ದೇಶ

ಪೋಷಕರ ಅಜಾಗರೂಕತೆಗೆ ಮಗುವಿನ ಬೆರಳು ತುಂಡು

ಅಜಾಗರೂಕ ಪೋಷಕರಿಂದಾಗಿ ಪುಟ್ಟ ಮಗುವಿನ ಬೆರಳುಗಳು ತುಂಡಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಪೋಷಕರ ಅಜಾಗರೂಕತೆಗೆ ಮಗುವಿನ ಬೆರಳು ತುಂಡು
ಮಗುವಿನ ಕೈ ಬೆರಳು ತುಂಡಾದ ಮಾಲ್ ನ ಎಸ್ಕಲೇಟರ್
Published On :

ಚೆನ್ನೈ: ಅಜಾಗರೂಕ ಪೋಷಕರಿಂದಾಗಿ ಪುಟ್ಟ ಮಗುವಿನ ಬೆರಳುಗಳು ತುಂಡಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಚೆನ್ನೈನ ಅಣ್ಣಾಸಾಲೈ ನಲ್ಲಿರುವ ಸ್ಪೆನ್ಸರ್ ಮಾಲ್‌ನಲ್ಲಿ ಘಟನೆ ನಡೆದಿದ್ದು, ತಮ್ಮ ಕ್ಷಣ ಮಾತ್ರದ ಅಜಾಗರೂಕತೆಯಿಂದಾಗಿ ಬೆಂಗಳೂರು ಮೂಲದ ಪೋಷಕರ ಸುಮಾರು ಎರಡೂವರೆ ವರ್ಷದ ಮಗು ಎಸ್. ಋಷಿಕ್‌ನ ಬಲಗೈನ ಮೂರು ಬೆರಳುಗಳು ತುಂಡಾಗಿವೆ. ಮಾಲ್ ನಲ್ಲಿದ್ದ ಎಸ್ಕಲೇಟರ್ (ಸ್ವಯಂ ಚಾಲಿತ ಮೆಟ್ಟಿಲು) ನಲ್ಲಿ ಮಗುವಿನ ಕೈಬೆರಳು ಸಿಕ್ಕಿ ಕತ್ತರಿಸಿಹೋಗಿದೆ.

ಕೈಬೆರಳುಗಳನ್ನು ಕಳೆದುಕೊಂಡ ಆ ಪುಟ್ಟ ಕಂದಮ್ಮನ ಆರ್ತನಾದಕ್ಕೆ ತಾಯಿ, ತಂದೆ ಸೇರಿದಂತೆ ಅಲ್ಲಿದ್ದವರೆಲ್ಲಾ ಕಣ್ಣೀರಾದರು. ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆ ಸೇರಿಸಲಾಗಿದ್ದು, ವೈದ್ಯರು ಕೂಡ ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಿ ಬೆರಳುಗಳನ್ನು ಜೋಡಿಸಿದ್ದಾರೆ.

ಈ ಘಟನೆ ನಡೆಯುವುದಕ್ಕೂ ಒಂದು ಗಂಟೆ ಮುನ್ನ ಇದೇ ಮಾಲ್‌ನಲ್ಲಿದ್ದ ರೀಗಲ್ ಶೂ ಸ್ಟೋರ್‌ಗೆ ಮಗುವಿನ ಜೊತೆ ಆಗಮಿಸಿದ್ದ ಪೋಷಕರು ಮಗುವಿಗೆ ಶೂ ಖರೀದಿಸಿದ್ದರು. ಈ ವೇಳೆ ಮಗು ಲವಲವಿಕೆಯಿಂದ ಖುಷಿಯಿಂದಿತ್ತು ಎಂದು ಶೂ ಸ್ಟೋರ್‌ನ ಸೇಲ್ಸ್‌ಮ್ಯಾನ್ ಹೇಳಿದ್ದಾರೆ.

ಹೇಗಾಯ್ತು ಘಟನೆ..?
ಸಂತೋಷ್ ರಾಮ್ ಹಾಗೂ ಶರಣ್ಯಾ ದಂಪತಿ ಮೂಲತಃ ಮಹಾರಾಷ್ಟ್ರದ ಕೊಲಾರ್ ಪುರದವರಾಗಿದ್ದು, ಕಳೆದ ಕೆಲ ವರ್ಷಗಳಿಂದಲೂ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ರಜೆ ಇದ್ದ ಕಾರಣ ಚೆನ್ನೈಗೆ ತೆರಳಿದ್ದ ದಂಪತಿ, ಲಾ ವುಡ್ಸ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಇಂದು ಶಾಂಪಿಂಗ್ ಮಾಡುವ ಕಾರಣದಿಂದ ಅಲ್ಲಿಯೇ ಸಮೀಪದಲ್ಲಿದ್ದ ಅಣ್ಣಾ ಸಾಲೈನಲ್ಲಿರುವ ಸ್ಪೆನ್ಸರ್ ಮಾಲ್ ಗೆ ಮಗುವಿನೊಂದಿಗೆ ದಂಪತಿ ಆಗಮಿಸಿದ್ದಾರೆ. ಅಲ್ಲಿ ಮೊದಲನೇ ಮಹಡಿಯಲ್ಲಿ ದಂಪತಿ ಶೂ ಖರೀದಿಸಿದ್ದು, ಮೊದಲನೇ ಮಹಡಿಯ ಎಸ್ಕಲೇಟರ್‌ನಿಂದ ಇಳಿಯುವಾಗ ಈ ದುರ್ಘಟನೆ ಸಂಭವಿಸಿದೆ. ಎಸ್ಕಲೇಟರ್‌ ನೆಲವನ್ನು ತಲುಪುತ್ತಿದ್ದಂತೆಯೇ ಮಗು ಮುಗ್ಗರಿಸಿದ್ದು, ಕೈಬೆರಳುಗಳು ಎಸ್ಕಲೇಟರ್‌ ಮೆಟಲ್ ಶೀಟ್ ಹಾಗೂ ನೆಲದ ಮಧ್ಯೆ ಸಿಲುಕಿ ಮೂರು ಬೆರಳುಗಳು ಕಟ್ ಆಗಿವೆ.

ಮಗುವಿನ ಚೀರಾಟ ಕೇಳಿದ ಮಾಲ್ ನ ಸಿಬ್ಬಂದಿ ಕೂಡಲ್ ಎಸ್ಕಲೇಟರ್ ಮಿಷಿನ್ ಅನ್ನು ಸ್ಥಗಿತಗೊಳಿಸಿ, ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಎಸ್ಕಲೇಟರ್‌ ತೆಗೆದು ಮಗುವಿನ ಕೈಬೆರಳುಗಳನ್ನು ಹುಡುಕಾಡಿ ತೆಗೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಸ್ತುತ ಮಗುವಿಗೆ ತುರ್ತು ಚಿಕಿತ್ಸೆ ನೀಡಲಾಗಿದ್ದು, ಸತತ 10 ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಇಂದು ಮುಂಜಾನೆ 4 ಗಂಟೆಗೆ ಸರ್ಜರಿ ಅಂತ್ಯಗೊಳಿಸಿದ್ದಾರೆ ಅಲ್ಲದೆ ಕತ್ತರಿಸಿ ಹೋಗಿದ್ದ ಬೆರಳುಗಳನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಜೋಡಿಸಿದ್ದಾರೆ.

ಚಿಕಿತ್ಸೆಗೆ ನಿರಾಕರಣೆ
ಆರಂಭದಲ್ಲಿ ಋಷಿಕ್‌ರನ್ನು ಕರೆದೊಯ್ದಾಗ 2 ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನಿರಾಕರಿಸಿದ್ದು, ಇಲ್ಲಿನ ರಾಯಪೇಟೆ ಸರ್ಕಾರಿ ಆಸ್ಪತ್ರೆ ಹಾಗೂ ಸ್ಟ್ಯಾನ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ಚಿಕಿತ್ಸೆಗೆ ನಿರಾಕರಿಸಲಾಯಿತು. ಬಳಿಕ ಮಗುವನ್ನು ಕೀಳ್‌ಪಾಕಂನಲ್ಲಿರುವ ರೈಟ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಮೂರು ಬೆರಳುಗಳನ್ನು ಜೋಡಿಸುವ ಶಸ್ತ್ರ ಚಿಕಿತ್ಸೆ ಆರಂಭಿಸಿದ ವೈದ್ಯರು ಸದ್ಯ ಮಗುವಿನ ಸ್ಥಿತಿ ಸುಧಾರಿಸುತ್ತಿದ್ದು, ವೈದ್ಯರು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಆದರೆ ಮಗುವಿನ ಪೋಷಕರು ದೂರು ನೀಡಲು ಆಸಕ್ತರಾಗಿಲ್ಲ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.