ಸೇನಾ ಮುಖ್ಯಸ್ಥ ನೇಮಕ ವಿವಾದ: ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಸಂಸದ ಬೆಂಬಲ
ಭೂಸೇನಾ ಮುಖ್ಯಸ್ಥರಾಗಿ ಬಿಪಿನ್ ರಾವತ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಒಂದೆಡೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಅದೇ ಪಕ್ಷದ ಸಂಸದರೊಬ್ಬರು ಕೇಂದ್ರ ನಿರ್ಧಾರಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ...

ನವದೆಹಲಿ: ಭೂಸೇನಾ ಮುಖ್ಯಸ್ಥರಾಗಿ ಬಿಪಿನ್ ರಾವತ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಒಂದೆಡೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಅದೇ ಪಕ್ಷದ ಸಂಸದರೊಬ್ಬರು ಕೇಂದ್ರ ನಿರ್ಧಾರಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಸೇನಾ ಹಿರಿತನ ಕುರಿತಂತೆ ಹುಟ್ಟಿಕೊಂಡಿರುವ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶ ರಾಜ್ಯಸಭಾ ಸಂಸದ ಸತ್ಯವ್ರತ್ ಚತುರ್ವೇದಿ ಅವರು, ಸೇನಾ ಮುಖ್ಯಸ್ಥರ ನೇಮಕಾತಿ ಕುರಿತಂತೆ ಪ್ರಶ್ನೆ ಎತ್ತುತ್ತಿರುವುದು ಹಾಗೂ ಟೀಕೆ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಸೇನೆಯೊಂದಿಗೆ ರಾಜಕೀಯವನ್ನು ವಿಲೀನ ಮಾಡಬಾರದು ಎಂದು ಹೇಳಿದ್ದಾರೆ.
ಸೇನಾ ಮುಖ್ಯಸ್ಥ ನೇಮಕಾತಿಗೆ ಹಿರಿತನವೊಂದೇ ಮಾನದಂಡವಾಗಿರುವುದಿಲ್ಲ. ಸಾಕಷ್ಟು ಅನುಭವಗಳು, ವೃತ್ತಿಪರ ಸಾಮರ್ಥ್ಯ ಹಾಗೂ ವಿವಿಧ ಆಯಾಮಗಳನ್ನು ಪರಿಶೀಲಿಸಿದ ನಂತರವಷ್ಟೇ ನೇಮಕ ಮಾಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಸೇನೆಯಲ್ಲಿರುವ ಹಿರಿಯ ಅಧಿಕಾರಿಗಳನ್ನು ಕಡೆಗಣಿಸಿ ರಾವತ್ ಅವರನ್ನು ನೇಮಿಸಿರುವುದಕ್ಕೆ ವಿರೋಧ ಪಕ್ಷಗಳು ಟೀಕೆಗಳನ್ನು ವ್ಯಕ್ತಪಡಿಸಿದ್ದವು. ರಾವತ್ ಅವರನ್ನು ನೇಮಿಸಿರುವುದರ ಹಿಂದೆ ಏನಾದರೂ ಉದ್ದೇಶವಿದೆಯೇ? ಬಲವಾದ ಕಾರಣಗಳೇನಾದರೂ ಇವೇಯೇ ಎಂಬುದರ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡಬೇಕಿದೆ ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು.
ಸರ್ಕಾರದ ಕ್ರಮವೇ ಪ್ರಶ್ನಾರ್ಹವಾಗಿದೆ ಎಂದು ಸಿಪಿಐ ಹೇಳಿತ್ತು. ಈ ಎಲ್ಲಾ ಆರೋಪಗಳಿಗೆ ತಿರುಗೇಟು ನೀಡಿದ್ದ ಬಿಜೆಪಿ ರಕ್ಷಣಾ ಇಲಾಖೆಯ ನೇಮಕಗಳಿಗೆ ಸಂಬಂಧಿಸಿದ ವಿಚಾರಗಳನ್ನು ರಾಜಕೀಯಗೊಳಿಸಬಾರದು ಎಂದು ಹೇಳಿತ್ತು.
ವಿರೋಧ ಪಕ್ಷಗಳ ಆರೋಪಗಳನ್ನು ತಿರಸ್ಕರಿಸಿದ್ದ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿತ್ತು. ರಾವತ್ ಅವರ ನೇಮಕಾತಿಯನ್ನು ಸಮರ್ಥಿಸಿಕೊಂಡಿದೆ. ಎಲ್ಲಾ ಅರ್ಹತೆಗಳನ್ನು ಪರಿಗಣಿಸಿಯೇ ಈ ನೇಮಕವನ್ನು ಮಾಡಲಾಗಿದೆ. ಪಶ್ಚಿಮ ಭಾಗದಲ್ಲಿ ನಡೆಯುತ್ತಿರುವ ಛಾಯಾ ಸಮರ, ಮುಂದುವರಿದಿರುವ ಉಗ್ರ ಕೃತ್ಯಗಳು, ಈಶಾನ್ಯಾದಲ್ಲಿ ಮುಂದುವರೆದಿರುವ ಸಮಸ್ಯೆಯಿಂದಾಗಿ ರಾವತ್ ಅವರನ್ನೇ ಮುಖ್ಯಸ್ಥರನ್ನಾಗಿ ಪರಿಗಣಿಸಲಾಗಿದೆ ಎಂದು ಪ್ರತಿಪಾದಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


