ದಾದ್ರಿ ಘಟನೆ ಬಿಜೆಪಿಯ ಪೂರ್ವ ತಂತ್ರ : ಅಖಿಲೇಶ್ ಯಾದವ್
ಗೋಮಾಂಸ ಮನೆಯಲ್ಲಿ ಇಟ್ಟುಕೊಂಡಿದ್ದ ವದಂತಿ ಹಿನ್ನೆಲೆಯಲ್ಲಿ ಮೊಹಮ್ಮದ್ ಇಕ್ಲಾಕ್ ಎಂಬ ಮುಸಲ್ಮಾನರೊಬ್ಬರನ್ನು ದಾದ್ರಿ ಎಂಬಲ್ಲಿ ಕೊಂದು...

ನವದೆಹಲಿ: ಗೋಮಾಂಸ ಮನೆಯಲ್ಲಿ ಇಟ್ಟುಕೊಂಡಿದ್ದ ವದಂತಿ ಹಿನ್ನೆಲೆಯಲ್ಲಿ ಮೊಹಮ್ಮದ್ ಇಕ್ಲಾಕ್ ಎಂಬ ಮುಸಲ್ಮಾನರೊಬ್ಬರನ್ನು ದಾದ್ರಿ ಎಂಬಲ್ಲಿ ಕೊಂದು ಹಾಕಿರುವ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಜೆಪಿಯ ಪೂರ್ವಾಲೋಚನೆ ತಂತ್ರದ ಭಾಗ ಅದು ಎಂದು ಹೇಳಿದ್ದಾರೆ.
ಈ ಘಟನೆ ನಡೆದು ಎರಡು ವಾರ ಬಳಿಕ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ಈ ದಾಳಿಯು ಅಚಾನಕ್ ಅಥವಾ ಸಹಜ ದಾಳಿ ಎಂದು ನಾನು ನಂಬುವುದಿಲ್ಲ. ಸರ್ಕಾರ ನಡೆಸಿರುವ ಪ್ರಾಥಮಿಕ ತನಿಖೆ ಪ್ರಕಾರ, ದಾದ್ರಿ ಘಟನೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ನಡೆಸಿದ ಪೂರ್ವ ನಿರ್ಧರಿತ ಕ್ರಮ ಎಂದು ಹೇಳಿದ್ದಾರೆ.
ದಾದ್ರಿಯಲ್ಲಿ ನಡೆದಂತಹ ಸಮಸ್ಯೆ ದೇಶಾದ್ಯಂತ ಪ್ರತಿಧ್ವನಿಸುತ್ತಿದ್ದರೆ ಬಿಜೆಪಿ ನಾಯಕರಿಗೆ ಗೊತ್ತಿಲ್ಲದಿರಲು ಸಾಧ್ಯವೇ? ಬಿಜೆಪಿ ಪಕ್ಷದ ನಾಯಕರು ಉತ್ತರ ಪ್ರದೇಶದಲ್ಲಿ ನಡೆಸುತ್ತಿರುವ ಕೃತ್ಯ ದೆಹಲಿಯಲ್ಲಿರುವ ಉನ್ನತ ನಾಯಕರಿಗೆ ತಿಳಿದಿದೆ. ಉತ್ತರ ಪ್ರದೇಶ ರಾಜ್ಯದಲ್ಲಿ ಕೋಮು ಭಾವನೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದಾರೆ.ಆರಂಭದಲ್ಲಿ ಲವ್ ಜಿಹಾದ್, ನಂತರ ಘರ್ ವಾಪಸಿ ನಂತರ ಮೊರದಾಬಾದ್ ನಲ್ಲಿ ಮೈಕ್ ಬಳಸಿದ ವಿಷಯಕ್ಕೆ ಸಂಬಂಧಪಟ್ಟಂತೆಯೂ ಸಮಸ್ಯೆ ಸೃಷ್ಟಿಸಿದರು ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಅಖಿಲೇಶ್ ಯಾದವ್, ಮೌನವಾಗಿ ಅಲ್ಪಸಂಖ್ಯಾತ ಮತಗಳನ್ನು ಪಡೆಯಲು ಬಿಜೆಪಿಯ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿ, ಮುಜಾಫರ್ ನಗರದ ಗಲಭೆಯಿಂದ ಯಾರು ಲಾಭ ಪಡೆದುಕೊಂಡಿದ್ದಾರೆ? ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶವೊಂದರಿಂದಲೇ ಬಿಜೆಪಿಯ 73 ಸಂಸದರು ಗೆದ್ದಿದ್ದಾರೆ. ಅದೇ ಸಮಾಜವಾದಿ ಪಕ್ಷಕ್ಕೆ ಸಿಕ್ಕಿದ್ದು ಕೇವಲ 5 ಸೀಟುಗಳು ಮಾತ್ರ. ಬಿಜಿಪಿಯು ಉತ್ತರ ಪ್ರದೇಶದಲ್ಲಿ ಶಾಂತಿ ಕದಡಲು ಎಲ್ಲಾ ಹಂತಗಳಲ್ಲಿಯೂ ತಂತ್ರವನ್ನು ಮಾಡುತ್ತದೆ ಎಂದರು.
ಪಕ್ಷದ ಕೆಲವು ಕಾರ್ಯಕರ್ತರು ಕುಕೃತ್ಯ ನಡೆಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಕೂಡ ಆಯಾ ಪಕ್ಷಗಳಿಗೆ ಪ್ರಮುಖವೇ. ಕಾರ್ಯಕರ್ತರಿಂದ ದೂರವುಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ವಿದೇಶಗಳಿಂದ ಹೆಚ್ಚು ಬಂಡವಾಳ ಹರಿದು ಬರಲು ವಿದೇಶಗಳಿಗೆ ಪ್ರಯಾಣ ಬೆಳೆಸುತ್ತಾರೆ. ಆದರೆ ದಾದ್ರಿಯಂಥ ಘಟನೆಗಳು ಅವರ ಉದ್ದೇಶಗಳಿಗೆ ಅಡ್ಡಿಯನ್ನುಂಟುಮಾಡುತ್ತವೆ. ಇಂದು ಕೆಲವು ಬಿಜೆಪಿ ನಾಯಕರು ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ಹೀಗೆ ಹೇಳಿಕೆ ನೀಡುವವರ ವಿರುದ್ಧ ನಾಯಕರು ಎಚ್ಚರಿಕೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


