ದೇಶ

ಕಿರಣ್ ರಿಜಿಜು ಭ್ರಷ್ಟಾಚಾರ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಪಟ್ಟು; ಲೋಕಸಭೆ ಕಲಾಪ ಮುಂದೂಡಿಕೆ

ನೋಟ್ ನಿಷೇಧ ವಿಷಯ ಮುಂದಿಟ್ಟುಕೊಂಡು ಸತತ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ....

ಕಿರಣ್ ರಿಜಿಜು ಭ್ರಷ್ಟಾಚಾರ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಪಟ್ಟು; ಲೋಕಸಭೆ ಕಲಾಪ ಮುಂದೂಡಿಕೆ
ಸಂಸತ್ ಭವನ
Published On :
ನವದೆಹಲಿ: ನೋಟ್ ನಿಷೇಧ ವಿಷಯ ಮುಂದಿಟ್ಟುಕೊಂಡು ಸತತ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಕೈಗೆ ಈಗ ಹೊಸ ಅಸ್ತ್ರವೊಂದು ಸಿಕ್ಕಿದೆ.
ನಾಲ್ಕು ದಿನಗಳ ಸುದೀರ್ಘ ರಜೆಯ ನಂತರ ಸಂಸತ್ ಕಲಾಪ ಬುಧವಾರ ಪುನಾಃ ಆರಂಭವಾಗಿದ್ದು, ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿ,  ಕೋಲಾಹಲ ಎಬ್ಬಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದ್ದಾರೆ.
ಇಂದು ಅಧಿವೇಶನ ಆರಂಭವಾಗುತ್ತಿದ್ದಂತೆ ಕಿರಣ್ ರಿಜಿಜು ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್, ಗೃಹ ಖಾತೆ ರಾಜ್ಯ ಸಚಿವರು ಅರುಣಾಚಲ ಪ್ರದೇಶದ ಅತ್ಯಂತ ಬೃಹತ್‌ ಜಲ ವಿದ್ಯುತ್‌ ಯೋಜನೆಯಲ್ಲಿ  450 ಕೋ.ರು. ಭ್ರಷ್ಟಾಚಾರ ನಡೆಸಿದ ಆರೋಪದ ಬಗ್ಗೆ ಚರ್ಚೆಯಾಗಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ಬೇಡಿಕೆಗೆ ಒಪ್ಪದ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 12ಗಂಟೆಗೆ ಮುಂದೂಡಿದ್ದಾರೆ.
ನಿನ್ನೆಯಷ್ಟೇ ರಿಜಿಜು ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಆಡಿಯೋ ಮುದ್ರಿಕೆಯೊಂದನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಸಚಿವರ ರಾಜೀನಾಮೆಗೆ ಆಗ್ರಹಿಸಿತ್ತು. ಅಲ್ಲದೆ ಪಾರದರ್ಶಕ ಆಡಳಿತ ತರುವಂತಹ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ನೆಲಕಚ್ಚಿದೆ ಎಂದು ವ್ಯಂಗ್ಯವಾಡಿತ್ತು. ಅಲ್ಲದೆ ಈ ವಿಷಯವನ್ನು ಇಂದು ಸಂಸತ್‌ ಕಲಾಪದಲ್ಲಿ ಪ್ರಸ್ತಾಪಿಸಲು ನಿರ್ಧರಿಸಿತ್ತು. 
ತಮ್ಮ ವಿರುದ್ಧ ವಿರುದ್ಧದ ಆರೋಪಗಳಿಗೆ ತಿರುಗೇಟು ನೀಡಿರುವ ರಿಜಿಜು, "ಇಂತಹ ಸುಳ್ಳು ಸುದ್ದಿಗಳನ್ನು ಬಿತ್ತುತ್ತಿರುವ ವ್ಯಕ್ತಿ ನಮ್ಮ ಏರಿಯಾಗೆ ಬಂದರೆ ಬೂಟಿನ ಏಟು ತಿನ್ನಲಿದ್ದಾರೆ' ಎಂದು ಕಿಡಿಕಾರಿದ್ದಾರೆ. ಬಿಜೆಪಿ ಕೂಡ ರಿಜಿಜು ತಪ್ಪೇನೂ ಇಲ್ಲ ಎಂದು ಸಮರ್ಥಿಸಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.