ಮೋದಿಯೊಂದಿಗೆ ಕಾರ್ಯಕ್ರಮದಲ್ಲಿ ಭೇಟಿ: ಟೀಕೆಗಳಿಗೆ ಸ್ಪಷ್ಟನೆ ನೀಡಿದ ಮಮತಾ ಬ್ಯಾನರ್ಜಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡು ಹಲವು ಟೀಕಾಪ್ರಹಾರಗಳಿಗೆ ಒಳಗಾಗಿದ್ದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ವಿರುದ್ಧದ ಟೀಕೆಗಳಿಗೆ ಶನಿವಾರ ಸ್ಪಷ್ಟನೆ ನೀಡಿದ್ದಾರೆ...

ಕೋಲ್ಕತಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡು ಹಲವು ಟೀಕಾಪ್ರಹಾರಗಳಿಗೆ ಒಳಗಾಗಿದ್ದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ವಿರುದ್ಧದ ಟೀಕೆಗಳಿಗೆ ಶನಿವಾರ ಸ್ಪಷ್ಟನೆ ನೀಡಿದ್ದಾರೆ.
ಭಾರತೀಯ ಕಬ್ಬಿಣ ಹಾಗೂ ಉಕ್ಕು ಕಂಪನಿಯ (ಐಐಎಸ್ ಸಿಒ) ಆಧುನಿಕ ಘಟಕ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಇಬ್ಬರೂ ವೇದಿಕೆ ಹಂಚಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮೋದಿ ದೇಶವನ್ನು ಮುನ್ನಡೆಸುವುದಕ್ಕೆ ಕೇಂದ್ರ ಹಾಗೂ ರಾಜ್ಯಗಳು ಒಂದು ತಂಡವಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದರು. ಮೋದಿ ಕರೆಗೆ ವಿರೋಧ ವ್ಯಕ್ತಪಡಿಸದ ಮಮತಾ ಬ್ಯಾನರ್ಜಿ ಅವರೊಂದಿಗೆ ಧ್ವನಿಗೂಡಿಸಿದ್ದರು.
ಹಿಂದಿನಿಂದಲೂ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರುತ್ತಲೇ ಬಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಮೋದಿ ಅವರೊಂದಿಗೆ ಧ್ವನಿ ಗೂಡಿಸಿರುವುದು ರಾಜಕೀಯ ವಲಯದಲ್ಲಿ ಹಲವು ಟೀಕೆಗಳಿಗೆ ಕಾರಣವಾಗಿತ್ತು. ವಿರೋಧ ಪಕ್ಷಗಳ ವಿರುದ್ಧ ಮಾತನಾಡುವುದರಲ್ಲಿ ಮಮತಾ ಬ್ಯಾನರ್ಜಿ ವಿಫಲರಾಗಿದ್ದು, ಪಶ್ಚಿಮ ಬಂಗಾಳದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಮುಸ್ಲಿಮರ ಮತಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು.
ಈ ಟೀಕೆಗಳಿಗೆ ಇಂದು ಸ್ಪಷ್ಟನೆ ನೀಡಿರುವ ಮಮತಾ ಬ್ಯಾನರ್ಜಿ ಅವರು, ಐಐಎಸ್ ಸಿಒ ಉದ್ಘಾಟನೆ ಕಾರ್ಯಕ್ರಮ ರಾಜ್ಯಕ್ಕೆ ಸಂಬಂಧಿಸಿದ್ದು, ಈ ರೀತಿಯ ಕಾರ್ಯಕ್ರಮಕ್ಕೆ ಭೇಟಿ ನೀಡದೆ ಹೋಗಿದ್ದರೆ, ಹಲವು ವಿರೋಧಗಳಿಗೆ ಕಾರಣವಾಗುತ್ತಿದ್ದೆ. ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಅವರು ಬಂದಿದ್ದರು. ನಾನು ಭಾಗಿಯಾಗಲೇಬೇಕಿದ್ದ ಅನಿವಾರ್ಯವಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಯಿತು. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿರುವ ವಿರೋಧಿಗಳು ಹಿಂದು-ಮುಸ್ಲಿಂ ಎಂದು ರಾಜಕೀಯ ಮಾಡುತ್ತಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಟೀಕೆಗಳು ಸರಿಯಾಗಿರುವುದಿಲ್ಲ. ಟೀಕೆ ಮಾಡುವುದಕ್ಕೂ ಮಿತಿಯಿರುತ್ತದೆ ಎಂದು ಟೀಕಾಕಾರರ ವಿರುದ್ಧ ಮಮತಾ ಕಿಡಿಕಾರಿದ್ದಾರೆ.
ಇಷ್ಟಕ್ಕೂ ನಾನು ಯಾಕೆ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದಿತ್ತು? ಭಾರತೀಯ ಕಬ್ಬಿಣ ಹಾಗೂ ಉಕ್ಕು ಕಂಪನಿ ಅಭಿವೃದ್ಧಿಗೆ ನಾವು ಭೂಮಿ ನೀಡಿದ್ದೇವೆ. ನಾನು ಹೋಗದಿದ್ದರೆ ಇತರೆ ಪಕ್ಷದವರಿಗೆ ಲಾಭವಾಗುತ್ತಿತ್ತು. ಇತರೆ ಪಕ್ಷಗಳಿಗೆ ಲಾಭವಾಗುವ ಕೆಲಸವನ್ನು ನಾನು ಯಾಕೆ ಮಾಡಲಿ. ಟಿಎಂಸಿ ಹಾಗೂ ಬಿಜೆಪಿ ಸಂಬಂಧದ ಕುರಿತು ಜನರಿಗೆ ಅರಿವಿದೆ ಮಮತಾ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


