ಮ್ಯಾಗಿ ಅಪಾಯಕಾರಿ ಉತ್ಪಾದನೆ, ಮಾರಾಟ, ಹಂಚಿಕೆ ನಿಷೇಧಿಸಿ
ಮ್ಯಾಗಿ ನೂಡಲ್ಸ್‍ನ 9 ಭಿನ್ನ ಮಾದರಿಗಳನ್ನುಪರೀಕ್ಷೆಗೊಳಪಡಿಸಿದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ, ``ಈ ಉತ್ಪನ್ನವು ಅಸುರಕ್ಷಿತ ಹಾಗೂ...

ನವದೆಹಲಿ: ಮ್ಯಾಗಿ ನೂಡಲ್ಸ್‍ನ 9 ಭಿನ್ನ ಮಾದರಿಗಳನ್ನುಪರೀಕ್ಷೆಗೊಳಪಡಿಸಿದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ, ``ಈ ಉತ್ಪನ್ನವು ಅಸುರಕ್ಷಿತ ಹಾಗೂ ಅಪಾಯಕಾರಿಯಾಗಿದೆ. ಇದನ್ನು ಸೇವಿಸಲು ಸಾಧ್ಯವೇ ಇಲ್ಲ'' ಎಂದು ಹೇಳಿದೆ. ಜತೆಗೆ, ನೆಸ್ಲೆ ಕಂಪನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ನಿಮಗೆ ನೀಡಿರುವ ಅನುಮತಿಯನ್ನು ಏಕೆ ವಾಪಸ್ ಪಡೆಯಬಾರದು ಎಂದು ಪ್ರಶ್ನಿಸಿದೆ. ಈ ನೋಟಿಸ್‍ಗೆ 15 ದಿನಗಳೊಳಗಾಗಿ ಉತ್ತರಿಸುವಂತೆಯೂಸೂಚಿಸಿದೆ. ಇದೇ ವೇಳೆ, ನೆಸ್ಲೆಯು ಅನುಮತಿ ಪಡೆಯದೇ ಮ್ಯಾಗಿ ಓಟ್ಸ್ ಮಸಾಲಾ ನೂಡಲ್ಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಅದನ್ನು ಹಿಂಪಡೆಯುವಂತೆಯೂ ಪ್ರಾಧಿಕಾರ ಆದೇಶಿಸಿದೆ.
ನೇಪಾಳದಲ್ಲಿ ನಿಷೇಧ; ಬ್ರಿಟನ್‍ನಲ್ಲಿ ಪರೀಕ್ಷೆ: ಮ್ಯಾಗಿ ವಿವಾದ ಕಾವೇರಿರುವ ಬೆನ್ನಲ್ಲೇ ನೇಪಾಳ ಹಾಗೂ ಸಿಂಗಾಪುರ ಕೂಡ ಭಾರತದಿಂದ ಮ್ಯಾಗಿ ನೂಡಲ್ಸ್ ಆಮದು ಮತ್ತು ಮಾರಾಟಕ್ಕೆ ತಾತ್ಕಾಲಿಕ ನಿಷೇಧ ಹೇರಿವೆ. ಮತ್ತೊಂದೆಡೆ, ಬ್ರಿಟನ್ ಸರ್ಕಾರವೂ ಮ್ಯಾಗಿ ನೂಡಲ್ಸ್‍ಗಳ ಮಾದರಿಯನ್ನು ಪರೀಕ್ಷೆಗೊಳಪಡಿಸಲು ಶುಕ್ರವಾರ ನಿರ್ಧರಿಸಿದೆ. ಇದೇ ವೇಳೆ, ಭಾರತದ ಅನೇಕ ರಾಜ್ಯಗಳಲ್ಲಿ ಮ್ಯಾಗಿ ನಿಷೇಧವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 28ರಿಂದ ಸತತವಾಗಿ ನೆಸ್ಲೆ ಷೇರುಗಳು ಕುಸಿತ ಕಾಣುತ್ತಿವೆ. ಹೀಗಾಗಿ ಕಂಪನಿಗೆ ರು. 10 ಸಾವಿರ ಕೋಟಿಗಿಂತಲೂ ಹೆಚ್ಚು ನಷ್ಟ ಉಂಟಾಗಿದೆ.
ಮ್ಯಾಗಿ ಪತನಕ್ಕೆ ಯಾರು ಕಾರಣ?: ಎಷ್ಟೋ ವರ್ಷಗಳಿಂದ ಭಾರತೀಯರ ಮನೆ ಮಾತಾಗಿದ್ದ ಮ್ಯಾಗಿ ನೂಡಲ್ಸ್ನ ಹಿಂದಿನ ಕಹಿ ಸತ್ಯವನ್ನು ಬಯಲಿಗೆಳೆದವರು, ಜನಪ್ರಿಯ ಮ್ಯಾಗಿಯ ಅಧಃಪತನಕ್ಕೆ ಕಾರಣವಾದವರು ಯಾರು ಎಂದು ಗೊತ್ತೇ? ಉತ್ತರಪ್ರದೇಶದ ಬಾರಾಬಂಕಿಯ ಆಹಾರ ಸುರಕ್ಷತಾ ಅಧಿಕಾರಿ ಸಂಜಯ್ ಸಿಂಗ್. ಸ್ಥಳೀಯ ಅಂಗಡಿಗಳಲ್ಲಿನ ಆಹಾರ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನು ಪರೀಕ್ಷೆಗೊಳಪಡಿಸುತ್ತಿದ್ದಾಗ ಸಿಂಗ್ ಅವರಿಗೆ ಮ್ಯಾಗಿಯ ಹಿಂದಿನ ಕಹಿ ಸತ್ಯ ತಿಳಿದುಬಂತು. ನೆಸ್ಲೆಯಂತಹ ವಿಶ್ವಾಸಾರ್ಹ ಕಂಪನಿಯೇ ಇಂತಹ ತಪ್ಪು ಮಾಡಿರುವುದನ್ನು ಅವರಿಗೇ ನಂಬಲಾಗಲಿಲ್ಲವಂತೆ. ಅದಕ್ಕೆ ಅವರು ಮ್ಯಾಗಿ ಸ್ಯಾಂಪಲ್‍ಗಳನ್ನು ಮತ್ತೆ ಕೋಲ್ಕತಾದ ಕೇಂದ್ರ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿದರಂತೆ. ಅಲ್ಲೂ ಫಲಿತಾಂಶ ಒಂದೇ ಆಗಿತ್ತು. ತಕ್ಷಣ ಸಿಂಗ್ ಅವರು ಮ್ಯಾಗಿ ಬಗ್ಗೆ ನೀಡಿದ ವರದಿಯು ಇಡೀ ದೇಶದಲ್ಲೇ ಸಂಚಲನಕ್ಕೆ ಕಾರಣವಾಯಿತು. ಲಖನೌನವರಾದ ಸಿಂಗ್ ಇಲ್ಲಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಆರ್ಗ್ಯಾನಿಕ್ ಕೆಮಿಸ್ಟ್ರಿಯಲ್ಲಿ ಎಂಎಸ್‍ಸಿ ಪದವಿ ಪಡೆದವರು. ನಂತರ ಲಖನೌ ವಿವಿಯಲ್ಲಿ ರಸಾಯನಶಾಸ್ತ್ರದಲ್ಲೇ ಪಿಎಚ್.ಡಿ ಕೂಡ ಮಾಡಿದ್ದಾರೆ.
1998ರಲ್ಲಿ ಆಹಾರ ಸುರಕ್ಷಾ ಸಂಸ್ಥೆಗೆ ಸೇರಿದ ಅವರು, 2013ರಲ್ಲಿ ಆಹಾರ ಸುರಕ್ಷತಾ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಎಲ್ಲ ರಾಜ್ಯಗಳಿಂದಲೂ ವರದಿ ತರಿಸಿ ಪರಿಶೀಲಿಸಿದ್ದೇವೆ. ಮ್ಯಾಗಿಯು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಆಹಾರದ ಸುರಕ್ಷೆ ವಿಚಾರದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.
- ಜೆ.ಪಿ. ನಡ್ಡಾ, ಕೇಂದ್ರ ಆರೋಗ್ಯ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


