ದೇಶ

ಕಡೆಗೂ ರಾಹುಲ್ ಮಾತನಾಡಿದ್ದರಿಂದ ಇನ್ಮುಂದೆ ಭೂಕಂಪವಾಗುವ ಸಾಧ್ಯತೆ ಇಲ್ಲ: ಪ್ರಧಾನಿ ವ್ಯಂಗ್ಯ

ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಹರಾ ಗ್ರೂಪ್ ನಿಂದ ಕೋಟಿಗಟ್ಟಲೆ ಲಂಚ ಪಡೆದಿದ್ದಾರೆ. ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದ ಬಗ್ಗೆ ನನ್ನ ಬಳಿ...

ಕಡೆಗೂ ರಾಹುಲ್ ಮಾತನಾಡಿದ್ದರಿಂದ ಇನ್ಮುಂದೆ ಭೂಕಂಪವಾಗುವ ಸಾಧ್ಯತೆ ಇಲ್ಲ: ಪ್ರಧಾನಿ ವ್ಯಂಗ್ಯ
ವಾರಣಾಸಿಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
Published On :
ವಾರಣಾಸಿ: ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಹರಾ ಗ್ರೂಪ್ ನಿಂದ ಕೋಟಿಗಟ್ಟಲೆ ಲಂಚ ಪಡೆದಿದ್ದಾರೆ. ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಅದನ್ನೆಲ್ಲ ಹೇಳಿದರೆ ಭೂಕಂಪವಾಗಬಹುದು ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಕುಟುಕುವ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.
ಅವರು ಇಂದು ತಮ್ಮ ಸ್ವಕ್ಷೇತ್ರ ಉತ್ತರ ಪ್ರದೇಶದ ವಾರಣಾಸಿಯಲ್ಲಿ  ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವುದಕ್ಕೆ ಮುನ್ನ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ನ ಯುವ ನಾಯಕ ಈಗ ಮಾತನಾಡಲು ಕಲಿಯುತ್ತಿದ್ದಾರೆ. ಹೇಗೆ ಮಾತನಾಡಬೇಕು ಎಂದು ಅವರು ಕಲಿಯಲು ಆರಂಭಿಸಿದ್ದಕ್ಕೆ ನನಗೆ ಸಂತೋಷವಿದೆ. 2009ರಲ್ಲಿ ಈ ಪೊಟ್ಟಣದೊಳಗೆ ಏನಿದೆ ಎಂದು ಹೇಳಲು ಕೂಡ ನಿಮಗೆ ಸಾಧ್ಯವಾಗುತ್ತಿರಲಿಲ್ಲ, ಈಗ ನಮಗೆ ಅದರೊಳಗೆ ಏನಿದೆ ಅಂತ ಗೊತ್ತಾಗಿದೆ ಎಂದು ವ್ಯಂಗ್ಯಭರಿತವಾಗಿ ಹೇಳಿದರು.
ರಾಹುಲ್ ಗಾಂಧಿಯವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದ ಮೋದಿ, ಅವರು ಮಾತನಾಡದಿದ್ದರೆ ಭೂಕಂಪವಾಗುತ್ತಿತ್ತು. ಅದನ್ನು ಜನರು ಸಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಅವರು ಮಾತನಾಡಲು ಆರಂಭಿಸಿರುವುದು ಉತ್ತಮ ಬೆಳವಣಿಗೆಯೇ. ಹಾಗಾಗಿ ಈಗ ಭೂಕಂಪವಾಗುವ ಸಾಧ್ಯತೆಯಿಲ್ಲ ಎಂದರು.
ನೋಟುಗಳ ನಿಷೇಧದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ನೋಟು ನಿಷೇಧ ದೊಡ್ಡ ಸ್ವಚ್ಛತಾ ಅಭಿಯಾನವಿದ್ದ ಹಾಗೆ. ಜನರು ಸರ್ಕಾರದ ಈ ಅಭಿಯಾನಕ್ಕೆ ಬೆಂಬಲ ನೀಡುತ್ತಿದ್ದಾರೆ. ನನಗೆ ಈ ದೇಶದ 125 ಕೋಟಿ ಭಾರತೀಯರ ಮೇಲೆ ನಂಬಿಕೆಯಿದೆ. ಭಾರತೀಯರು ನಿಸ್ವಾರ್ಥಿಗಳು. ಜನರ ಆಶೀರ್ವಾದ ಸರ್ವಶಕ್ತನ ಆಶೀರ್ವಾದ ಸಿಕ್ಕಿದ ಹಾಗೆ ಎಂದು ಭಾವನಾತ್ಮಕವಾಗಿ ನುಡಿದರು.ವಿರೋಧ ಪಕ್ಷಗಳು ಭ್ರಷ್ಟಾಚಾರಿಗಳ ಪರ ನಿಂತಿದೆ ಎಂದು ಆರೋಪಿಸಿದರು.
ಭಾರತದಲ್ಲಿ ಬಹುಪಾಲು ಮಂದಿಗೆ ಶಿಕ್ಷಣ ತಲುಪುತ್ತಿಲ್ಲ ಎನ್ನುತ್ತಾರೆ, ಅವರು ಯಾರ ಬಗ್ಗೆ ಹೇಳುತ್ತಿದ್ದಾರೆ, ಯಾವ ವರದಿಯ ಆಧಾರದ ಮೇಲೆ ಹೇಳುತ್ತಾರೆ ಎಂದು ನಾನು ತಿಳಿದುಕೊಳ್ಳಬೇಕು ಎಂದರು.
ಇಂದಿನ ಯುವಕರು ಆನ್ ಲೈನ್ ಬ್ಯಾಂಕಿಂಗ್ ನತ್ತ ಮುಖ ಮಾಡಬೇಕೆಂದು ಒತ್ತಾಯಿಸುತ್ತೇನೆ. ನಿಮ್ಮ ಅತ್ಯಾಧುನಿಕ ಮೊಬೈಲ್ ಫೋನ್ ಗಳು ನಿಮ್ಮ ಬ್ಯಾಂಕ್ ಮತ್ತು ವಾಲ್ಲೆಟ್ ಗಳಾಗಬಹುದು ಎಂದು ಡಿಜಿಟಲೀಕರಣದತ್ತ ಜನರು ಸಾಗಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.