"ಬಿಹಾರ ಸೋಲಿಗೆ ಮೋದಿ, ಶಾ ಕಾರಣ. ಪಕ್ಷಕ್ಕೆ ಅಂಟಿರುವ ಕ್ಯಾನ್ಸರ್ ತೊಳೆಯಬೇಕಿದೆ": ಬಿಜೆಪಿ ಸಂಸದ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹಿನಾಯವಾಗಿ ಸೋಲು ಕಾಣುತ್ತಿದ್ದಂತೆಯೇ ಪಕ್ಷದ ಹಿರಿಯ ನಾಯಕರ ವಿರುದ್ಧ ಅಸಮಾಧಾನ ಭುಗಿಲೆದ್ದಿದ್ದು, ಚುನಾವಣಾ ಸೋಲಿಗೆ ಪ್ರಧಾನಿ ಮೋದಿ...

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹಿನಾಯವಾಗಿ ಸೋಲು ಕಾಣುತ್ತಿದ್ದಂತೆಯೇ ಪಕ್ಷದ ಹಿರಿಯ ನಾಯಕರ ವಿರುದ್ಧ ಅಸಮಾಧಾನ ಭುಗಿಲೆದ್ದಿದ್ದು, ಚುನಾವಣಾ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಕಾರಣ ಎಂದು ಬಿಹಾರದ ಬಿಜೆಪಿ ಸಂಸದ ಭೋಲಾ ಸಿಂಗ್ ಆರೋಪಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಬಿಹಾರದ ಬೆಗುಸರಾಯ್ ಲೋಕಸಭಾ ಕ್ಷೇತ್ರದ ಸಂಸದ ಭೋಲಾ ಸಿಂಗ್ ಅವರು, ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡರು.ಇದೇ ಕಾರಣಕ್ಕಾಗಿ ಬಿಹಾರದಲ್ಲಿ ನಮಗೆ ಸೋಲುಂಟಾಯಿತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಅಮಿತ್ ಶಾ ಅವರು ಕೂಡಲೇ ಸ್ಪಷ್ಟನೆ ನೀಡಬೇಕು. ಇಲ್ಲ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಹೇಳಿದ್ದಾರೆ.
ಎರಡನೇ ಬಾರಿಗೂ ಅಮಿತ್ ಶಾ ಅವರನ್ನು ಪಕ್ಷದ ರಾಷ್ಟ್ರಾಧ್ಯಕ್ಷರನ್ನಾಗಿ ನೇಮಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಭೋಲಾ ಸಿಂಗ್, ಯಾರು ಈ ಅಮಿತ್ ಶಾ..? ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಈಗಿರುವ ಸ್ಥಾನಕ್ಕೆ ಕಾರಣ ನಾವು. ಅವರ ಮೇಲೆ ನಂಬಿಕೆ ಇಟ್ಟು ಸಂಪೂರ್ಣ ಅಧಿಕಾರವನ್ನು ನಾವು ಅವರಿಗೆ ಕೊಟ್ಟಿದ್ದರಿಂದಲೇ ಅವರು ಇಂದು ಪ್ರಮುಖ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.
ಅಲ್ಲದೆ ಚುನಾವಣಾ ಪ್ರಚಾರದ ವೇಳೆ ಈ ನಾಯಕರು ನೀಡಿದ ಅನವಶ್ಯಕ ಹೇಳಿಕೆಗಳು ಮತ್ತು ವೃಥಾ ಆರೋಪಗಳು ತಮ್ಮ ಪಕ್ಷದ ಸೋಲಿಗೆ ಕಾರಣವಾಯಿತು. ಬಿಜೆಪಿಗೆ ಕ್ಯಾನ್ಸರ್ ರೋಗ ಅಂಟಿಕೊಂಡಿದ್ದು, ಈ ರೋಗವನ್ನು ಬುಡಸಮೇತ ಕಿತ್ತೆಸೆಯಬೇಕಿದೆ ಎಂದು ಭೋಲಾ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಚುನಾವಣಾ ಸೋಲಿಗೆ ಕೆಲ ಕಾರಣಗಳನ್ನೂ ನೀಡಿರುವ ಅವರು, ಮೀಸಲಾತಿ ಕುರಿತಂತೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ, ಪ್ರಧಾನಿ ಮೋದಿ ಮತ್ತು ಸ್ಥಳೀಯ ನಾಯಕರ ಸಂಪರ್ಕದ ಕೊರೆತೆ ಮತ್ತು ಆ ನಿಟ್ಟಿನ ಅಭಿಯಾನದ ಕೊರತೆ ಸೋಲಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು, ನಮ್ಮ ಪಕ್ಷದ ಕುರಿತು ಪ್ರಚಾರ ಮಾಡುವ ಬದಲಿಗೆ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮತ್ತು ಕುಟುಂಬದ ವಿರುದ್ಧ ವಾಗ್ದಾಳಿ ಮಾಡಿದರು. ಅಲ್ಲದೆ ನಿತೀಶ್ ಕುಮಾರ್ ಅವರ ಡಿಎನ್ಎ ಬಗ್ಗೆಯೂ ವಾಗ್ದಾಳಿ ನಡೆಸಿದ್ದರು. ಪ್ರಚಾರದ ವೇಳೆ ಇದರ ಅವಶ್ಯಕತೆಯಾದರೂ ಏನಿತ್ತು..? ಪಾಕಿಸ್ತಾನದ ಕುರಿತಂತೆ ಶಾ ನೀಡಿದ್ದ ಹೇಳಿಕೆಗಳು ಕೂಡ ಸಾಕಷ್ಟು ಪರಿಣಾಮ ಬೀರಿದೆ ಎಂದು ಸಿಂಗ್ ಹೇಳಿದ್ದಾರೆ.
ಒಟ್ಟಾರೆ ಬಿಹಾರ ಚುನಾವಣಾ ಸೋಲಿನ ಬಳಿಕ ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ಆವರಿಸಿದ್ದು, ಪಕ್ಷದ ಹಿರಿಯ ನಾಯಕರ ವಿರುದ್ಧ ಒಳಗೊಳಗೇ ಅಸಮಾಧಾನ ಭುಗಿಲೇಳುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


