11 ದಿನದಲ್ಲಿ 10 ಉಗ್ರರ ಕೊಂದು ಹುತಾತ್ಮನಾದ ಧೀರಯೋಧನಿಗೆ "ಅಶೋಕ ಚಕ್ರ" ಗೌರವ
ಕೇವಲ 11 ದಿನದಲ್ಲಿ ಬರೋಬ್ಬರಿ 10 ಉಗ್ರಗಾಮಿಗಳನ್ನು ಕೊಂದ ಧೀರ ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿ ಅವರಿಗೆ ಮಂಗಳವಾರ ಅಶೋಕ ಚಕ್ರ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು...

ನವದೆಹಲಿ: ಕೇವಲ 11 ದಿನದಲ್ಲಿ ಬರೋಬ್ಬರಿ 10 ಉಗ್ರಗಾಮಿಗಳನ್ನು ಕೊಂದ ಧೀರ ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿ ಅವರಿಗೆ ಮಂಗಳವಾರ ಅಶೋಕ ಚಕ್ರ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ನವದೆಹಲಿಯಲ್ಲಿ ನಡೆದ 67ನೇ ಗಣರಾಜ್ಯೋತ್ಸವ ದಿನಾಚರಣೆಯಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿ ಅವರ ಪರವಾಗಿ ಪತ್ನಿ ಭಾವನಾ ಗೋಸ್ವಾಮಿ ಅವರು ಅಶೋಕ ಚಕ್ರ ಪದಕ ಸ್ವೀಕರಿಸಿದರು. ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿ ಅವರು ಕಳೆದ ಸೆಪ್ಟೆಂಬರ್ 2ರಂದು ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದ ಉಗ್ರ ವಿರುದ್ಧ ಕಾರ್ಯಾಚರಣೆಯಲ್ಲಿ ವೀರಮರಣವನ್ನಪ್ಪಿದ್ದರು.
10 ಉಗ್ರರನ್ನು ಕೊಂದು ಸೈನಿಕರನ್ನು ರಕ್ಷಿಸಿದ್ದ ವೀರ ಯೋಧ ಲ್ಯಾನ್ಸ್ ನಾಯಕ್
ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಫ್ರುದಾ ಅರಣ್ಯ ಪ್ರದೇಶದಲ್ಲಿ ಉಗ್ರರ ಸಮೂಹವೊಂದು ಅಡಗಿರುವ ಕುಳಿತು ಮಾಹಿತಿ ಪಡೆದ ಗಡಿ ಭದ್ರತಾ ಪಡೆಯ ಯೋಧರು ಕೂಡಲೇ ಸ್ಥಳಕ್ಕೆ ಧಾವಿಸುತ್ತಾರೆ. ಈ ವೇಳೆ ಉಗ್ರರು ಮತ್ತು ಭಾರತೀಯ ಸೇನೆಯ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತದೆ. ಘಟನೆಯಲ್ಲಿ ಮೂವರು ಸೈನಿಕರು ತೀವ್ರವಾಗಿ ಗಾಯಗೊಂಡು ಅಲ್ಲಿಯೇ ಪ್ರಾಣಾಪಾಯದಲ್ಲಿ ಸಿಲುಕುತ್ತಾರೆ. ಈ ವಿಚಾರ ತಿಳಿದ ಭಾರತೀಯ ಸೇನೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳುವಂತೆ ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿ ನೇತೃತ್ವ ತಂಡಕ್ಕೆ ಸೂಚಿಸುತ್ತಾರೆ.
ಅಧಿಕಾರಿಗಳ ಸೂಚನೆ ಅನ್ವಯ ಘಟನಾ ಸ್ಥಳಕ್ಕೆ ದೌಡಾಯಿಸಿದ ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿ ಅವರು, ಉಗ್ರರೊಂದಿಗೆ ಕಾದಾಟಕ್ಕೆ ಇಳಿಯುತ್ತಾರೆ. ಸತತ 2 ಗಂಟೆಗಳ ಗುಂಡಿನ ಚಕಮಕಿಯಲ್ಲಿ ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿ ಅವರು ಇಬ್ಬರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗುತ್ತಾರೆಯಾದರೂ, ಉಗ್ರರು ಹಾರಿಸಿದ 5-6 ಗುಂಡುಗಳು ಲ್ಯಾನ್ಸ್ ನಾಯಕ್ ಅವರ ದೇಹವನ್ನು ಹೊಕ್ಕಿರುತ್ತದೆ. ತಮಗಾದ ಗಂಭೀರಗಾಯಗಳನ್ನು ಕೂಡ ಲೆಕ್ಕಿಸದ ಲ್ಯಾನ್ಸ್ ನಾಯಕ್ ಅವರು, ಗಾಯಗೊಂಡಿದ್ದ ತಮ್ಮ ಮೂವರು ಸ್ನೇಹಿತರನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ. ಗಾಯಗೊಂಡ ಸೈನಿಕರು ಬದುಕುಳಿಯುತ್ತಾರೆಯಾದರೂ, ತೀವ್ರವಾಗಿ ಗಾಯಗೊಂಡಿದ್ದ ಲ್ಯಾನ್ಸ್ ನಾಯಕ್ ಅವರು ಸೇನಾಸ್ಪತ್ರೆಯಲ್ಲಿ ಸಾವನ್ನಪ್ಪುತ್ತಾರೆ.
ಮೂಲತಃ ಉತ್ತರಾಖಂಡ ರಾಜ್ಯದವರಾದ ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿ ಅವರು, ಪತ್ನಿ ಮತ್ತು 7 ವರ್ಷದ ಮಗಳನ್ನು ಅಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


