ಜೆಎನ್‌ಯು ವಿವಾದ: ಕಾಶ್ಮೀರದ ವಿದ್ಯಾರ್ಥಿಗಳಿಗೆ ಭಯದ ವಾತಾವರಣ?
ಪ್ರಸ್ತುತ ವಿವಿಯಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ನಡೆಸುವ ಪ್ರತಿಭಟನೆಗೂ ಈ ವಿದ್ಯಾರ್ಥಿಗೂ ಏನೂ ಸಂಬಂಧಿವಿಲ್ಲ. ಈತ ಯಾವುದೇ ಪ್ರತಿಭಟನೆಯಲ್ಲಿಯೂ...

Published On :
ನವದೆಹಲಿ: ಧನೀಷ್ (ಹೆಸರು ಬದಲಿಸಲಾಗಿದೆ), ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹುಡುಗ. ಜವಾಹರ್‌ಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ. ಫೆ. 9ರಂದು ವಿವಿಯಲ್ಲಿ ದೇಶದ್ರೋಹ ವಿವಾದ ಭುಗಿಲೆದ್ದ ನಂತರ ಈತ ಅಲ್ಲಿನ ಹಾಸ್ಟೆಲ್ ಬದಲಾಯಿಸಿದ್ದಾನೆ.
ಪ್ರಸ್ತುತ ವಿವಿಯಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ನಡೆಸುವ ಪ್ರತಿಭಟನೆಗೂ ಈ ವಿದ್ಯಾರ್ಥಿಗೂ ಏನೂ ಸಂಬಂಧಿವಿಲ್ಲ. ಈತ ಯಾವುದೇ ಪ್ರತಿಭಟನೆಯಲ್ಲಿಯೂ ತೊಡಗಿಸಿಕೊಂಡೂ ಇಲ್ಲ. ಆದರೆ ಕಾಶ್ಮೀರದ 30-35 ವಿದ್ಯಾರ್ಥಿಗಳು ಇಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಎಂದು ಯಾರಾದರೂ ಏನಾದರೂ ಮಾಡಿದರೆ ಎಂಬ ಭಯದಿಂದ ಕೆಲವೊಂದು ವಿದ್ಯಾರ್ಥಿಗಳು ಈಗಾಗಲೇ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.
ವಿವಿಯಲ್ಲಿ ಇಂಥಾ ಪ್ರತಿಭಟನೆಗಳ ಆರಂಭವಾಗಿನಂದಿನಿಂದ ಕಾಶ್ಮೀರಿ ವಿದ್ಯಾರ್ಥಿಗಳ ಮನಸಲ್ಲಿ ಭಯ ಆವರಿಸಿ ಬಿಟ್ಟಿದೆ. ಸ್ವತಂತ್ರ ಕಾಶ್ಮೀರಕ್ಕಾಗಿ ಎದ್ದಿರುವ ದನಿಯೇ ಈ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
ಹಾಸ್ಟೆಲ್ ಮೇಲೆ ಯಾವಾಗ ದಾಳಿ ಮಾಡುತ್ತಾರೋ ಎಂಬ ಭಯದಿಂದ ಕಾಶ್ಮೀರಿ ಹುಡುಗರು ಹಾಸ್ಟೆಲ್ ಖಾಲಿ ಮಾಡಿದ್ದಾರೆ. ಭಯದಿಂದಾಗಿ ಇವರು ಕಾಲೇಜು ಕ್ಯಾಂಪಸ್ ಗೂ ಕಾಲಿಟ್ಟಿಲ್ಲ.
ಕಾಶ್ಮೀರ ಮೂಲದ ವಿದ್ಯಾರ್ಥಿಗಳ ಮೇಲೆ ಕಣ್ಣಿಟ್ಟಿರಬಹುದು ಎಂಬ ಭಯದಿಂದಲೇ ನಾನು ಕಾಲೇಜಿಗೆ ಹೋಗಿಲ್ಲ ಅಂತಾರೆ ಇಕಾನಾಮಿಕ್ಸ್ ವಿಭಾಗದ ವಿದ್ಯಾರ್ಥಿ.
ಕಳೆದ ವಾರ ನಡೆದ ಆಜಾದಿ ಪ್ರತಿಭಟನೆಯಲ್ಲಿ 5 ಮಂದಿ ಭಾಗವಹಿಸಿದ್ದರು. ಅದರಲ್ಲಿ ಯಾರೂ ಕಾಶ್ಮೀರದವರಿರಲಿಲ್ಲ.
ಅಫ್ಜಲ್ ಗುರು ಮತ್ತು ಆಜಾದಿ ಪ್ರತಿಭಟನೆ ಒತ್ತಟ್ಟಿಗಿರಲಿ, ಈ ಜೆಎನ್‌ಯು ವಿವಾದದಲ್ಲಿ ಕಾಶ್ಮೀರ ಕನೆಕ್ಷನ್ ಇದ್ದೇ ಇದೆ. ಇಲ್ಲಿನ ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷೆ ಶೆಹಲಾ ರಶೀದ್ ಶೋರಾ ಶ್ರೀನಗರದಳಾಗಿದ್ದಾಳೆ. ಈ ಪ್ರತಿಭಟನೆಗಳಲ್ಲಿ ಈಗಾಗಲೇ ಶೋರಾ ತಮ್ಮ ಭಾಷಣಗಳಿಂದ ಸುದ್ದಿಯಾಗಿದ್ದಾಳೆ.
ವಿವಿಯಲ್ಲಿ ಕನಯ್ಯಾ ಕುಮಾರ್ ಅವರ ಬಂಧನದ ನಂತರ ಕ್ಯಾಂಪಸ್ ನಲ್ಲಿ ಇತರ ವಿದ್ಯಾರ್ಥಿಗಳು ಕಾಶ್ಮೀರದ ವಿದ್ಯಾರ್ಥಿಗಳೊಂದಿಗೆ ಭೇದ ಭಾವ ತೋರಿಸುತ್ತಿದಾರ ಎಂದು ಇನ್ನೊಬ್ಬ ವಿದ್ಯಾರ್ಥಿ ದೂರಿದ್ದಾನೆ.
ಆದಾಗ್ಯೂ, ಈ ಪ್ರತಿಭಟನೆಯಲ್ಲಿ ನಿರತರಾಗಿರುವವರನ್ನು ಬಂಧಿಸುವಾಗ ಕಾಶ್ಮೀರ ವಿದ್ಯಾರ್ಥಿಗಳ ಬಂಧನವಾಗದಂತೆ ನೋಡಿಕೊಳ್ಳಿ ಎಂದು ಗೃಹ ಸಚಿವಾಲಯ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ ಎಂದು ಬಲ್ಲ ಮೂಲಗಳು ಹೇಳಿವೆ. ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪಿಡಿಪಿ ಸೇರಿಕೊಂಡು ಸರ್ಕಾರ ರೂಪಿಸುತ್ತಿರುವ ವೇಳೆ , ಕಾಶ್ಮೀರದ ವಿದ್ಯಾರ್ಥಿಗಳ ಹಿತ ಕಾಯುವುದಕ್ಕಾಗಿ ಕೇಂದ್ರ ಸರ್ಕಾರ ಈ ನಿಲುವು ಸ್ವೀಕರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


