ಯಮುನಾ ನದಿ ತೀರದ ಜೈವಿಕ ಪರಿಸರವನ್ನೇ ಹಾಳುಗೆಡವಿದ ಶ್ರೀ ಶ್ರೀ ಉತ್ಸವ: ತಜ್ಞರ ಸಮಿತಿ
ವಿಶ್ವ ಸಾಂಸ್ಕೃತಿ ಉತ್ಸವಕ್ಕಾಗಿ ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಯಮುನಾ ನದಿ ತೀರದಲ್ಲಿ ನಿರ್ಮಿಸಿದ್ದ ಬೃಹತ್ ವೇದಿಕೆ ನದಿ ತೀರದ ಸಂಪೂರ್ಣ ಜೈವಿಕ ಪರಿಸರವನ್ನೇ ಹಾಳುಗೆಡವಿದೆ ಎಂದು ತಜ್ಞರ ಸಮಿತಿ ವರದಿ ನೀಡಿದೆ.

ನವದೆಹಲಿ: ವಿಶ್ವ ಸಾಂಸ್ಕೃತಿ ಉತ್ಸವಕ್ಕಾಗಿ ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಯಮುನಾ ನದಿ ತೀರದಲ್ಲಿ ನಿರ್ಮಿಸಿದ್ದ ಬೃಹತ್ ವೇದಿಕೆ ನದಿ ತೀರದ ಸಂಪೂರ್ಣ ಜೈವಿಕ ಪರಿಸರವನ್ನೇ ಹಾಳುಗೆಡವಿದೆ ಎಂದು ತಜ್ಞರ ಸಮಿತಿ ವರದಿ ನೀಡಿದೆ.
ಉತ್ಸವ ನಡೆದ ನದಿ ಪ್ರಾತ್ರ ಭೂಮಿ ಸಂಪೂರ್ಣ ಸಮತಟ್ಟಾಗಿದ್ದು, ಅಲ್ಲಿ ಯಾವುದೇ ರೀತಿ ಸಸ್ಯ ಪ್ರಭೇದ ಬೆಳೆಯದ ರೀತಿಯಲ್ಲಿ ಭಾರಿ ಗಟ್ಟಿತನದಿಂದ ಕೂಡಿದೆ. ಇಲ್ಲಿನ ಮಣ್ಣು ಮರಳುಗಾಡಿನ ರೀತಿಯಲ್ಲಿ ಒಣಗಿ ಹೋಗಿದ್ದು, ಸಸ್ಯಗಳ ಬೆಳವಣಿಗೆ ಅವಕಾಶ ಮಾಡಿಕೊಡುವ ಮಣ್ಣಿನ ತೇವಾಂಶವೇ ಇಲ್ಲದಂತಾಗಿದೆ. ಪ್ರಸ್ತುತ ಇಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ ಇಲ್ಲಿ ಯಾವುದೇ ರೀತಿಯ ಸಸ್ಯ ಪ್ರಭೇದಗಳು ಬೆಳೆಯದ ರೀತಿಯಲ್ಲಿ ಈ ಪ್ರದೇಶವನ್ನು ಉತ್ಸವ ಹಾಳು ಮಾಡಿದೆ ಎಂದು ಹಸಿರು ನ್ಯಾಯಾಧಿಕರಣ ರಚಿಸಿದ್ದ ತಜ್ಞರ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಪರಿಸರ ತಜ್ಞರು ನೀಡಿರುವ ಈ 47 ಪುಟಗಳ ವರದಿಯಲ್ಲಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಉತ್ಸವಕ್ಕಾಗಿ ತೆಗೆದುಕೊಂಡ 7 ಎಕರೆ ಪ್ರದೇಶ ಸಂಪೂರ್ಣ ಹಾಳಾಗಿದ್ದು, ಇಲ್ಲಿ ಮರಗಿಡ, ಹುಲ್ಲುಗಳು, ಸೇರಿದಂತೆ ಯಾವುದೇ ರೀತಿಯ ನೈಸರ್ಗಿಕ ಜೈವಿಕ ಸಸ್ಯ ವರ್ಗಗಳ ಬೆಳವಣಿಗೆ ಅಸಾಧ್ಯ ಎಂದು ಹೇಳಿದೆ. ಅಂತೆಯೇ ತಮ್ಮ ವರದಿಯಲ್ಲಿ 5 ಕೋಟಿ ದಂಡ ಪಾವತಿ ಮೇರೆಗೆ ವಿಶ್ವ ಸಾಂಸ್ಕೃತಿಕ ಉತ್ಸವಕ್ಕಾಗಿ ಅನುಮತಿ ನೀಡಿದ ಹಸಿರು ನ್ಯಾಯಾಧಿಕರಣವನ್ನೂ ತರಾಟೆಗೆ ತೆಗೆದುಕೊಂಡಿರುವ ಪರಿಸರ ತಜ್ಞರು, ನ್ಯಾಯಾಧಿಕರಣದ ಅನುಮತಿಯಿಂದಾಗಿ ನದಿಪಾತ್ರದ ಅತೀ ಸೂಕ್ಷ್ಮ ಪರಿಸರ ಮತ್ತೆ ಬೆಳವಣಿಗೆಯಾಗದ ರೀತಿಯಲ್ಲಿ ಸಂಪೂರ್ಣ ನಾಶವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವೇದಿಕೆ ನಿರ್ಮಾಣಕ್ಕಾಗಿ ಬೃಹತ್ ಪ್ರಮಾಣದಲ್ಲಿ ಭೂಮಿ ಅಗೆಯಲಾಗಿದೆ. ರಸ್ತೆ ಮತ್ತು ಇತರೆ ನಿರ್ಮಾಣಗಳಿಗಾಗಿ ಕೈಗೊಂಡ ಕಾಮಗಾರಿಗಳಿಂದಾಗಿ ನದಿ ಪಾತ್ರದ ಸ್ವಾಭಾವಿಕ ನೈಸರ್ಗಿಕ ವೈಶಿಷ್ಟ್ಯಗಳು ಮತ್ತು ನೈಸರ್ಗಿಕ ಆವಾಸಸ್ಥಾನಗಳು ನಾಶವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸುಪ್ರೀಂ ಕೋರ್ಟ್ ಗೆ ಹೇಳಿಕೆ ನೀಡಿದ್ದ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ತನ್ನ ಕಾರ್ಯಕ್ರಮವನ್ನು ತಾನೇ ಹೊಗಳಿಕೊಂಡಿತ್ತು. ಅಲ್ಲದೆ ತನ್ನ ಕಾರ್ಯಕ್ರಮದಿಂದಾಗಿ ಯಾವುದೇ ರೀತಿಯ ಜೈವಿಕ ಪರಿಸರ ಹಾಳಾಗಿಲ್ಲ. ಬದಲಿಗೆ ತಾನು ಜಾಗ ಪಡೆಯುವುದಕ್ಕೂ ಮೊದಲು ಇದ್ದ ಜೈವಿಕ ಪರಿಸರವನ್ನು ಕಾರ್ಯಕ್ರಮದ ಬಳಿಕ ಮತ್ತಷ್ಟು ಉತ್ತಮಗೊಳಿಸಲಾಗಿದೆ. ತನ್ನ ಈ ಕಾರ್ಯಕ್ಕೆ ಪ್ರಶಸ್ತಿ ನೀಡಬೇಕು ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿತ್ತು. ಆದರೆ ಇದೀಗ ತಜ್ಞರ ಸಮಿತಿ ನೀಡಿರುವ ವರದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ಮತ್ತೆ ಸಂಕಷ್ಟಕ್ಕೆ ಈಡು ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


