ನೇಮಕವನ್ನು ವಿದ್ಯಾರ್ಥಿಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಉದ್ಯೋಗಿಗಳು ವಿರೋಧಿಸುತ್ತಿದ್ದಾರೆ. ಶ್ರೀ ವಾಸ್ತವ್ ಅವರು ಕಾರ್ಯಕಾರಿ ಮಂಡಳಿಯ ಉಪ ಸಮಿತಿಯ ನೇತೃತ್ವ ವಹಿಸಿದ್ದು, ಅವರ ನಿರ್ಧಾರವೇ ರೋಹಿತ್ ಸಾವಿಗೆ ಕಾರಣವಾಗಿದೆ. ಅವರು 2008ರಲ್ಲಿ ಮತ್ತೊಬ್ಬ ದಲಿತ ವಿದ್ಯಾರ್ಥಿಯ ಸಾವಿಗೆ ಕೂಡ ಕಾರಣರಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವಂತೆ ಶ್ರೀವಾಸ್ತವ್ ನಿನ್ನೆಯಷ್ಟೇ ಹೊಸದಾಗಿ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ರೋಹಿತ್ ವೇಮುಲ ಮೊನ್ನೆ ಕಳೆದ 17ರಂದು ಹೈದರಾಬಾದ್ ವಿಶ್ವವಿದ್ಯಾಲಯದ ಹಾಸ್ಟೆಲ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆಗೆ ಹೈದರಾಬಾದ್ ಸೇರಿದಂತೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಭಾರೀ ಸದ್ದು ಮಾಡಿದೆ.
ಎಬಿವಿಪಿ ಮುಖಂಡರೊಬ್ಬರ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ರೋಹಿತ್ ಮತ್ತು ಇತರ ನಾಲ್ವರು ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಾಗ ಅದಕ್ಕೆ ರಾಜಕೀಯ ಬೆಂಬಲ ಸಿಕ್ಕಿತು.ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷದವರು ಬೆಂಬಲ ಸೂಚಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


