ಭಾರತ ಕೇವಲ ಹಿಂದೂಗಳದ್ದಾ? ಬಿಜೆಪಿಗೆ ಬಾಂಬೆ ಹೈಕೋರ್ಟ್ ಪ್ರಶ್ನೆ
ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಆಯೋಜಿಸಿದ್ದ ಬಿಜೆಪಿ ಆಡಳಿತವಿರುವ ನಾಗಪುರ ಮಹಾನಗರ....

Published On :
ನಾಗ್ಪುರ್: ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಆಯೋಜಿಸಿದ್ದ ಬಿಜೆಪಿ ಆಡಳಿತವಿರುವ ನಾಗಪುರ ಮಹಾನಗರ ಪಾಲಿಕೆ(ಎನ್ ಎಂಸಿ)ಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಬಾಂಬೆ ಹೈಕೋರ್ಟ್ ನ ನಾಗಪುರ ಪೀಠ, ಭಾರತ ಕೇವಲ ಹಿಂದೂಗಳದ್ದಾ ಎಂದು ಕಟುವಾಗಿ ಪ್ರಶ್ನಿಸಿದೆ.
ವಿಶ್ವ ಆರೋಗ್ಯ ದಿನದ ಅಂಗವಾಗಿ ಎನ್ ಎಂಸಿ ಏಪ್ರಿಲ್ 7ರಂದು ಏಡ್ಸ್ ತಡೆಗೆ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಇದನ್ನು ವಿರೋಧಿಸಿ ನಿನ್ನೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಚಾರಣೆ ನಡೆಸಿದ ನಾಗ್ಪುರ್ ಪೀಠ, ಭಾರತ ಹಿಂದೂಗಳಿಗೆ ಮಾತ್ರ ಸೇರಿದ್ದಾ? ಎಂದು ಪ್ರಶ್ನಿಸುವ ಮೂಲಕ ಏಡ್ಸ್ ಕುರಿತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸಾ ಪಠಿಸುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಹನುಮಾನ್ ಚಾಲೀಸಾವನ್ನು ಮಾತ್ರ ಯಾಕೆ ಪಠಿಸಬೇಕು...ಕುರಾನ್, ಬೈಬಲ್ ಅಥವಾ ಇತರ ಧರ್ಮದ ಗ್ರಂಥಗಳನ್ನು ಯಾಕೆ ಪಠಿಸಲ್ಲ? ಹನುಮಾನ್ ಚಾಲೀಸಾಕ್ಕೂ ಏಡ್ಸ್ ಕುರಿತ ಅರಿವು ಮೂಡಿಸುವ ಕಾರ್ಯಕ್ರಮಕ್ಕೂ ಏನು ಸಂಬಂಧ? ಏಡ್ಸ್ ಕುರಿತು ಹಿಂದುಗಳಿಗೆ ಮಾತ್ರ ಗುತ್ತಿಗೆ ಕೊಟ್ಟಿದ್ದಾರಾ? ಇಂತಹ ಮಾರಕ ಕಾಯಿಲೆಯನ್ನು ನಿರ್ಮೂಲನೆ ಮಾಡಲು ಹನುಮಾನ್ ಚಾಲೀಸಾ ಪಠಣ ಮಾಡುವುದು ಪರಿಹಾರವೇ ಎಂದು ನಾಗಪುರ ಪೀಠದ ಜಸ್ಟೀಸ್ ಭೂಷಣ್ ಗವಾಯಿ ಮತ್ತು ಸ್ವಪನ್ ಜೋಶಿ ನಾಗಪುರ ಮಹಾನಗರ ಪಾಲಿಕೆ ಪ್ರಶ್ನಿಸಿದ್ದಾರೆ. ಅಲ್ಲದೆ ನಾವು ಯಾವುದೇ ಧರ್ಮದ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿದ ಪೀಠ, ಏಡ್ಸ್ ಕುರಿತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸಾ ಪಠಣ ಬೇಡ ಎಂದು ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.
ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಹಾಗೂ ಏಡ್ಸ್ ಕುರಿತ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಕನಿಷ್ಠ ಒಂದು ಗಂಟೆಯಾದರೂ ಅಂತರ ಇರಲಿ ಎಂದು ಎನ್ ಎಂಸಿ ಹಾಗೂ ಕಾರ್ಯಕ್ರಮ ಆಯೋಜಿಸಿರುವ ದೇವಸ್ಥಾನದ ಟ್ರಸ್ಟ್ ಗೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ.
ಎನ್ ಎಂಸಿಯ ನಿರ್ಧಾರದ ವಿರುದ್ಧ ಮಾಜಿ ಕಾರ್ಪೊರೇಟರ್ ಜನಾರ್ದನ ಮೂನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಹಿಂದುತ್ವದ ಕಾರ್ಯಸೂಚಿಯನ್ನು ಹೇರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪಿಐಎಲ್ ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


