ಪಾಕ್ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಗೆ ನೆರವು: 2 ಸಾವಿರ ಕೋಟಿ ಪ್ಯಾಕೇಜ್'ಗೆ ಕೇಂದ್ರ ಸಿದ್ಧತೆ
ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಲೂಚಿಸ್ತಾನ ಪ್ರದೇಶಗಳಲ್ಲಿ ನೆಲೆಸಿರುವ ನಿರಾಶ್ರಿತರಿಗೆ ನೆರವು ಹಸ್ತ ಚಾಚಲು ಮುಂದಾಗಿರುವ ಕೇಂದ್ರ ಸರ್ಕಾರವು ಇದಕ್ಕಾಗಿ ರು. 2 ಸಾವಿರ ಕೋಟಿ...

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಲೂಚಿಸ್ತಾನ ಪ್ರದೇಶಗಳಲ್ಲಿ ನೆಲೆಸಿರುವ ನಿರಾಶ್ರಿತರಿಗೆ ನೆರವು ಹಸ್ತ ಚಾಚಲು ಮುಂದಾಗಿರುವ ಕೇಂದ್ರ ಸರ್ಕಾರವು ಇದಕ್ಕಾಗಿ ರು. 2 ಸಾವಿರ ಕೋಟಿ ಪ್ಯಾಕೇಜ್ ನ್ನು ಘೋಷಿಸಲು ಸಿದ್ಧತೆ ನಡೆಸಿದೆ ಎಂದು ಸೋಮವಾರ ತಿಳಿದುಬಂದಿದೆ.
ಪಿಒಕೆ, ಗಿಲ್ಗಿಟ್ ಮತ್ತು ಬಲೂಚಿಸ್ತಾನಗಳನ್ನು ದೇಶದ ಭಾಗವೆಂದೇ ಪರಿಗಣಿಸಲಾಗಿದ್ದು, ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕ ಕೂಡಲೇ ಗೃಹ ಸಚಿವಾಲಯವು ಪ್ಯಾಕೇಜ್ ಗೆ ಸಂಬಂಧಿಸಿದ ವಿವರಗಳನ್ನು ಶೀಘ್ರವೇ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರ ನೀಡಿರುವ ಮಾಹಿತಿಯಂತೆ ಪ್ರಸ್ತುತ 36,348 ಕುಟುಂಬಗಳಿದ್ದು, ಈ ಕುಟುಂಬಗಳಿಗೆ ರು.5.5 ಲಕ್ಷವನ್ನು ನೀಡಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ತಿಂಗಳೊಳಗಾಗಿ ಪ್ಯಾಕೇಜ್ ಗೆ ಸಂಪುಟ ಸಭೆ ಅನುಮೋದನೆ ನೀಡಲಿದೆ ಎಂಬ ವಿಶ್ವಾಸವಿದೆ. ಅನುಮೋದನೆಗೊಂಡ ಕೂಡಲೇ ನೆರವಿನ ಕಾರ್ಯವನ್ನು ಆರಂಭಿಸಲಾಗುತ್ತದೆ ಎಂದಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾಕಿಸ್ತಾನದಿಂದ ನಿರಾಶ್ರಿತರಾಗಿರುವ ಹಲವು ಜನರು ಜಮ್ಮು, ಕಥುವಾ ಮತ್ತು ರಜೌರಿ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದಲೂ ವಾಸವಿದ್ದು, ಈ ವರೆಗೂ ಆ ಜನಕ್ಕೆ ಖಾಯಂ ನಿವಾಸಿಗಳ ಸ್ಥಾನಮಾನ ಸಿಕ್ಕಿಲ್ಲ. ಕೆಲ ಕುಟುಂಬಗಳು 1947ರಲ್ಲಿ ದೇಶ ವಿಭಜನೆಯಾದಾಗ ನಿರಾಶ್ರಿತರಾಗಿದ್ದರು. ಇನ್ನು ಕೆಲವು ಜನರು 1965 ಮತ್ತು 1971ರ ಯುದ್ಧದ ಸಮಯದಲ್ಲಿ ನಿರಾಶ್ರಿತರಾಗಿದ್ದರು.
ಈ ನಿರಾಶ್ರಿತ ಕುಟುಂಬಗಳು ಲೋಕಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿವೆ. ಆದರೆ, ಜಮ್ಮು ಮತ್ತು ಕಾಶ್ಮೀರದ ಚುನಾವಣೆಗಳಲ್ಲಿ ಮತ ಚಲಾಯಿಸಿಲ್ಲ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಶರಣಾರ್ಥಿ ಕ್ರಿಯಾ ಪಡೆ ಎಂಬ ಸಂಘಟನೆಯು ಪಾಕ್ ಆಕ್ರಮಿತ ಕಾಶ್ಮೀರದ ನಿರಾಶ್ರಿತರ ಬಗ್ಗೆ ಜನಾಂದೋಲನ ನಡೆಸುತ್ತಿದ್ದು, ಎಲ್ಲರಿಗೂ ಒಟ್ಟಾರೆ ರು.9,200 ಕೋಟಿ ಪರಿಹಾರ ನೀಡುವಂತೆ ಆಗ್ರಹಿಸಿದೆ.
ಮೋದಿ ಸರ್ಕಾರವು ಕಳೆದ ವರ್ಷದ ಆರಂಭಿಕ ತಿಂಗಳಾದ ಜನವರಿಯಲ್ಲಿ ಈ ನಿರಾಶ್ರಿತರ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲವು ವಿನಾಯಿತಿಗಳನ್ನು ಅನುಮೋದನೆಗೊಳಿಸಿದೆ. ಈ ವಿನಾಯಿತಿಯು ಸೇನಾ ಪಡೆಗೆ ಸೇರ್ಪಡೆ, ಸಮಾನ ಉದ್ಯೋಗಾವಕಾಶ, ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಪ್ರವೇಶ ಸೇರಿದಂತೆ ಇನ್ನಿತರೆ ಸೌಲಭ್ಯ, ವ್ಯವಸ್ಥೆಗಳನ್ನು ಒಳಗೊಂಡಿದೆ.
ಈ ಬಾರಿ ಆಚರಿಸಲಾದ 71ನೇ ಸ್ವಾತಂತ್ರ್ಯೋತ್ಸವ ದಿನದಂದು ಭಾಷಣ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಗಿಲ್ಗಿಟ್-ಬಲೂಚಿಸ್ತಾನದ ಜನರ ಬಗ್ಗೆ ಮಾತನಾಡುವ ಮೂಲಕ, ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


