ದೇಶ

ತ್ರಿಪಕ್ಷೀಯ ಮಾತುಕತೆ: ಚೀನಾ ಜೊತೆ ಮಸೂದ್ ವಿಚಾರ ಚರ್ಚಿಸಲಿರುವ ಸುಷ್ಮಾ

ರಷ್ಯಾ-ಭಾರತ-ಚೀನಾ (ಆರ್'ಐಸಿ) ತೃಪಕ್ಷೀಯ ಮಾತುಕತೆಯಲ್ಲಿ ಭಾಗವಹಿಸುವ ಸಲುವಾಗಿ ಶನಿವಾರ ಮಾಸ್ಕೋಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪ್ರಯಾಣ ಬೆಳೆಸಲಿದ್ದು, ಮಾತುಕತೆ ವೇಳೆ...

ತ್ರಿಪಕ್ಷೀಯ ಮಾತುಕತೆ: ಚೀನಾ ಜೊತೆ ಮಸೂದ್ ವಿಚಾರ ಚರ್ಚಿಸಲಿರುವ ಸುಷ್ಮಾ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ)
Published On :

ಮುಂಬೈ: ರಷ್ಯಾ-ಭಾರತ-ಚೀನಾ (ಆರ್'ಐಸಿ) ತ್ರಿಪಕ್ಷೀಯ ಮಾತುಕತೆಯಲ್ಲಿ ಭಾಗವಹಿಸುವ ಸಲುವಾಗಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ರಷ್ಯಾ ರಾಜಧಾನಿ ಮಾಸ್ಕೋಗೆ ಪ್ರಯಾಣಿಸುತ್ತಿದ್ದು, ಅಲ್ಲಿ ಚೀನಾ ಪ್ರತಿನಿಧಿಗಳೊಂದಿ ಉಗ್ರ ಅಜರ್ ಮಸೂದ್ ಕುರಿತು ಚರ್ಚಿಸಲಿದ್ದಾರೆ.

ಶನಿವಾರ ಮಾಸ್ಕೋಗೆ ತೆರಳಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಅಜರ್ ಮಸೂದ್ ನನ್ನು ರಕ್ಷಿಸಲು ಚೀನಾ ವಿಶ್ವಸಂಸ್ಥೆಯಲ್ಲಿ ತನ್ನ ವೆಟೋ ಅಧಿಕಾರವನ್ನು ಬಳಕೆ ಮಾಡುವ ಕ್ರಮದ ಕುರಿತು ಚೀನಾದ ವಿದೇಶಾಂಗ ಇಲಾಖೆಯ ಪ್ರತಿನಿಧಿಗಳನ್ನು ಪ್ರಶ್ನಿಸಲಿದ್ದಾರೆ.

ಮಾಸ್ಕೋ ಪ್ರಯಾಣ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್ ಅವರು, ಮಾಸ್ಕೋಗೆ ತೆರಳುತ್ತಿದ್ದೇನೆ. ಅಲ್ಲಿ ಅಗ್ನಿ ದುರಂತದಲ್ಲಿ ಮೃತರಾದ ಪೂಜಾ ಕಲ್ಲೂರ್ ಮತ್ತು ಕ್ರಿಶ್ಮ ಬೊಂಸ್ಲೆ ಪ್ರಕರಣದ ಅಂತಿಮ ವರದಿ ನನ್ನ ಅಜೆಂಡಾದಲ್ಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ರಷ್ಯಾದಲ್ಲಿ ಮೃತನಾದ ಶ್ರೀನಗರ ಯುವಕ ಯಾಸೀರ್ ಬಗ್ಗೆಯೂ ಪ್ರಸ್ತಾಪ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಉಗ್ರಗಾಮಿಗಳಿಗೆ ವಿಶ್ವಸಂಸ್ಥೆಯ ಭಧ್ರತಾ ಮಂಡಳಿಯ ಮೂಲಕವಾಗಿ ದಿಗ್ಭಂಧನ ವಿಧಿಸುವ ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕುತ್ತಿದ್ದು, ತನ್ನ ವೆಟೋ ಅಧಿಕಾರವನ್ನು ಬಳಕೆ  ಮಾಡುವ ಮೂಲಕ ಅಜರ್ ಮಸೂದ್ ಸೇರಿದಂತೆ ಪ್ರಮುಖ ಉಗ್ರಗಾಮಿ ಸಂಘಟನೆಯ ಮುಖಂಡರನ್ನು ಉಗ್ರಗಾಮಿಗಳಲ್ಲ ಎಂದು ಬಿಂಬಿಸಲು ಚೀನಾ ಪ್ರಯತ್ನಿಸುತ್ತಿದೆ.

ಇದೇ ಕಾರಣಕ್ಕಾಗಿ ವಿಶ್ವಸಂಸ್ಥೆಯಲ್ಲಿ ಭಾರತ ಚೀನಾ ವಿರುದ್ಧ ನಿನ್ನೆ ವಾಗ್ದಾಳಿ ನಡೆಸಿತ್ತು. ಭಾರತ ಖಾಯಂ ಪ್ರತಿನಿಧಿ ಸೈಯ್ಯದ್ ಅಕ್ಬರುದ್ದೀನ್ ಅವರು ನಿನ್ನೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ  ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ವಿಶ್ವಸಂಸ್ಥೆಯ ಅಲ್​ಖೈದಾ, ತಾಲಿಬಾನ್ ಮತ್ತು ಇಸಿಸ್ ದಿಗ್ಬಂಧನ ಸಮಿತಿಯ ನಿಯಮಾವಳಿಗಳನ್ನು ಮರುಪರಿಶೀಲಿಸುವ ಅಗತ್ಯ ಇದ್ದು, ಇವುಗಳು ಯಾವುದೇ ಹೊಣೆಗಾರಿಕೆಯನ್ನು ಹೊಂದಿಲ್ಲ ಎಂದು ಹೇಳಿದರು.

ಸಮಿತಿಯ 15 ಸದಸ್ಯರಲ್ಲಿ ಪ್ರತಿಯೊಬ್ಬರಿಗೂ ಈಗ "ವೆಟೋ" ಅಧಿಕಾರವಿದ್ದು, ವಿಶ್ವಸಂಸ್ಥೆ ದಿಗ್ಬಂಧನ ಸಮಿತಿಯ ಈ  15 ಜನರನ್ನು ಹೊರತು ಪಡಿಸಿ ಬೇರೆ ಯಾವುದೇ ಸದಸ್ಯರಿಗೂ ಈ ನಿರ್ದಿಷ್ಟ  ಪ್ರಕರಣದ ವೆಟೊ ಬಗ್ಗೆ ವಿಶ್ವಸಂಸ್ಥೆ ಸಾಮಾನ್ಯ ಸದಸ್ಯರಿಗೆ ತಿಳಿಸಿಲ್ಲ. ಇದನ್ನು ಸಾಮಾನ್ಯ ಸದಸ್ಯರಿಗೆ  ತಿಳಿಸಬೇಕೆಂಬ ಹೊಣೆಗಾರಿಕೆಯನ್ನೂ ವಿಶ್ವಸಂಸ್ಥೆ ಪ್ರದರ್ಶಿಸಿಲ್ಲ ಎಂದು ಸೈಯದ್  ಅಕ್ಬರುದ್ದೀನ್ ಅವರು ಪರೋಕ್ಷವಾಗಿ ಚೀನಾ ವಿರುದ್ಧ ಹರಿಹಾಯ್ದರು.

ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರ ದಾಳಿಯ ಪ್ರಮುಖ ರೂವಾರಿಯಾಗಿರುವ ಅಜರ್ ಮಸೂದ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ಉಗ್ರ ಮುಖಂಡರ ವಿರುದ್ಧ ದಿಗ್ಬಂಧನ  ವಿಧಿಸಬೇಕೆಂಬ ಭಾರತದ ಯತ್ನಕ್ಕೆ ಕಳೆದ ತಿಂಗಳು ಚೀನಾ ತನ್ನ ರಹಸ್ಯ ವೆಟೋ ಅಧಿಕಾರವನ್ನು ಬಳಕೆ ಮಾಡಿ ತಡೆ ಹಿಡಿದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.