ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಸಹಪಾಠಿಯಿಂದಲೇ ಅತ್ಯಾಚಾರ
ದೇಶದ್ರೋಹ ಪ್ರಕರಣದಿಂದಾಗಿ ಕುಖ್ಯಾತಿ ಗಳಿಸಿದ್ದ ಜೆಎನ್ ಯು ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಡ್ರಗ್ಸ್ ನೀಡಿ ಸಹಪಾಠಿಯೇ ಅತ್ಯಾಚಾರ ವೆಸಗಿರುವ ಧಾರುಣ ಘಟನೆ ನಡೆದಿದೆ.

ನವದೆಹಲಿ: ಮಹಿಳೆಯರ ಅಸುರಕ್ಷತೆಯಲ್ಲಿ ಈಗಾಗಲೇ ಕುಖ್ಯಾತಿ ಪಡೆದಿರುವ ದೆಹಲಿಯಲ್ಲಿ ಮತ್ತೊಂದು ದುಷ್ಕೃತ್ಯ ನಡೆದಿದ್ದು, ಈ ಹಿಂದೆ ದೇಶದ್ರೋಹ ಪ್ರಕರಣದಿಂದಾಗಿ ಕುಖ್ಯಾತಿ ಗಳಿಸಿದ್ದ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಡ್ರಗ್ಸ್ ನೀಡಿ ಸಹಪಾಠಿಯೇ ಅತ್ಯಾಚಾರ ವೆಸಗಿರುವ ಧಾರುಣ ಘಟನೆ ನಡೆದಿದೆ.
ಕನ್ನಯ್ಹಾ ಕುಮಾರ್ ಪ್ರಕರಣದಿಂದಾಗಿ ದೇಶವ್ಯಾಪಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಜೆಎನ್ ಯು ಇದೀಗ ಡ್ರಗ್ಸ್ ಪ್ರಕರಣದಿಂದಾಗಿ ಮತ್ತೆ ಭಾರಿ ಸುದ್ದಿಗೆ ಕಾರಣವಾಗುತ್ತಿದ್ದು, ವಿದ್ಯಾರ್ಥಿನಿಯೊಬ್ಬಳಿಗೆ ಸಹಪಾಠಿ ಉದ್ದೀಪನ ಮದ್ದು ನೀಡಿ ಆಕೆಯ ಮೇಲೆ ರತನ್ ಅನ್ಮೋಲ್ ಎಂಬಾತ ಅತ್ಯಾಚಾರವೆಸಗಿದ್ದಾನೆ. ಜೆಎನ್ ಯು ಆವರಣದಲ್ಲಿರುವ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯನ್ನು ಜೆಎನ್ ಯು ಆವರಣದಲ್ಲಿರುವ ಬ್ರಹ್ಮಪುತ್ರ ಹಾಸ್ಟೆಲ್ ನ ಕೊಠಡಿಗೆ ಕರೆತಂದ ರತನ್ ಬಳಿಕ ಆಕೆಗೆ ಡ್ರಗ್ಸ್ ನೀಡಿ ಅತ್ಯಾಚಾರವೆಸಗಿದ್ದಾನೆ ಎಂದು ವಿದ್ಯಾರ್ಥಿನಿ ದೂರಿದ್ದಾಳೆ.
ಅತ್ಯಾಚಾರಕ್ಕೆ ಕಾರಣವಾಯ್ತು ಹೊಸ ಸಿನಿಮಾದ ಪೈರಸಿ
ಇತ್ತೀಚೆಗೆ ಬಿಡುಗಡೆಯಾದ ಹೊಸ ಸಿನಿಮಾವೊಂದರ ಪೈರಸಿ ಕಾಪಿ ಬಗ್ಗೆ ಫೇಸ್ ಬುಕ್ ನಲ್ಲಿ ತನ್ನ ಸ್ನೇಹಿತರೊಂದಿಗೆ ವಿದ್ಯಾರ್ಥಿನಿ ಪ್ರಶ್ನಿಸಿದ್ದಳು. ಇದನ್ನೇ ತನ್ನ ದುಷ್ಕೃತ್ಯಕ್ಕೆ ಬಳಸಿಕೊಂಡ ಅನ್ಮೋಲ್ ತನ್ನ ಬಳಿ ಆ ಚಿತ್ರವಿದ್ದು ವಿವಿ ಆವರಣದ ಬ್ರಹ್ಮಪುತ್ರ ಹಾಸ್ಟೆಲ್ ಗೆ ಬಂದರೆ ಸಿನಿಮಾ ನೀಡುವುದಾಗಿ ಆಕೆಯನ್ನು ಕರೆಸಿಕೊಂಡಿದ್ದಾನೆ. ಹೀಗಾಗಿ ಹಾಸ್ಟೆಲ್ ಗೆ ಬಂದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಹಾಸ್ಟೆಲ್ ನ ಕೊಠಡಿಗೆ ಕರೆದೊಯ್ದು ಆಕೆಗೆ ಮತ್ತು ಬರುವ ಪಾನೀಯ ನೀಡಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ.
ತನಗೆ ಪ್ರಜ್ಞೆ ಬಂದ ಬಳಿಕ ತನ್ನ ಮೇಲೆ ಅತ್ಯಾಚಾರವಾದ ವಿಷಯ ತಿಳಿದ ವಿದ್ಯಾರ್ಥಿನಿ ಕಿರುಚಾಡಲು ಪ್ರಯತ್ನಿಸಿದ್ದಳಾದರೂ, ಆಕೆಯ ಬಾಯಿ ಮುಚ್ಚಿದ ರತನ್ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ. ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿರುವಂತೆ ಅತ್ಯಾಚಾರಗೈದ ರತನ್ ಅನ್ಮೋಲ್ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ನ ಸದಸ್ಯನಾಗಿದ್ದು, ಇದೇ ಕಾರಣಕ್ಕೆ ಆಕೆ ಹೆದರಿ ಹೊರಬಂದು ಬಳಿಕ ದೂರು ನೀಡುತ್ತಿರುವುದಾಗಿ ತಿಳಿಸಿದ್ದಾಳೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿಯ ವಸಂತ್ ಕುಂಜ್ ಪೊಲೀಸರು ಆರೋಪಿ ರತನ್ ಅನ್ಮೋಲ್ ವಿರುದ್ಧ ಐಪಿಸಿ ಸೆಕ್ಷನ್ 376, 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಇಂದು ಅದರ ವರದಿ ಪೊಲೀಸರ ಕೈ ಸೇರಲಿದೆ.
ರತನ್ ಅನ್ಮೋಲ್ ಎಐಎಸ್ಎ ಸದಸ್ಯತ್ವ ರದ್ದು
ರತನ್ ಅನ್ಮೋಲ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬರುತ್ತಿದ್ದಂತೆಯೇ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ಆರೋಪಿ ರತನ್ ಅನ್ಮೋಲ್ ಸದಸ್ಯತ್ವವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಎನ್ ಯು ರಿಜಿಸ್ಟ್ರಾರ್ ಪ್ರಮೋದ್ ಕುಮಾರ್ ಅವರು, ಅತ್ಯಾಚಾರ ಪ್ರಕರಣ ಸಂಬಂಧ ತಮಗೆ ಯಾವುದೇ ದೂರು ಬಂದಿಲ್ಲ. ಹೀಗಿದ್ದೂ ಆರೋಪ ಕೇಳಿಬಂದಿರುವುದರಿಂದ ಆಂತರಿಕ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


