ಮತ್ತೆ ಕಾಮುಕರ ಅಟ್ಟಹಾಸ: ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ ಬರ್ಬರವಾಗಿ ಹತ್ಯೆ
ಅತ್ಯಾಚಾರ ಪ್ರಕರಣಗಳು ದೇಶದೆಲ್ಲೆಡೆ ಸದ್ದು ಮಾಡುತ್ತಿದ್ದು, ಒಂದಾದ ಮೇಲೊಂದರಂತೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗಷ್ಟೇ ಹರಿಯಾಣದ ದಲಿತ ಮಕ್ಕಳ ದಹನ ಪ್ರಕರಣ ದೇಶದಾದ್ಯಂತ ಸುದ್ದಿ ಮಾಡುತ್ತಿದ್ದು, ಇದರ ಹಿಂದೆಯೇ 14 ಹರೆಯದ ಅಪ್ರಾಪ್ತ ಬಾಲಕಿ...

ಸೋನೆಪತ್: ಅತ್ಯಾಚಾರ ಪ್ರಕರಣಗಳು ದೇಶದೆಲ್ಲೆಡೆ ಸದ್ದು ಮಾಡುತ್ತಿದ್ದು, ಒಂದಾದ ಮೇಲೊಂದರಂತೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗಷ್ಟೇ ಹರಿಯಾಣದ ದಲಿತ ಮಕ್ಕಳ ದಹನ ಪ್ರಕರಣ ದೇಶದಾದ್ಯಂತ ಸುದ್ದಿ ಮಾಡುತ್ತಿದ್ದು, ಇದರ ಹಿಂದೆಯೇ 14 ಹರೆಯದ ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರವಾಗಿ ಹತ್ಯೆ ಪ್ರಕರಣವೊಂದು ಶನಿವಾರ ಬೆಳಕಿಗೆ ಬಂದಿದೆ.
ಸಹೋದರನೊಂದಿಗೆ ಸೈಕಲ್ ನಲ್ಲಿ ತೆರಳುತ್ತಿದ್ದ 14 ವರ್ಷದ ಬಾಲಕಿಯೊಬ್ಬಳನ್ನು 5 ಜನರ ದುರ್ಷರ್ಮಿಗಳ ಗುಂಪೊಂದು ಅಪಹರಣ ನಡೆಸಿ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಗುರುವಾರ ದೆಹಲಿಯ ನರೇಲಾ ಪ್ರದೇಶದ ಕುಂಡಲಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ದಸರಾ ಹಬ್ಬದ ಪ್ರಯುಕ್ತ ಬಾಲಕಿಯು ತನ್ನ ಕುಟುಂಬಸ್ಥರೊಂದಿಗೆ ರಾವಣ ದಹನ ಕಾರ್ಯಕ್ರಮ ನೋಡಲೆಂದು ನರೇಲಾಗೆ ಹೋಗಿದ್ದಳು. ಕಾರ್ಯಕ್ರಮ ಮುಗಿಸಿ ರಾತ್ರಿ 10ರ ಸುಮಾರಿಗೆ ಮನೆಯವರೆಲ್ಲಾ ತಮ್ಮ ಊರಿಗೆ ಹೋಗುತ್ತಿದ್ದರು. ಈ ವೇಳೆ ವಾಹನಗಳಾವುದೂ ಸಿಗದ ಕಾರಣ ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಬಾಲಕಿ ತನ್ನ ಅಣ್ಣನೊಂದಿಗೆ ಸೈಕಲ್ ಹೋಗುತ್ತಿದ್ದಳು. ಸ್ವಲ್ಪ ಸಮಯದ ಬಳಿಕ ಬಾಲಕಿ ಹಾಗೂ ಸಹೋದರ ಕುಟುಂಬಸ್ಥರಿಂದ ಕೊಂಚ ದೂರ ಹೋಗಿದ್ದರು. ಈ ವೇಳೆ ಆಟೋರಿಕ್ಷಾದಲ್ಲಿ ಬಂದ 5 ಜನರ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಬಾಲಕಿಯನ್ನು ಹೊತ್ತೊಯ್ಯಲು ಯತ್ನಿಸಿದ ಗುಂಪಿನೊಂದಿಗೆ ಬಾಲಕಿಯ ಸಹೋದರ ಹೊಡೆದಾಟ ನಡೆಸಿದ್ದಾನೆ. ಆದರೆ, ಬಾಲಕನಿಗೆ ದುಷ್ಕರ್ಮಿಗಳು ರಾಡ್ ನಿಂದ ಹೊಡೆದು ಬಾಲಕಿಯನ್ನು ಅಪಹರಿಸಿದ್ದಾರೆಂದು ತಿಳಿದುಬಂದಿದೆ.
ಅಪಹರಿಸಿದ ನಂತರ ಬಾಲಕಿಯನ್ನು 10 ಕಿ.ಮೀ ದೂರದ ನಂಗಲ್ ಗ್ರಾಮದ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದ ದುರ್ಷರ್ಮಿಗಳು ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ನಂತರ ಬಾಲಕಿ ಗುರುತು ಹಿಡಿಯುವಳೆಂಬ ಭಯದಿಂದಾಗಿ ದುಷ್ಕರ್ಮಿಗಳು ಆಕೆಗೆ ರಾಡ್ ನಿಂದ ಹೊಡೆದು ನಂತರ ಕಲ್ಲು ಎತ್ತು ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೃತ ದೇಹ ಯಾರಿಗೂ ಸಿಗಬಾರದೆಂದು ಸ್ಥಳದಲ್ಲೇ ಹೂತು ಹಾಕಿ ಕಾಲ್ಕಿತ್ತಿದ್ದಾರೆಂದು ತನಿಖೆಯಿಂದ ತಿಳಿದುಬಂದಿದೆ.
ಅಪಹರಣವಾಗುತ್ತಿದ್ದಂತೆ ಬಾಲಕಿಯ ಸಹೋದರ ಕುಟುಂಬಸ್ಥರಿಗೆ ನಡೆದ ಸಂಗತಿಯನ್ನು ವಿವರಿಸಿದ್ದಾನೆ. ಇದನ್ನು ಕೇಳಿದ ಬಾಲಕಿಯ ಪೋಷಕರು ಗಾಬರಿಗೊಂಡು ಹರಿಯಾಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆ ವೇಳೆ ಪೊಲೀಸರು ಪ್ರವೀಣ್, ಮದನ್, ನಿತಿನ್ ಮತ್ತು ಸಂದೀಪ್ ಎಂಬುವವರನ್ನು ಬಂಧನಕ್ಕೊಳಪಡಿಸಿದ್ದು, ದುಷ್ಕರ್ಮಿಗಳಲ್ಲೊಬ್ಬನಾದ ಸಂದೀಪ್ ಮೃತ ಬಾಲಕಿಯ ಕುಟುಂಬದ ನಿಕಟವರ್ತಿಯಾಗಿದ್ದಾನೆಂದು ಸೋನೆಪತ್ ಪೊಲೀಸ್ ಠಾಣಾಧಿಕಾರಿ ಧೀರಜ್ ಹೇಳಿದ್ದಾರೆ.
ಬಂಧಿತ ಆರೋಪಿಗಳನ್ನು ತನಿಖೆಗೊಳಪಡಿಸಿದಾಗ ಬಾಲಕಿಯನ್ನು ಹತ್ಯೆ ಮಾಡಿರುವುದು ತಿಳಿದುಬಂದಿತು. ನಂತರ ಬಾಲಕಿಯ ಮೃತ ದೇಹವನ್ನು ನಂಗಲ್ ನ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿರುವುದಾಗಿ ಆರೋಪಿಗಳು ಮಾಹಿತಿ ನೀಡಿದ್ದರು. ಮಾಹಿತಿಯನ್ವಯ ತನಿಖೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಮುಖದ ಮೇಲೆ ಕಬ್ಬಿಣದ ರಾಡ್ ಮತ್ತು ಕಲ್ಲಿಗಳಿಂದ ಆರೋಪಿಗಳು ಹತ್ತೆ ನಡೆಸಿದ್ದಾರೆಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಆರೋಪಿಗಳ ವಿರುದ್ಧ ಸೆಕ್ಷನ್ 365 ಮತ್ತು 323ರ (ಅಪಹರಣ ಮತ್ತು ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳನ್ನು ಸೇರಿಸಿ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


