ದೇಶ

ಬುಲೆಟ್ ರೈಲು ಆರ್ಥಿಕವಾಗಿ ಸದೃಢವಾಗಲು ನಿತ್ಯ 100 ಟ್ರಿಪ್ ಅಗತ್ಯ..!

ಬುಲೆಟ್ ರೈಲು ಭಾರತಕ್ಕೆ ಬಂದರೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕಡಿಮೆ ಅವಧಿಯಲ್ಲಿ ಓಡಾಡಬಹುದು ಎಂದು ಆಲೋಚಿಸಿದ್ದರೆ, ಅದರ ನಿರ್ವಹಣೆ ನಮ್ಮ ಆಲೋಚನೆಗಿಂತಲೂ ದುಬಾರಿ ಎಂಬ ಮಾತು ಕೇಳಿಬರುತ್ತಿದೆ...

ಬುಲೆಟ್ ರೈಲು ಆರ್ಥಿಕವಾಗಿ ಸದೃಢವಾಗಲು ನಿತ್ಯ 100 ಟ್ರಿಪ್ ಅಗತ್ಯ..!
ಬುಲೆಟ್ ರೈಲು (ಸಂಗ್ರಹ ಚಿತ್ರ)
Published On :

ನವದೆಹಲಿ: ಬುಲೆಟ್ ರೈಲು ಭಾರತಕ್ಕೆ ಬಂದರೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕಡಿಮೆ ಅವಧಿಯಲ್ಲಿ ಓಡಾಡಬಹುದು ಎಂದು ಆಲೋಚಿಸಿದ್ದರೆ,  ಅದರ ನಿರ್ವಹಣೆ ನಮ್ಮ ಆಲೋಚನೆಗಿಂತಲೂ ದುಬಾರಿ ಎಂಬ ಮಾತು ಕೇಳಿಬರುತ್ತಿದೆ.

ಕೇಂದ್ರ ಸರ್ಕಾರದ ಉದ್ದೇಶಿತ ಅಹ್ಮದಾಬಾದ್ ಟು ಮುಂಬೈ ಬುಲೆಟ್ ರೈಲಿನ ಪ್ರಯಾಣಕ್ಕಿಂತ ಅದರ ನಿರ್ವಹಣಾ ವೆಚ್ಚವೇ ಅಧಿಕ ಎಂಬ ಮಾಹಿತಿ ಅಹ್ಮದಾಬಾದ್  ನ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸಂಸ್ಥೆ ಹೊರಹಾಕಿದೆ. ಮೂಲಗಳ ಪ್ರಕಾರ ಭಾರತದ ಉದ್ದೇಶಿತ ಬುಲೆಟ್ ರೈಲನ್ನು ನಿರ್ವಹಣೆ ಮಾಡಲು ಬುಲೆಟ್  ರೈಲು ನಿತ್ಯ ಕನಿಷ್ಠ 100 ಟ್ರಿಪ್ ಗಳನ್ನು ಮಾಡಬೇಕು ಎಂದು ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

ಐಐಎಂ-ಎ ನ ಪ್ರಾಧ್ಯಾಪಕರಾದ ಜಿ,ರಘುರಾಮ್ ಮತ್ತು ಪ್ರಶಾಂತ್ ಉದಯ್ ಕುಮಾರ್ ಎಂಬ ಪ್ರಾಧ್ಯಾಪಕ ತಂಡ ಈ ವರದಿ ಸಿದ್ಧಪಡಿಸಿದ್ದು, ಉದ್ದೇಶಿತ ಬುಲೆಟ್  ರೈಲಿನಲ್ಲಿ ನಿತ್ಯ 88 ಸಾವಿರದಿಂದ 1 ಲಕ್ಷದ 18 ಸಾವಿರ ಮಂದಿ ಪ್ರಯಾಣ ಮಾಡಬೇಕು ಅಥವಾ ಬುಲೆಟ್ ರೈಲು ನಿತ್ಯ 100 ಟ್ರಿಪ್ ಹೊಡೆಯಬೇಕು ಆಗ ಮಾತ್ರ  ಆರ್ಥಿಕವಾಗಿ ಬುಲೆಟ್ ರೈಲನ್ನು ನಿರ್ವಹಣೆ ಮಾಡಲು ಸಾಧ್ಯ ಎಂದು ಐಐಎಂ-ಎ ಅಭಿಪ್ರಾಯಪಟ್ಟಿದೆ.

ಹೈ ಸ್ಪೀಡ್ ರೈಲ್ವೆ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ತಯಾರಿಸಿರುವ ಐಐಎಂ-ಎ, ಕೇಂದ್ರ ರೈಲ್ವೇ ಇಲಾಖೆಯ ಉದ್ದೇಶಿತ ಬುಲೆಟ್ ರೈಲು ಯೋಜನೆ ಸುಮಾರು  15 ವರ್ಷಗಳ ಅವಧಿ ಹೊಂದಿದ್ದು, ಬುಲೆಟ್ ರೈಲು ಪ್ರಯಾಣ ಆರಂಭವಾದ 15 ವರ್ಷಗಳ ಅವಧಿಯಲ್ಲಿ ಜಪಾನ್ ದೇಶ ನೀಡಿದ ಸಾಲವನ್ನು ತೀರಿಸಲು ರೈಲಿನಲ್ಲಿ 300  ಕಿ.ಮೀ ಪ್ರಯಾಣ ಮಾಡುವ ಪ್ರತೀ ಪ್ರಯಾಣಿಕನಿಗೆ 1500 ರು. ನಿಗದಿ ಮಾಡಬೇಕು. ಅದರಂತೆ ಈ ಹೈಸ್ಪೀಡ್ ಬುಲೆಟ್ ರೈಲು ನಿರ್ವಹಣೆಗೆ ಮತ್ತು ಯೋಜನೆಗೆ  ಭಾರತ ಸರ್ಕಾರ ಮಾಡುವ ಸಾಲ ಮತ್ತು ಬಡ್ಡಿ ಪಾವತಿಗಾಗಿ 15 ವರ್ಷಗಳ ವರೆಗೂ ಈ ರೈಲಿನಲ್ಲಿ ನಿತ್ಯ 88 ಸಾವಿರದಿಂದ 1, 18, 000 ಮಂದಿ ಪ್ರಯಾಣ  ಮಾಡಬೇಕು ಇಲ್ಲವೇ ನಿತ್ಯ 100 ಬಾರಿ ರೈಲು ಮುಂಬೈ-ಅಹ್ಮದಾಬಾದ್ ಟ್ರಿಪ್ ಹೊಡೆಯಬೇಕು ಎಂದು ಹೇಳಲಾಗಿದೆ.

ಜಪಾನ್ ಸರ್ಕಾರ ಭಾರತದಲ್ಲಿ ಬುಲೆಟ್ ರೈಲು ಯೋಜನೆಗೆ 97,636 ಕೋಟಿ ರು.ಗಳ ಸಾಲ ನೀಡಲು ಮುಂದಾಗಿದ್ದು, ಕೇಂದ್ರ ಸರ್ಕಾರ ಶೇ.80ರಷ್ಟು ಸಾಲವನ್ನು  ಪ್ರಯಾಣಿಕರಿಂದಲೇ ಮರುಪಾವತಿ ಮಾಡಬೇಕು. ಉಳಿದ ಶೇ.20ರಷ್ಟು ಹಣ ಅಂದರೆ ಅಂದಾಜು ಸುಮಾರು 20 ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರ  ಬಂಡವಾಳವಾಗಿ ಹಾಕುತ್ತಿದೆ. ಹೀಗಾಗಿ 15 ವರ್ಷಗಳಲ್ಲಿ ಜಪಾನ್ ದೇಶ ನೀಡಿದ ಸಾಲ ಮರುಪಾವತಿಗೆ ಈ ಮಾರ್ಗ ಅವಶ್ಯಕವೆಂದೂ ಮತ್ತು 16ನೇ ವರ್ಷದಿಂದ  ಮಾತ್ರ ಕೇಂದ್ರ ಸರ್ಕಾರಕ್ಕೆ ಬುಲೆಟ್ ರೈಲಿನಿಂದ ಆದಾಯ ಬರಲು ಸಾಧ್ಯ ಎಂದು ಐಐಎಂಎ ಅಭಿಪ್ರಾಯಪಟ್ಟಿದೆ.

ಅಲ್ಲದೆ ಬುಲೆಟ್ ರೈಲು ಯೋಜನೆಗೆ ಮೊದಲ ಮಾರ್ಗವಾಗಿ ಮುಂಬೈ ಮತ್ತು ಅಹ್ಮದಾಬಾದ್ ನಗರಗಳನ್ನು ಆರಿಸಿಕೊಂಡುರುವುದು ಉತ್ತಮ ಆಯ್ಕೆ ಎಂದು  ಹೇಳಲಾಗಿದ್ದು, ಈ ನಗರಗಳ ಮಧ್ಯೆ ಬುಲೆಟ್ ರೈಲು ಸಂಚರಿಸುವುದರಿಂದ ಆದಾಯ ಗಳಿಕೆ ಸಾಧ್ಯ ಎಂದೂ ಅಭಿಪ್ರಾಯಪಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.