ಕಾಮುಕರಿಂದ ಮಹಿಳೆಯ ರಕ್ಷಿಸ ಹೋಗಿ ಪ್ರಾಣ ತೆತ್ತ ಪೇಂಟರ್..!
ಕಾಮುಕರಿಂದ ಅತ್ಯಾಚಾರಕ್ಕೆ ಗುರಿಯಾಗಬೇಕಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿ 24 ವರ್ಷದ ಯುವಕನೊಬ್ಬ ಧಾರುಣವಾಗಿ ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ತಡವಾಗಿ ಬೆಳಕಿಗೆ ಬಂದಿದೆ...

ಚೆನ್ನೈ: ಕಾಮುಕರಿಂದ ಅತ್ಯಾಚಾರಕ್ಕೆ ಗುರಿಯಾಗಬೇಕಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿ 24 ವರ್ಷದ ಯುವಕನೊಬ್ಬ ಧಾರುಣವಾಗಿ ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಸೋಮವಾರ ರಾತ್ರಿ ಚೆನ್ನೈನ ಪಲ್ಲವರಂ ರೈಲ್ವೇ ನಿಲ್ದಾಣದಲ್ಲಿ ತನ್ನ ಹುಟ್ಟೂರಿಗೆ ತೆರಳಲು ಆಗಮಿಸಿದ್ದ ಜಾನ್ ಶಾಂತಕುಮಾರ್ ಎಂಬ 24 ವರ್ಷದ ಯುವಕನೇ ಧಾರುಣ ಸಾವಿಗೀಡದ ವ್ಯಕ್ತಿ. ಜಾನ್ ಮೂಲತಃ ಮರೈಮಲೈ ನಗರದ ನಿವಾಸಿಯಾಗಿದ್ದು, ಪೇಯಿಂಟ್ ಮಾಡುವ ಉದ್ಯೋಗ ಮಾಡುತ್ತಿದ್ದ. ಕಳೆದ ಸೋಮವಾರ ರಾತ್ರಿ ತನ್ನ ಮನೆಗೆ ತೆರಳಲು ಪಲ್ಲವರಂ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದ ಜಾನ್ ರೈಲು ಹತ್ತಿದ್ದ. ಈ ವೇಳೆ ಜಾನ್ ಗೆ ಮಹಿಳೆಯ ಕೂಗು ಕೇಳಿಸಿದ್ದು, ಕೆಲ ಕಿಡಿಕೇಡಿಗಳು ನಿಲ್ದಾಣದಲ್ಲಿ ಮಹಿಳಾ ವ್ಯಾಪಾರಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು.
ಆದರೆ ರೈಲ್ವೇ ನಿಲ್ದಾಣದಲ್ಲಿ ಸಾಕಷ್ಟು ಮಂದಿ ಇದ್ದರೂ ಯಾರೂ ಆಕೆಯ ಸಹಾಯಕ್ಕೆ ಬರಲಿಲ್ಲ. ನೋಡನೋಡುತ್ತಿದ್ದಂತೇಯ ಕಿಡಿಕೇಡಿಗಳು ಮಹಿಳೆಯ ವಸ್ತ್ರವನ್ನು ಕಳಚಲು ಪ್ರಯತ್ನಿಸಿದರು. ಹೀಗಾಗಿ ಸ್ವತಃ ಜಾನ್ ರೈಲಿನಿಂದ ಇಳಿದು ಆಕೆಯ ನೆರವಿಗೆ ಧಾವಿಸಿದ. ಈ ವೇಳೆ ಜಾನ್ ಮತ್ತು ಕಿಡಿಕೇಡಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಕೈ-ಕೈ ಮಿಲಾಯಿಸಿದ್ದಾರೆ. ಈ ನಡುವೆ ಮಹಿಳೆ ಪರಾರಿಯಾಗಿದ್ದು, ಇದರಿಂದ ಕೋಪೊದ್ರಿಕ್ತರಾದ ಕಿಡಿಗೇಡಿ ಗುಂಪು ಜಾನ್ ನನ್ನು ನಿಲ್ದಾಣದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚೂರಿಯಿಂದ ಇರಿದಿದ್ದಾರೆ. ಇವಿಷ್ಟೂ ಘಟನೆಗೆ ಸಾಕ್ಷಿಯಾದ ಕೆಲ ಪ್ರಯಾಣಿಕರು ಕೂಡಲೇ ಪೊಲೀಸರಿಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಧಾವಿಸುವ ಹೊತ್ತಿಗೇ ಕಿಡಿಗೇಡಿ ಗುಂಪು ಅಲ್ಲಿಂದ ಪರಾರಿಯಾಗಿದ್ದು, ತೀವ್ರ ರಕ್ತ ಸ್ರಾವದಿಂದ ಒದ್ದಾಡುತ್ತಿದ್ದ ಜಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರೈಲ್ವೇ ಪೊಲೀಸ್ ಅಧಿಕಾರಿ ವಿ.ಪೊಣ್ ರಾಮು ಅವರು, ಕಿಡಿಗೇಡಿ ಗುಂಪು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾಗ ಅಡ್ಡಿಪಡಿಸಿದ ಜಾನ್ ನನ್ನು ಚೂರಿಯಿಂದ ಇರಿದಿದ್ದಾರೆ. ಈ ಘಟನೆ ನಡೆಯುವ ಕೆಲವೇ ನಿಮಿಷಗಳ ಮೊದಲು ಶ್ರೀರಾಮುಲು ಎಂಬ ವಲಸೆಕಾರ್ಮಿಕನನ್ನು ಬೆದರಿಸಿ 5 ಸಾವಿರ ರು.ವಸೂಲಿ ಮಾಡಲು ಪ್ರಯತ್ನಿಸಿದ್ದಾರೆ. ಆ ಬಳಿಕ ಅಲ್ಲಿಯೇ ಫ್ಲಾಟ್ ಫಾರ್ಮ್ ನಲ್ಲಿದ್ದ ಮಹಿಳಾ ವ್ಯಾಪಾರಿಯನ್ನು ಹಿಡಿದು ಎಳೆದಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದಷ್ಟು ಮಂದಿಯ ವಿರುದ್ಧ ಶಂಕೆ ವ್ಯಕ್ತವಾಗಿದ್ದು, ಶೀಘ್ರದಲ್ಲಿಯೇ ಅವರನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


