ದೇಶ

ಆನ್ ಲೈನ್ ಪೋರ್ನೋಗ್ರಫಿಯಲ್ಲಿ ಫೋಷಕರು ಬ್ಯುಸಿ; ಹಸಿವಿನಿಂದ ಪ್ರಾಣ ಬಿಟ್ಟ ಮಗು

ಜವಾಬ್ದಾರಿ ಮರೆತ ಪೋಷಕರು ಹಣಕ್ಕಾಗಿ ಆನ್ಲೈನ್ ಪೋರ್ನೋಗ್ರಫಿ (ಅಶ್ಲೀಲ ಚಿತ್ರ ಚಿತ್ರೀಕರಣ)ಯಲ್ಲಿ ತೊಡಗಿದ್ದರಿಂದ ಅವರ 7 ವಾರಗಳ ಹಸಗೂಸು ಹಸಿವಿನಿಂದ ಸಾವನ್ನಪ್ಪಿರುವ ಘಟನೆ..

ಆನ್ ಲೈನ್ ಪೋರ್ನೋಗ್ರಫಿಯಲ್ಲಿ ಫೋಷಕರು ಬ್ಯುಸಿ; ಹಸಿವಿನಿಂದ ಪ್ರಾಣ ಬಿಟ್ಟ ಮಗು
ಮಗು ಸಾವಿಗೆ ಕಾರಣರಾದ ದಂಪತಿಗಳು (ಚಿತ್ರಕೃಪೆ: ಡೈಲಿಮೇಲ್)
Published On :

ಗ್ಲೆಂಡೇಲ್: ಜವಾಬ್ದಾರಿ ಮರೆತ ಪೋಷಕರು ಹಣಕ್ಕಾಗಿ ಆನ್ಲೈನ್ ಪೋರ್ನೋಗ್ರಫಿ (ಅಶ್ಲೀಲ ಚಿತ್ರ ಚಿತ್ರೀಕರಣ)ಯಲ್ಲಿ ತೊಡಗಿದ್ದರಿಂದ ಅವರ 7 ವಾರಗಳ ಹಸಗೂಸು ಹಸಿವಿನಿಂದ ಸಾವನ್ನಪ್ಪಿರುವ ಘಟನೆ ನ್ಯೂಜಿಲೆಂಡ್ ನ ಗ್ಲೆಂಡೇಲ್ ನಲ್ಲಿ ನಡೆದಿದೆ.

ಹಣಕ್ಕಾಗಿ ಮಾನವ ಎಂತಹ ಹೀನ ಸ್ಥಿತಿಗೂ ಇಳಿಯಬಲ್ಲ ಎಂಬುದಕ್ಕೆ ಈ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ. ಹಣಕ್ಕಾಗಿ ಪೋಷಕರಿಬ್ಬರು ತಮ್ಮ ಜವಾಬ್ದಾರಿ ಮರೆತು ಮಗುವನ್ನೇ ಸಾವಿನ ದವಡೆಗೆ ತಳ್ಳಿದ್ದಾರೆ. ಹಣಕ್ಕಾಗಿ ಪೋಷಕರು ಆನ್ ಲೈನ್ ಪೋರ್ನೋಗ್ರಫಿಯಲ್ಲಿ ತೊಡಗಿದ್ದ ವೇಳೆ ಹಸಿವಿನಿಂದ ಬಳಲುತ್ತಿದ್ದ 7 ವಾರಗಳ ಹಸುಗೂಸು ಸಾವನ್ನಪ್ಪಿದೆ. ಈ ಘಟನೆ ನಡೆದಿರುವುದು ನ್ಯೂಜಿಲೆಂಡ್ ನ ಗ್ಲೆಂಡೇಲ್ ನಲ್ಲಿ. 26 ವರ್ಷದ ಸ್ಟೀಫನ್ ಮೈಕೆಲ್ ವಿಲಿಯಮ್ಸ್ ಹಾಗೂ 21 ವರ್ಷದ ಆತನ ಪತ್ನಿ ಅಮಾಂಡ ಮೇರಿ ಹ್ಯಾಂಕಾಕ್ ಮಗು ಕಳೆದುಕೊಂಡ ದುರ್ಧೈವಿಗಳು.

ನ್ಯೂಜಿಲೆಂಡ್ ನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಗಳಾಗಿರುವ ಈ ಇಬ್ಬರು ಹಣದಾಸೆಗೆ ಬಲಿಯಾಗಿ ಮೊರೆ ಹೋಗಿದ್ದು ಮಾತ್ರ ಆನ್ ಲೈನ್ ಪೋರ್ನೋಗ್ರಫಿಗೆ. ತಮ್ಮದೇ ಅಶ್ಲೀಲ ಚಿತ್ರಗಳನ್ನು ತೆಗೆದು ಅದನ್ನು ಆನ್ ಲೈನ್ ಅಪ್ ಲೋಡ್ ಮಾಡುವ ಮೂಲಕ ಈ ದಂಪತಿಗಳು ಹಣ ಸಂಪಾದನೆ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇವರು ಅಶ್ಲೀಲ ಚಿತ್ರೀಕರಣದಲ್ಲಿ ತೊಡಗಿ ಮಗುವಿನ ಪೋಷಣೆಯಲ್ಲಿ ನಿರಾಸಕ್ತಿ ತೋರಿದ್ದಾರೆ. ಮಗುವಿಗೆ ದಿನನಿತ್ಯ ಹಾಲು ಕೂಡ ನೀಡುತ್ತಿರಲಿಲ್ಲ. ಹಾಲಿಲ್ಲದೇ ಮಗು ದಿನೇ ದಿನೇ ಅಸ್ವಸ್ಥಗೊಂಡಿದೆ ಎಂದು ತಿಳಿದುಬಂದಿದೆ. ದಂಪತಿಗಳು ಚಿತ್ರೀಕರಣದಲ್ಲಿ ತೊಡಗಿರುವ ವೇಳೆ ಇವರ 7 ವಾರಗಳ ಹಸುಗೂಸು ಹಸಿವಿನಿಂದ ಅಳತೊಡಗಿದೆ. ಮಗು ಅಳುತ್ತಿದ್ದರೂ ಇವರು ಮಾತ್ರ ಅತ್ತ ಗಮನ ಕೊಡದೇ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಅಂತಿಮವಾಗಿ ಮಗು ಅತ್ತು-ಅತ್ತು ನಿತ್ರಾಣಗೊಂಡಿದೆ. ಚಿತ್ರೀಕರಣ ಮುಗಿದ ಬಳಿಕ ಮಗುವನ್ನು ನೋಡಿದ ತಾಯಿ ಅಮಾಂಡಾಗೆ ಮಗು ನಿತ್ರಾಣವಾಗಿರುವುದು ಕಂಡು ಬಂದಿದೆ. ಕೂಡಲೇ ಮಗುವಿಗೆ ಹಾಲುಣಿಸಿದ್ದಾಳಾದರೂ, ಅಷ್ಟು ಹೊತ್ತಿಗಾಗಲೇ ಮಗುವಿನ ಸ್ಥಿತಿ ಗಂಭೀರವಾಗಿದೆ. ಇದನ್ನು ಅರಿಯದ ಈ ದಂಪತಿ ಮಗುವನ್ನು ವೈದ್ಯರ ಬಳಿಗೆ ಕರೆದೊಯ್ಯುವ ಬದಲು ಪರಸ್ಪರ ಜಗಳಮಾಡಿಕೊಂಡಿದ್ದಾರೆ. ಮಾರನೆಯ ದಿನವೂ ಮಗು ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ಇವರು ಆ್ಯಂಬುಲೆನ್ಸ್ ಕರೆ ಮಾಡಿದ್ದಾರೆ. ಮಗವನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.

ಮಗು ಸತ್ತ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಗ್ಲೆಂಡೇಲ್ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ ಇಬ್ಬರು ನಡೆದ ವಿಚಾರವನ್ನು ತಿಳಿಸಿದ್ದಾರೆ. ಅಲ್ಲದೆ ಒಬ್ಬರಮೇಲೊಬ್ಬರು ಪರಸ್ಪರ ಆರೋಪಗಳು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮಗುವಿನ ತಂದೆಯನ್ನು ಈ ಬಗ್ಗೆ ವಿಚಾರಿಸಿದರೆ ಮಗುವಿನ ಆರೋಗ್ಯ ಮತ್ತು ಅದರ ಹಸಿವಿನ ಜವಾಬಬ್ದಾರಿ ತಾಯಿ ಅಮಾಂಡಾದಾಗಿದ್ದು, ಆಕೆಯೇ ಮಗುವಿನ ಸಾವಿಗೆ ಕಾರಣ ಎಂದು ಹೇಳುತ್ತಿದ್ದಾನೆ. ಪ್ರಸ್ತುತ ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರಿಗೆ ಲಭಿಸಿದ್ದು, ಮಗು ಸಾವಿಗೆ ಹಸಿವು ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕೊಲೆ ಮತ್ತು ಅಜಾಗರೂಕತೆ ಪ್ರಕರಣಗಳಡಿ ಇವರನ್ನು ಬಂಧಿಸಲಾಗಿದ್ದು, ಮುಂದಿನ 2 ವಾರಗಳಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ದಂಪತಿಗೆ 2 ವರ್ಷದ ಇನ್ನೊಂದು ಮಗು ಇದ್ದು, ಅದನ್ನು ಪೊಲೀಸರು ಮಕ್ಕಳ ರಕ್ಷಣಾ ಸಂಸ್ಥೆಯ ಬಳಿ ರಕ್ಷಿಸಿಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.