ಕಾಶ್ಮೀರ ಪ್ರತ್ಯೇಕತಾವಾದಿಗಳ ಸ್ನೇಹಕ್ಕೆ ಪಾಕ್ ಯತ್ನ: ಗ್ರೀನ್ ಬುಕ್ ನಲ್ಲಿ ಬಹಿರಂಗ
ಪಾಕಿಸ್ತಾನ ಸರ್ಕಾರದ ಬೆಂಬಲಿತ ಐಎಸ್ಐ ಉಗ್ರಗಾಮಿ ಸಂಘಟನೆಯನ್ನು ಮುಚ್ಚುವಂತೆ ಅಂತಾರಾಷ್ಟ್ರೀಯ ಮಟ್ಟದಿಂದ ಒತ್ತಡ ಬರುತ್ತಿರುವ...

ನವದೆಹಲಿ:ಪಾಕಿಸ್ತಾನ ಸರ್ಕಾರದ ಬೆಂಬಲಿತ ಐಎಸ್ಐ ಉಗ್ರಗಾಮಿ ಸಂಘಟನೆಯನ್ನು ಮುಚ್ಚುವಂತೆ ಅಂತಾರಾಷ್ಟ್ರೀಯ ಮಟ್ಟದಿಂದ ಒತ್ತಡ ಬರುತ್ತಿರುವ ಸಂದರ್ಭದಲ್ಲಿ, ಪಾಕಿಸ್ತಾನ ಮಾತ್ರ ಕಾಶ್ಮೀರ ವಿವಾದವನ್ನು ಉರಿಯುತ್ತಿರುವ ಬೆಂಕಿಯಂತೆ ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಭಾರತದ ವಿರುದ್ಧ ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವ ವಿಷಯ ರಹಸ್ಯವಾಗಿಯೇನು ಉಳಿದಿಲ್ಲ.ಭಯೋತ್ಪಾದಕ ದೇಶ ಎಂದು ಕರೆಸಿಕೊಳ್ಳುವುದನ್ನು ತಪ್ಪಿಸಲು, ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ತಡೆಯೊಡ್ಡಲು ಭಯೋತ್ಪಾದಕರಿಗೆ ನೆರವು ನೀಡಬಾರದು ಎಂದು ಅಮೆರಿಕ ಕೂಡ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು.
ಆದರೆ ಪಾಕಿಸ್ತಾನ ಸೇನೆಯ ಪ್ರಕಟಣೆ ಗ್ರೀನ್ ಬುಕ್ ನಲ್ಲಿ,ಪಾಕಿಸ್ತಾನ ಭಾರತದ ವಿರುದ್ಧ ಮಹಾಪಾತಕ ಯೋಜನೆಯನ್ನು ಬಿತ್ತಿದ್ದು ಅದರಲ್ಲಿ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಬಳಸಿಕೊಂಡು ಭಾರತದ ವಿರುದ್ಧ ಸಂಚು ರೂಪಿಸಲು ಯತ್ನಿಸುತ್ತಿದೆ ಎಂಬುದನ್ನು ಹೇಳಲಾಗಿದೆ.ಸೇನಾಪಡೆಗಳಿಂದ ಶಸ್ತ್ರಾಸ್ತ್ರಗಳ ಮೂಲಕ ಯುದ್ಧ ಮಾಡುವುದಕ್ಕೆ ಟೀಕೆ ಕೇಳಿಬರುತ್ತಿರುವ ಸಂದರ್ಭದಲ್ಲಿ ಒಳಸಂಚು ಮೂಲಕ ಪ್ರತ್ಯೇಕತಾವಾದಿಗಳ ನೆರವಿನಿಂದ ಸಂಚು ರೂಪಿಸುತ್ತಿದೆ ಎಂದು ಗ್ರೀನ್ ಬುಕ್ ನಲ್ಲಿ ಹೇಳಲಾಗಿದೆ. ಅಂದರೆ ಪಾಕಿಸ್ತಾನದ ಸೇನೆಯ ಅಧಿಕಾರಿಗಳಿಗೂ ಯುದ್ಧ ಸಾಕಾಗಿ ಹೋಗಿದೆ ಎಂಬುದು ಇದರಿಂದ ತಿಳಿದುಬರುತ್ತದೆ.
ಇತ್ತೀಚೆಗೆ ಮಾಜಿ ರಾ ಮುಖ್ಯಸ್ಥ ಎಎಸ್ ದುಲತ್ ತಮ್ಮ ಪುಸ್ತಕದಲ್ಲಿ, ಲಂಡನ್ ನಲ್ಲಿರುವ ಐಎಸ್ ಐ ಶಾಖೆ ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸೈಯದ್ ಆಲಿ ಶಾಹ್ ಗಿಲಾನಿಗೆ ಹವಾಲಾ ಮೂಲಕ ಭಾರೀ ಹಣವನ್ನು ಸಾಗಿಸಿತ್ತು. 2001-2002ರಲ್ಲಿ ಕನಿಷ್ಠ 20 ಸಲ ಐಎಸ್ ಐ ಹಣ ಕಳುಹಿಸಿತ್ತು ಎಂದು ಗುಪ್ತಚರ ಇಲಾಖೆ ವರದಿ ನೀಡಿತ್ತು. ಈ ವಿಷಯ ಭಾರತಕ್ಕೂ ಗೊತ್ತಿದೆ. ಅದಕ್ಕೇ ಭಾರತ, ಅನೇಕ ಸಂದರ್ಭಗಳಲ್ಲಿ ಪಾಕಿಸ್ತಾನಕ್ಕೆ ಪ್ರತ್ಯೇಕತಾವಾದಿ ಮುಖಂಡರಿಗೆ ಬೆಂಬಲ ನೀಡದಂತೆ ಎಚ್ಚರಿಕೆ ನೀಡಿತ್ತು. ಆದರೆ ಯಾವುದೇ ಮಾತುಕತೆ ವಿಷಯ ಬಂದಾಗ ಪ್ರತ್ಯೇಕತಾವಾದಿಗಳೊಂದಿಗೆ ಮಾತನಾಡುವುದಾಗಿ ಪಾಕಿಸ್ತಾನ ತನ್ನ ಹಠವನ್ನು ಮುಂದುವರಿಸಿಕೊಂಡು ಬಂದಿದೆ.
ವಾಸ್ತವವಾಗಿ ಪಾಕಿಸ್ತಾನ ಸೇನೆಗೂ ಭಾರತದ ವಿರುದ್ಧ ಜಮ್ಮು-ಕಾಶ್ಮೀರ ಗಡಿಯಲ್ಲಿ ಯುದ್ಧವನ್ನು ಮುಂದುವರಿಸುವುದು ಬೇಕಾಗಿಲ್ಲ. ಅಂತರಾಷ್ಟ್ರೀಯ ಮಟ್ಟದಿಂದ ಯುದ್ಧಕ್ಕೆ ಬೆಂಬಲ ಸಿಗದಿರುವಾಗ ಕಾಶ್ಮೀರಿ ವಿವಾದವನ್ನು ಮುಂದುವರಿಸಲು ಇಚ್ಛಿಸುತ್ತಿಲ್ಲ. ಈ ವಿಚಾರದಲ್ಲಿ ಪಾಕಿಸ್ತಾನದ ವಿದೇಶಾಂಗ ಇಲಾಖೆ, ರಕ್ಷಣೆ ಮತ್ತು ಆಂತರಿಕ ವ್ಯವಹಾರ ಸಚಿವಾಲಯ ಕೂಡ ಒಮ್ಮತಕ್ಕೆ ಬರಬೇಕು ಎಂದು ಸೇನಾ ಪಡೆಯ ಕಾರ್ಯನಿರತ ಲೆಫ್ಟಿನೆಂಟ್ ಕರ್ನಲ್ ತಿಳಿಸಿದ್ದಾರೆ. ಪಾಕಿಸ್ತಾನದ ರಾಜಕೀಯ ಅಸಮರ್ಪಕತೆಯಿಂದ ಯುದ್ಧ ನಡೆಯುತ್ತಿದೆ.
ಪುಸ್ತಕದಲ್ಲಿ ಪಾಕಿಸ್ತಾನದ ವಿದೇಶಾಂಗ ನೀತಿಯ ಬಗ್ಗೆಯೂ ಟೀಕಿಸಲಾಗಿದೆ. ರಾಜಕೀಯ ನಾಯಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.ಪಾಕಿಸ್ತಾನ ಸಾರ್ವಕಾಲಿಕ ರಾಜಕೀಯ ಅವ್ಯವಸ್ಥೆಗೆ ಸಿಲುಕಿದೆ, ಇದರಿಂದಾಗಿ ದೇಶದಲ್ಲಿ ರಾಜಕೀಯ ನಿರ್ಧಾರದ ಶಕ್ತಿ ದುರ್ಬಲವಾಗಿದೆ. ಭಾರತದೊಂದಿಗೆ ಯುದ್ಧದಲ್ಲಿ ಸೋತರೆ ರಾಜಕೀಯ ನಾಯಕರ ಮೇಲೆ ಆರೋಪಿಸುತ್ತಾರೆ. ಅಪನಂಬಿಕೆ, ತಪ್ಪು ಲೆಕ್ಕಾಚಾರ ಮತ್ತು ತಪ್ಪು ಗ್ರಹಿಕೆಗಳಿಂದಾಗಿ ಪಾಕಿಸ್ತಾನ ಮತ್ತು ಭಾರತದ ಮಧ್ಯೆ 1948, 65,71 ಮತ್ತು 1999ರಲ್ಲಿ ಯುದ್ಧಗಳಾದವು. ಪಾಕಿಸ್ತಾನಕ್ಕೆ ಸೋಲಾಯಿತು. 1971ರಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಯುದ್ಧದಲ್ಲಿ ಸೋಲಲು ಮುಖ್ಯ ಕಾರಣ ರಾಜಕೀಯ ತಾರತಮ್ಯ ಮತ್ತು ಬಂಗಾಳಿ ಜನರ ಹಸ್ತಾಂತರ.ಕಾರ್ಗಿಲ್ ಯುದ್ಧ ಕೂಡ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ತಪ್ಪು ಲೆಕ್ಕಾಚಾರದಿಂದ ಘಟಿಸಿತು ಎಂದು ಗ್ರೀನ್ ಬುಕ್ ನಲ್ಲಿ ವಿವರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


