ದೇಶ

ಕೇಜ್ರಿವಾಲ್ ಮತ್ತು ಇತರರು ತಪ್ಪು ಹೇಳಿಕೆ ನೀಡಿದ್ದಾರೆ: ಅರುಣ್ ಜೇಟ್ಲಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಐವರು ಆಪ್ ನಾಯಕರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು...

ಕೇಜ್ರಿವಾಲ್ ಮತ್ತು ಇತರರು ತಪ್ಪು ಹೇಳಿಕೆ ನೀಡಿದ್ದಾರೆ: ಅರುಣ್ ಜೇಟ್ಲಿ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
Published On :

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಐವರು ಆಪ್ ನಾಯಕರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೂಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಇಂದು ದೆಹಲಿಯ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿದರು.

ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಂಜಯ್ ಖನಗ್ ವಾಲ್ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸುವಾಗ ಜೇಟ್ಲಿ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಐದು ಮಂದಿ ತಮ್ಮ ಮತ್ತು ತಮ್ಮ ಕುಟುಂಬದವರ ವಿರುದ್ಧ ತಪ್ಪಾದ ಮತ್ತು ಮಾನಹಾನಿಯಾಗುವ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದ ತಮ್ಮ ರಾಜಕೀಯ ವೃತ್ತಿ ಬದುಕಿಗೆ  ಹಾನಿಯುಂಟಾಗುತ್ತದೆ ಎಂದು ಹೇಳಿದರು.

ಬಿಗಿ ಭದ್ರತೆ ನಡುವೆ ಇಂದು ನ್ಯಾಯಾಲಯಕ್ಕೆ ಹಾಜರಾದ ಸಚಿವರು, ಕೇಜ್ರಿವಾಲ್ ಅವರೊಂದಿಗೆ ಕೆಲಸ ಮಾಡುತ್ತಿರುವವರ ವಿರುದ್ಧ ಸಿಬಿಐ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದು, ಅವರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ಹೇಳಿಕೆಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆಂದು ಕೋರ್ಟ್ ಮೂಲಗಳು ತಿಳಿಸಿವೆ.

ಯಾವುದೇ ಮಾಧ್ಯಮ ಪ್ರತಿನಿಧಿಗಳಿಗೆ ಕೋರ್ಟ್ ರೂಂ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಮುಚ್ಚಿದ ಬಾಗಿಲು ವಿಚಾರಣೆಗೆ ಕೇವಲ ನ್ಯಾಯಾಧೀಶರಿಗೆ ಮಾತ್ರ ಕೋರ್ಟ್ ಒಳ ಹೋಗಲು ಅವಕಾಶವಿತ್ತು.

ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಇತರ ಐದು ಮಂದಿ ಆಪ್ ನಾಯಕರಾದ ಕುಮಾರ್ ವಿಶ್ವಾಸ್, ಆಶುತೋಷ್, ಸಂಜಯ್ ಸಿಂಗ್, ರಾಘವ್ ಚದ ಮತ್ತು ದೀಪಕ್ ಬಾಜ್ ಪೈ ಅವರ ವಿರುದ್ಧ ಅರುಣ್ ಜೇಟ್ಲಿಯವರು ಡಿಸೆಂಬರ್ 21ರಂದು ಭಾರತೀಯ ದಂಡಸಂಹಿತೆ 499, 500, 501 ಮತ್ತು 502ರಡಿಯಲ್ಲಿ ಅಪರಾಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು.ತಮ್ಮ ವಿರುದ್ಧ ಕಾನೂನುಬಾಹಿರವಾಗಿ ಆರೋಪಗಳನ್ನು ಮಾಡುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ದೆಹಲಿಯ ಗೃಹ ಸಚಿವಾಲಯದ ಅಧಿಕಾರಿಗಳ ಕಚೇರಿ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ಡಿಸೆಂಬರ್  15ರಂದು ದಾಳಿ ನಡೆಸಿದ ನಂತರ ಡಿಸೆಂಬರ್ 20ರವರೆಗೆ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಬಂದ ವರದಿಗಳು, ಕೇಜ್ರಿವಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಅಭಿಪ್ರಾಯಗಳ ವರದಿಗಳನ್ನು ಜೇಟ್ಲಿ ಇದೇ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.