ಎಂಎಚ್17 ವಿಮಾನ ಕೆಡವಿದ್ದು ರಷ್ಯಾ ಕ್ಷಿಪಣಿ
ಮಲೇಷ್ಯಾದ ಪ್ರಯಾಣಿಕ ವಿಮಾನ ಎಂಎಚ್ 17 ಅನ್ನು ಬಂಡುಕೋರರ ನೆಲೆಯಾದ ಪೂರ್ವ ಉಕ್ರೇನ್ ಭಾಗದಿಂದ ಉಡಾಯಿಸಲಾದ ರಷ್ಯಾ ನಿರ್ಮಿತ ಬಿಯುಕೆ ಕ್ಷಿಪಣಿ ಹೊಡೆದುರುಳಿಸಿದೆ ಎಂದು ಅಂತಾರಾಷ್ಟ್ರೀಯ ತನಿಖಾಧಿಕಾರಿಗಳು ಷರಾ ಬರೆದಿದ್ದಾರೆ...

ದಿ ಹೇಗ್: ಮಲೇಷ್ಯಾದ ಪ್ರಯಾಣಿಕ ವಿಮಾನ ಎಂಎಚ್ 17 ಅನ್ನು ಬಂಡುಕೋರರ ನೆಲೆಯಾದ ಪೂರ್ವ ಉಕ್ರೇನ್ ಭಾಗದಿಂದ ಉಡಾಯಿಸಲಾದ ರಷ್ಯಾ ನಿರ್ಮಿತ ಬಿಯುಕೆ ಕ್ಷಿಪಣಿ ಹೊಡೆದುರುಳಿಸಿದೆ ಎಂದು ಅಂತಾರಾಷ್ಟ್ರೀಯ ತನಿಖಾಧಿಕಾರಿಗಳು ಷರಾ ಬರೆದಿದ್ದಾರೆ.
ಇದರಿಂದ ರಷ್ಯಾ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ತೀವ್ರ ಮುಖಭಂಗಕ್ಕೆ ಒಳಗಾಗುವ ಸಾಧ್ಯತೆ ಇದೆ. ಎಂಎಚ್ 17 ಪತನಕ್ಕೆ ಸಂಬಂಧಿಸಿದ ಅಂತಿಮ ವರದಿ ಡಚ್ ಸೇನಾ ನೆಲೆಯಲ್ಲಿ ಬಿಡುಗಡೆಯಾಗಿದೆ ಡಚ್ ಸುರಕ್ಷತಾ ಮಂಡಳಿ ಹೇಳಿದೆ. 298 ಪ್ರಯಾಣಿಕರನ್ನು ಬಲಿ ತೆಗೆದುಕೊಂಡ ಬೋಯಿಂಗ್ 777 ವಿಮಾನದ ದುರಂತ ಹೇಗಾಯಿತು ಎಂದು 15 ತಿಂಗಳುಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಈ ವರದಿಯಲ್ಲಿ ಉತ್ತರ ಸಿಕ್ಕಿದೆ. ತನಿಖಾಧಿಕಾರಿಗಳು ನೀಡಿದ ವಿವರದಂತೆ, 2014ರ ಜು.17ರಂದು ಆಮ್ ಸ್ಟರ್ ಡ್ಯಾಂ ನಿಂದ ಕೌಲಾಲಂಪುರಕ್ಕೆ ಹೊರಟಿದ್ದ ವಿಮಾನ ಉಕ್ರೇನ್‍ನ ನಿಷೇಧಿತ ವಲಯದಲ್ಲಿ ಹಾರಾಟ ನಡೆಸುತ್ತಿತ್ತು.
ಈ ವೇಳೆ ಬಿಯುಕೆ ಕ್ಷಿಪಣಿ ಅದರ ಕಾಕ್ ಪಿಟ್‍ನ ಒಂದು ಮೀಟರ್ ದೂರದಲ್ಲಿ ಸ್ಫೋಟಿಸಿದೆ. ಆಗ ಎರಡು ಭಾಗವಾಗಿ ಮುರಿದ ವಿಮಾನ ನೆಲಕ್ಕಪ್ಪಳಿಸಿದೆ. ವಿಮಾನದ ಅವಶೇಷಗಳು ಉಕ್ರೇನ್ ಗಡಿಭಾಗಕ್ಕೆ ಸಮೀಪದ ಗ್ರಬೋವ್ ಗ್ರಾಮದಲ್ಲಿ ಚದುರಿಬಿದ್ದಿವೆ. ಈ ಪ್ರದೇಶ ರಷ್ಯಾ ಪರ ಬಂಡುಕೋರರ ವಶದಲ್ಲಿದೆ. ಇಲ್ಲಿಗೆ ಸಮೀಪದ ಶಿಝ್ನೆ ಎಂಬ ಗ್ರಾಮದಲ್ಲಿ ಬಿಯುಕೆ ಕ್ಷಿಪಣಿ ಪ್ರಯೋಗ ವ್ಯವಸ್ಥೆಯನ್ನು ನೋಡಿದ ವರದಿಗಾರರಿದ್ದಾರೆ. ಕ್ಷಿಪಣಿಯನ್ನು ಯಾರು ಪ್ರಯೋಗಿಸಿದವರು ಎಂಬ ಪ್ರಶ್ನೆಗೆ ಉತ್ತರವನ್ನು ತನಿಖಾಧಿಕಾರಿಗಳು ನೀಡಿಲ್ಲ. ಆದರೆ ಈ ಕ್ಷಿಪಣಿ ರಷ್ಯಾ ಹೊರತು ಬೇರ್ಯಾರ ಬಳಿಯೂ ಇಲ್ಲವಾದ್ದರಿಂದ ಇದು ರಷ್ಯಾದ ಕೆಲಸವೇ ಎಂದು ಉಕ್ರೇನ್ ಮತ್ತು ಪಾಶ್ಚಿಮಾತ್ಯ ದೇಶಗಳು ಆರೋಪಿಸಿವೆ. ಆದರೆ ಈ ಕ್ಷಿಪಣಿ ತಯಾರಿಸುವ ರಷ್ಯಾದ ಕಂಪೆನಿ ಅಲ್ಮಾಸ್ ಅಂಟೆ, ಇದು ತನ್ನ ಕ್ಷಿಪಣಿಯಿಂದಾದ ಕೆಲಸವಲ್ಲ ಎಂದು ವಾದಿಸಿದೆ. ತಾನು ನಡೆಸಿದ ಪ್ರಯೋಗಗಳಲ್ಲಿ ಇದಕ್ಕಿಂತ ಭಿನ್ನವಾದ ಚಿತ್ರಣ ಸಿಕ್ಕಿದೆ ಎಂದು ಹೇಳಿದೆ.
ಸಿಕ್ಕಿತೇ ಎಂಎಚ್370 ಅವಶೇಷ?
ಹಲವಾರು ಅಸ್ಥಿಪಂಜರಗಳು ಹಾಗೂ ಮಲೇಷ್ಯಾ ಧ್ವಜವಿರುವ ವಿಮಾನದ ಅವಶೇಷಗಳು ಫಿಲಿಪ್ಪೀನ್ಸ್‍ನ ದ್ವೀಪವೊಂದರಲ್ಲಿ ಮಂಗಳವಾರ ಪತ್ತೆಯಾಗಿದೆ. ಇದು ನಿಗೂಢವಾಗಿ ನಾಪತ್ತೆ ಯಾದ ಎಂಎಚ್ 370 ವಿಮಾನದ ಅವಶೇಷವೇ ಎಂಬ ಶಂಕೆ ಮೂಡಿದೆ. ಆದರೆ, ಈ ವಿಮಾನದ ಬಿಡಿಭಾಗ ಹಿಂದೂ ಮಹಾಸಾಗರ ದಲ್ಲಿ ಕೆಲತಿಂಗಳ ಹಿಂದೆ ಪತ್ತೆಯಾಗಿದ್ದ ಹಿನ್ನೆ ಲೆಯಲ್ಲಿ ಗೊಂದಲ ಮೂಡಿದೆ. ಈ ಬಗ್ಗೆ ಇನ್ನಷ್ಟೇ ತನಿಖೆ ನಡೆಯಬೇಕಿದೆ.
ಮೋದಿ ವಿಮಾನ ಇದೇ ಮಾರ್ಗವಾಗಿ ಹೋಗಬೇಕಿತ್ತು
ಮಲೇಷ್ಯಾ ವಿಮಾನದ ಬೆನ್ನ ಹಿಂದೆಯೇ ಪ್ರಧಾನಿ ಮೋದಿ ಅವರಿದ್ದ ವಿಮಾನವೂ ಸಾಗುತ್ತಿತ್ತು. ಮೋದಿ ಅವರು ಫ್ರಾಂಕ್ ಫರ್ಟ್‍ನಿಂದ ವಾಪಸಾಗುತ್ತಿದ್ದರು. ಆದರೆ, ಕೊನೆ ಕ್ಷಣದಲ್ಲಿ ಮಾರ್ಗದಲ್ಲಿ ಸಣ್ಣ ಬದಲಾವಣೆ ಮಾಡಲಾಗಿತ್ತು. ಇದರಿಂದಾಗಿ ಮೋದಿ ಅವರಿದ್ದ ಏರ್ ಇಂಡಿಯಾ ಒನ್ ವಿಮಾನ ಕಪ್ಪು ಸಮುದ್ರ ಮಾರ್ಗವಾಗಿ ಸಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


