ಪಾಕ್ ಉಗ್ರರ ಸ್ವರ್ಗವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಒಬಾಮ
ಭಯೋತ್ಪಾದನೆ ನಿಗ್ರಹ ಕುರಿತಂತೆ ಪಾಕಿಸ್ತಾನದೊಂದಿಗೆ ಅಮೆರಿಕ ಕೈ ಜೋಡಿಸಿದ್ದರೂ ಕೂಡ ಪಾಕ್ ಉಗ್ರರ ಸ್ವರ್ಗವಾಗುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.

ವಾಷಿಂಗ್‌ಟನ್: ಪಾಕಿಸ್ತಾನ ಉಗ್ರರ ಸ್ವರ್ಗವಾಗುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಇದೇ ಜನವರಿ 26ರಂದು ಭಾರತಕ್ಕೆ ಆಗಮಿಸಲು ಸಜ್ಜಾಗಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು, ಇಂಡಿಯಾ ಟುಡೇ ಮ್ಯಾಗಜಿನ್‌ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಭಯೋತ್ಪಾದನೆ ನಿಗ್ರಹ ಕುರಿತಂತೆ ಪಾಕಿಸ್ತಾನದೊಂದಿಗೆ ಅಮೆರಿಕ ಕೈ ಜೋಡಿಸಿದ್ದರೂ ಕೂಡ ಪಾಕ್ ಉಗ್ರರ ಸ್ವರ್ಗವಾಗುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಪಾಕಿಸ್ತಾನ ಮುಂಬೈ ದಾಳಿಕೋರರನ್ನು ಹಿಡಿದು ಶಿಕ್ಷಿಸಲೇಬೇಕು ಎಂದು ಹೇಳಿದ್ದಾರೆ.
'ಅಮೆರಿಕ ಅಧ್ಯಕ್ಷನಾಗಿ ನಾನು ಒಂದು ಮಾತನ್ನು ಹೇಳಲೇಬೇಕಿದ್ದು, ಉಗ್ರರ ವಿರುದ್ಧದ ಅಮೆರಿಕದ 'ನಿಷ್ಕರುಣ ಕಾರ್ಯಾಚರಣೆ' ಮುಂದುವರೆಯುತ್ತದೆ. ಮತ್ತು ಈ ಕಾರ್ಯಾಚರಣೆಯಲ್ಲಿ ಭಾರತೀಯರು ಮತ್ತು ಅಮೆರಿಕನ್ನರು ಒಟ್ಟಾಗಿ ಹೋರಾಡುತ್ತಾರೆ. 2014ರ ಸಾರ್ವತ್ರಿಕ ಚುನಾವಣೆಯು ಭಾರತದಲ್ಲಿ ಹೊಸ ಭರವಸೆ ಮತ್ತು ಶಕ್ತಿಯನ್ನು ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆ ಭಾರತ ಮತ್ತು ಅಮೆರಿಕ ರಾಷ್ಟ್ರಗಳ ನಡುವಿನ ಸೌಹಾರ್ಧತೆಯನ್ನು ಮತ್ತಷ್ಟು ಬಲಿಷ್ಟಗೊಳಿಸಲಿದೆ ಎಂದು ನಾನು ಆಶಿಸುತ್ತೇನೆ' ಎಂದು ಒಬಾಮ ಹೇಳಿದರು.
ಇನ್ನು ಭಾರತಕ್ಕೆ ಎರಡನೇ ಬಾರಿ ಭೇಟಿ ನೀಡುತ್ತಿರುವ ಮೊದಲ ಅಮೆರಿಕ ಅಧ್ಯಕ್ಷ ಎಂಬ ವಿಚಾರದ ಕುರಿತು ಮಾತನಾಡಿದ ಒಬಾಮ ಅವರು, 'ಅಮೆರಿಕ ಮತ್ತು ಭಾರತ ದೇಶಗಳು ಜಾಗತಿಕವಾಗಿ ಒಳ್ಳೆಯ ಸೌಹಾರ್ದ ರಾಷ್ಟ್ರಗಳು ಎಂಬುದನ್ನು ಸಾರುವುದಕ್ಕೆ ಇದೊಂದು ಉತ್ತಮ ವೇದಿಕೆಯಾಗಿದ್ದು, ಇದೇ ಕಾರಣಕ್ಕೆ ತಾವು ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನವನ್ನು ಸ್ವೀಕರಿಸಿದೆ' ಎಂದು ಹೇಳಿದರು.
'ಅಮೆರಿಕ ಮತ್ತು ಭಾರತ ದೇಶಗಳ ಸಂಸ್ಕೃತಿ ಮತ್ತು ಇತಿಹಾಸಗಳು ಬೇರೆ ಬೇರೆಯದ್ದೇ ಆಗಿದ್ದರೂ, ಉಭಯ ರಾಷ್ಟ್ರಗಳು ಪರಸ್ಪರ ಆಸಕ್ತಿಗಳನ್ನು ಗೌರವಿಸುತ್ತವೆ. ನಾವು ಒಗ್ಗೂಡಿ ಕೆಲಸ ಮಾಡಿದರೆ ಉಭಯ ರಾಷ್ಟ್ರಗಳ ಭದ್ರತೆ, ಹೆಚ್ಚೆಚ್ಚು ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಕಳೆದ ಕೆಲ ವರ್ಷಗಳಿಂದ ಉಭಯ ದೇಶಗಳಲ್ಲಿನ ಅಭಿವೃದ್ಧಿ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು, ಶೇ.60ರಷ್ಟು ಉದ್ಯೋಗವಕಾಶಗಳು ಹೆಚ್ಚಾಗಿವೆ. ಉಭಯ ರಾಷ್ಟ್ರಗಳ ಸೈನಿಕರು ಒಟ್ಟಿಗೆ ಸೈನಿಕ ತರಬೇತಿ ಪಡೆಯುತ್ತಿದ್ದಾರೆ' ಎಂದು ಒಬಾಮ ಹೇಳಿದರು.
ಇನ್ನು ಭಾರತ ಪ್ರವಾಸ ಕುರಿತಂತೆ ಮಾತನಾಡಿದ ಒಬಾಮ ಅವರು, 'ಅಭಿವೃದ್ಧಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾರ್ಯ ನಿರ್ವಹಿಸಲು ಇದೊಂದು ಉತ್ತಮ ಅವಕಾಶವಾಗಿದೆ' ಎಂದು ಅವರು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


