ದೇಶ

ತರಬೇತಿಗಿಳಿಯಲಿದೆ ವಿಶ್ವಕ್ಕೇ ಸವಾಲು ಹಾಕಿದ್ದ ಭಾರತದ ರಹಸ್ಯ ನೌಕೆ

ತನ್ನ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಡೀ ವಿಶ್ವಕ್ಕೇ ಸವಾಲು ಹಾಕಿದ್ದ ಭಾರತದ ರಹಸ್ಯ ಜಲಾಂತರ್ಗಾಮಿ ನೌಕೆಯೊಂದು ಇದೇ ಮೊದಲ ಬಾರಿಗೆ ವಿದೇಶಿ ನೌಕಾಪಡೆಯೊಂದಿಗೆ ಜಂಟಿ ತಾಲೀಮು ನಡೆಸಲು ಸಜ್ಜಾಗಿದೆ...

ತರಬೇತಿಗಿಳಿಯಲಿದೆ ವಿಶ್ವಕ್ಕೇ ಸವಾಲು ಹಾಕಿದ್ದ ಭಾರತದ ರಹಸ್ಯ ನೌಕೆ
ಐಎನ್ಎಸ್ ಸಿಂಧೂಧ್ವಜ್ ಜಲಾಂತರ್ಗಾಮಿ ನೌಕೆ (ಸಂಗ್ರಹ ಚಿತ್ರ)
Published On :

ನವದೆಹಲಿ: ತನ್ನ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಡೀ ವಿಶ್ವಕ್ಕೇ ಸವಾಲು ಹಾಕಿದ್ದ ಭಾರತದ ರಹಸ್ಯ ಜಲಾಂತರ್ಗಾಮಿ ನೌಕೆಯೊಂದು ಇದೇ ಮೊದಲ ಬಾರಿಗೆ ವಿದೇಶಿ  ನೌಕಾಪಡೆಯೊಂದಿಗೆ ಜಂಟಿ ತಾಲೀಮು ನಡೆಸಲು ಸಜ್ಜಾಗಿದೆ.

ಭಾರತೀಯ ನೌಕಾಪಡೆಯಲ್ಲಿನ ಅತ್ಯಂತ ಬಲಿಷ್ಠ ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಲ್ಪಟ್ಟ ಜಲಾಂತರ್ಗಾಮಿ ನೌಕೆಗಳಲ್ಲಿ ಐಎನ್ಎಸ್ ಸಿಂಧೂಧ್ವಜ್ ಕೂಡ ಒಂದು.  ಐಎನ್ಎಸ್ ಸಿಂಧೂಧ್ವಜ್ ವನ್ನು "ಸಮುದ್ರದಲ್ಲಿನ ಕುಳಿ" ಎಂದೂ ಕೂಡ ಕರೆಯುತ್ತಾರೆ. ಏಕೆಂದರೆ ಇದು ಕಾರ್ಯಾಚರಣೆಗೆ ಇಳಿಯಿತು ಎಂದರೆ ಇದರ ಇರುವಿಕೆಯೇ ಯಾರ ಅರಿವಿಗೂ ಬರುವುದಿಲ್ಲ. ಅಷ್ಟರ ಮಟ್ಟಿಗೆ ಸಮುದ್ರದಾಳದಲ್ಲಿ ಸದ್ದಿಲ್ಲದೇ ತನ್ನ ಕಾರ್ಯನಿರ್ವಹಿಸಬಲ್ಲ ತಾಕತ್ತು ಐಎನ್ಎಸ್ ಸಿಂಧೂಧ್ವಜಕ್ಕಿದೆ.

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕಿಲೋ ಕ್ಲಾಸ್ ವ್ಯವಸ್ಥೆಯ ಐಎನ್ಎಸ್ ಸಿಂಧೂಧ್ವಜ್ ಜಲಾಂತರ್ಗಾಮಿ ನೌಕೆ ಮೂಲತಃ ರಷ್ಯಾ ನಿರ್ಮಿತವಾದದ್ದು. ಭಾರತ-ರಷ್ಯಾ ಪರಸ್ಪರ  ಒಪ್ಪಂದದ ಮೇರೆಗೆ 1980ರ ದಶಕದಿಂದ ವಿವಿಧ ರೀತಿಯ ಕಿಲೋ ಕ್ಲಾಸ್ ಸಬ್ ಮೆರಿನ್ ಗಳು ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿವೆ. ಪ್ರಸ್ತುತ ಭಾರತದ ಬಳಿ ಇಂತಹ 10ಕ್ಕೂ ಹೆಚ್ಚು  ಅತ್ಯಾಧುನಿಕ ಸಬ್ ಮೆರಿನ್ ಗಳಿದ್ದು, ಪ್ರಸ್ತುತ ತಾಲೀಮಿಗೆ ಸಜ್ಜಾಗುತ್ತಿರುವ ಐಎನ್ಎಸ್ ಸಿಂಧೂಧ್ವಜ ನೌಕೆ ಭಾರತದ ರಹಸ್ಯ ಅಸ್ತ್ರವೆಂದೇ ಪರಿಗಣಿಸಲ್ಪಟ್ಟಿತ್ತು.

ಐಎನ್ಎಸ್ ಸಿಂಧೂಧ್ವಜದಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ ನೌಕೆ ಸಮುದ್ರದಾಳದಲ್ಲಿದ್ದರೂ ಸಮುದ್ರದ ಮೇಲೆ ಮತ್ತು ಆಕಾಶದಿಂದ ತೂರಿಬರುವ ಶತ್ರುಪಾಳಯದ ನೌಕೆಗಳು ಮತ್ತು  ವಿಮಾನ, ಹೆಲಿಕಾಪ್ಟರ್ ಗಳನ್ನು ಗುರುತಿಸಿ ಕ್ಷಿಪಣಿಗಳ ಮೂಲಕ ಧ್ವಂಸ ಮಾಡುತ್ತದೆ. ಕಳೆದ ಹಲವು ವರ್ಷಗಳಿಂದಲೂ ಭಾರತ ತನ್ನ ಈ ರಹಸ್ಯ ಜಲಾಂತರ್ಗಾಮಿ ನೌಕೆಯನ್ನು ಇತರೆ  ದೇಶಗಳೊಂದಿಗೆ ನಡೆಯುವ ಜಂಟಿ ಸಮರಾಭ್ಯಾಸಕ್ಕೆ ಕಳುಹಿಸಿ ಕೊಟ್ಟಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಐಎನ್ಎಸ್ ಸಿಂಧೂಧ್ವಜ ನೌಕೆಯನ್ನು ಬಂಗಾಳಕೊಲ್ಲಿಯಲ್ಲಿ ನಡೆಯುತ್ತಿರುವ  "ಮಲಬಾರ್" ಜಂಟಿ ಸಮರಾಭ್ಯಾಸಕ್ಕೆ ರವಾನಿಸಿದೆ.

Story image



"ಮಲಬಾರ್" ಜಂಟಿ ಸಮರಾಭ್ಯಾಸವನ್ನು ಪರೋಕ್ಷವಾಗಿ ಚೀನಾ ವಿರೋಧಿ ಸಮರಾಭ್ಯಾಸ ಎಂದು ಕರೆಯಲಾಗುತ್ತಿದ್ದು, ದಕ್ಷಿಣ ಹಿಂದೂ ಮಹಾಸಾಗರದಲ್ಲಿ ತನ್ನ ಪ್ರಭುತ್ವ ಸಾಧಿಸಬೇಕು ಎಂದು  ಹಾತೊರೆಯುತ್ತಿರುವ ಚೀನಾಗೆ ತಕ್ಕ ಪಾಠ ಕಲಿಸಲೆಂದೇ ಅಮೆರಿಕ, ಭಾರತ ಮತ್ತು ಜಪಾನ್ ದೇಶಗಳು ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಚೀನಾಗೆ ಸೆಡ್ಡು ಹೊಡೆಯಲು ಜಪಾನ್ ಮತ್ತು  ಅಮೆರಿಕ ದೇಶಗಳ ನೌಕಾಪಡೆಗಳು ಭಾರತದ ರಹಸ್ಯ ಅಸ್ತ್ರ ಐಎನ್ಎಸ್ ಸಿಂಧೂಧ್ವಜದೊಂದಿಗೆ ಸಮರಾಭ್ಯಾಸ ನಡೆಸಲಿದ್ದಾರೆ. ಸಮುದ್ರಕ್ಕೆ ಇಳಿಯುವ ಸಿಂಧೂಧ್ವಜ ನೌಕೆಯನ್ನು  ಗುರುತಿಸುವುದು ಹೇಗೆ ಮತ್ತು ಅದರಲ್ಲಿರುವ ಆಯುಧಗಳ ವಿವರ ದಾಖಲು ಮಾಡುವುದು ಹೇಗೆ ಎಂಬಿತ್ಯಾದಿ ಅಂಶಗಳ ದಾಖಲಿಸುವ ಕುರಿತು ಅಮೆರಿಕ ಮತ್ತು ಜಪಾನ್ ದೇಶಗಳ ನೌಕಾಪಡೆಯ  ಸಿಬ್ಬಂದಿಗಳು ಪ್ರಯತ್ನಿಸಲಿದ್ದಾರೆ.

ಇದೇ ವೇಳೆ ಅಮೆರಿಕ ಮತ್ತು ಜಪಾನ್ ದೇಶಗಳ ನೌಕಾಪಡೆಯ ಅತ್ಯಾಧುನಿಕ ನೌಕೆಗಳು, ಅಸ್ತ್ರಗಳು ಮತ್ತು ವಿಮಾನಗಳು ತರಬೇತಿಯಲ್ಲಿ ಪಾಲ್ಗೊಳ್ಳಲ್ಲಿದ್ದು, ಪ್ರಮುಖವಾಗಿ ಜಲಾಂತರ್ಗಾಮಿ ನೌಕೆ ನಿರೋಧಕ ಹೆಲಿಕಾಪ್ಟರ್ ಗಳು, ತೀರ ಆಧಾರಿತ ಕಡಲ ಕಣ್ಗಾವಲು ವಿಮಾನಗಳು, ಬೃಹತ್ ಯುದ್ಧ ನೌಕೆಗಳು ತರಬೇತಿಯಲ್ಲಿ ಪಾಲ್ಗೊಳ್ಳಲ್ಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.