ಹಗುರ ಭಾವನೆ ಬೇಡ: ಪಿಡಿಪಿಗೆ ಬಿಜೆಪಿ ಖಡಕ್ ಎಚ್ಚರಿಕೆ
ಜಮ್ಮು ಮತ್ತು ಕಾಶ್ಮೀರ ಸರ್ಕಾರದಿಂದ ತೀವ್ರ ಮುಜುಗಕ್ಕೊಳಗಾಗಿರುವ ಬಿಜೆಪಿ ತನ್ನ ಮಿತ್ರಪಕ್ಷ ಪಿಡಿಪಿಗೆ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನಿಸಿದೆ...

ನವದೆಹಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರದಿಂದ ತೀವ್ರ ಮುಜುಗಕ್ಕೊಳಗಾಗಿರುವ ಬಿಜೆಪಿ ತನ್ನ ಮಿತ್ರಪಕ್ಷ ಪಿಡಿಪಿಗೆ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನಿಸಿದೆ.
ಯಾವುದೇ ವಿಚಾರದ ಬಗ್ಗೆ ನಮ್ಮೊಂದಿಗೆ ಕೇಳದೆ ನಿರ್ಧಾರ ಕೈಗೊಳ್ಳುವ ಚಾಳಿ ಮುಂದುವರಿಸಿದರೆ ಸರ್ಕಾರದಿಂದ ಹೊರಬರುವುದಾಗಿ ಬಿಜೆಪಿ ಎಚ್ಚರಿಸಿದೆ. ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಆರೆಸ್ಸೆಸ್ ನಾಯಕರ ನಡುವೆ ನಡೆದ ಮಾತುಕತೆ ಬಳಿಕ ಈ ಬೆಳವಣಿಗೆ ನಡೆದಿದೆ. ಯಾವುದೇ ಸುಳಿವು ನೀಡದೆ ದಿಢೀರ್ ನಿರ್ಧಾರ ಕೈಗೊಂಡರೆ ಮೈತ್ರಿ ಬಹುಕಾಲ ಉಳಿಯದು ಎಂಬ ಕಠಿಣ ಸಂದೇಶವನ್ನು ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಮೂಲಕ ಪಿಡಿಪಿಗೆ ರವಾನಿಸಲಾಗಿದೆ. ಪಿಡಿಪಿ ಜತೆಗಿನ ಬಿಜೆಪಿ ಮೈತ್ರಿಯನ್ನು ವಿರೋಧಿಸುತ್ತಲೇ ಬಂದಿದ್ದ ಆರೆಸ್ಸೆಸ್ ಇತ್ತೀಚಿನ ಬೆಳವಣಿಗೆಗಳಿಂದ ತೀವ್ರ ಅಸಮಾಧಾನಗೊಂಡಿತ್ತು.
ಇನ್ಯಾರನ್ನೂ ಬಿಡುಗಡೆ ಮಾಡಲ್ಲ
ಇದಕ್ಕೂ ಮೊದಲೇ ಪ್ರತ್ಯೇಕತಾವಾದಿ ನಾಯಕ ಆಲಂ ಬಿಡುಗಡೆ ಕುರಿತು ಮಾತನಾಡಿದ್ದ ಜಮ್ಮು-ಕಾಶ್ಮೀರ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್, ಬಿಜೆಪಿಯೊಂದಿಗೆ ಸಮಾಲೋಚನೆ ನಡೆಸದೇ ಬೇರೆ ಯಾವ ಪ್ರತ್ಯೇಕತಾವಾದಿಯನ್ನು ಬಿಡುಗಡೆ ಮಾಡುವುದಿಲ್ಲ ಎಂದಿದ್ದರು. ಯಾವುದೇ ಕಾರಣಕ್ಕೂ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಮಾತಿನ ಚಾಟಿಯ ಬೆನ್ನಲ್ಲೇ ಸಯೀದ್ ಈ ಸ್ಪಷ್ಟನೆ ನೀಡಿದ್ದರು. ಆಲಂ ಬಿಡುಗಡೆ ಕುರಿತು ಪ್ರಧಾನಿ ಮೋದಿ ಅವರು ಸಯೀದ್ ಜತೆ ಕ ಮಾತನಾಡಿದ್ದರು. ಜತೆಗೆ, ಗೃಹ ಸಚಿವಾಲಯ ಕೂಡ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸಯೀದ್ ಸರ್ಕಾರವನ್ನು ಕೋರಿತ್ತು.
ಈ ಎಲ್ಲ ಬೆಳವಣಿಗೆಗಳಿಂದ ಬೆವತು ಹೋದ ಸಯೀದ್, ಇನ್ಯಾವ ಪ್ರತ್ಯೇಕತಾವಾದಿಯನ್ನೂ ಬಿಡುಗಡೆ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದರು. ಇದಕ್ಕೂ ಮೊದಲು ಕಳೆದ 22 ವರ್ಷಗಳಿಂದ ಜೈಲಲ್ಲಿರುವ ಆಶಿಕ್ ಹುಸೈನ್ ಫಕ್ತೂ ಸೇರಿದಂತೆ ಇನ್ನೂ ಹಲವು ಪ್ರತ್ಯೇಕತಾವಾದಿಗಳು ಬಿಡುಗಡೆಯಾಗಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಇದರಿಂದ ಕೆಂಡಾಮಂಡಲರಾಗಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ನಾವು ದೇಶದ ಭದ್ರತೆಗೆ ಆದ್ಯತೆ ನೀಡುತ್ತೇವೆಯೇ ಹೊರತು ಮೈತ್ರಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದರು.
ಗೃಹ ಇಲಾಖೆಗೆ ಮಾಹಿತಿಯಿತ್ತೇ?
ಆಲಂ ಬಿಡುಗಡೆಯಲ್ಲಿ ನಿಜಕ್ಕೂ ಸಯೀದ್ ಸರ್ಕಾರದ ನೇರ ಪಾತ್ರವಿತ್ತೇ ಎಂಬ ಬಗ್ಗೆ ಹೊಸ ಅನುಮಾನ ಈಗ ಮೂಡಿದೆ. ಜಮ್ಮು ಮತ್ತು ಕಾಶ್ಮೀರವು ರಾಷ್ಟ್ರಪತಿ ಆಳ್ವಿಕೆಯಲ್ಲಿರುವಾಗಲೇ ಆಲಂ ಬಿಡುಗಡೆಗೆ ಸಂಬಂಧಿಸಿದ ವಿಚಾರ ಹೊರಬಿದ್ದಿತ್ತು ಎಂದು ಹೇಳಲಾಗಿದೆ. ಫೆಬ್ರವರಿಯಲ್ಲಿ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದ ಜಮ್ಮು-ಕಾಶ್ಮೀರ ಗೃಹ ಕಾರ್ಯದರ್ಶಿ ಸುರೇಶ್ ಕುಮಾರ್ ಅವರು ಮಸಾರತ್ ಆಲಂ ವಿರುದ್ಧದ ಬಂಧನ ಆದೇಶದ ಅವಧಿ ಮುಕ್ತಾಯಗೊಂಡಿದೆ.
ಹಾಗಾಗಿ ಯಾವುದೇ ಆರೋಪಗಳಿಲ್ಲದೆ ಆತನನ್ನು ಜೈಲಿನಲ್ಲಿ ಇಟ್ಟುಕೊಳ್ಳುವಂತಿಲ್ಲ. ಹೀಗಾಗಿ ಆತನನ್ನು ಬಿಡುಗಡೆ ಮಾಡಬಹುದೇ ಎಂದು ಕೇಳಿದ್ದರು. ಆದರೆ ಇದಕ್ಕೆ ಗೃಹ ಇಲಾಖೆ ಉತ್ತರ ನೀಡಿರಲಿಲ್ಲ.
ಇದಾದ ಒಂದು ತಿಂಗಳ ಬಳಿಕ ಅಂದರೆ ಮಾ.4ರಂದು ಪೊಲೀಸರಿಗೆ ಪತ್ರ ಬರೆದ ಜಮ್ಮು ಜಿಲ್ಲಾ ಮ್ಯಾಜಿಸ್ಟ್ರೇಟ್, ಗೃಹ ಇಲಾಖೆಯು ಮುಂಜಾಗರೂಕತಾ ಕ್ರಮವಾಗಿ ಆಲಂನನ್ನು ಬಂಧಿಸುವಂತೆ ಯಾವುದೇ ಆದೇಶ ನೀಡಿರದ ಕಾರಣ ಆತನನ್ನು ಬಿಡುಗಡೆ ಮಾಡಿ ಎಂದು ಸೂಚಿಸಿದ್ದರು. ಇದು ಆಲಂ ಬಿಡುಗಡೆಯ ಮಾಹಿತಿ ಗೃಹ ಇಲಾಖೆಗೆ ಇತ್ತು ಎಂಬುದನ್ನು ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


