ಲಕ್ಷ್ಮಿಗೆ ಮತ್ತೆ ಕಾಡುತ್ತಿದೆ ನೋವು, ಹಣದ ಸಮಸ್ಯೆ
ನಿಮಗೆ ನೆನಪಿರಬಹುದು, 8 ಕೈ ಕಾಲು, 2 ದೇಹಗಳನ್ನು ಹೊಂದಿ ಹುಟ್ಟಿದ ಬಿಹಾರದ ಬಾಲಕಿ ಲಕ್ಷ್ಮಿ...

ಪಾಟ್ನಾ: ನಿಮಗೆ ನೆನಪಿರಬಹುದು, 8 ಕೈ ಕಾಲು, 2 ದೇಹಗಳನ್ನು ಹೊಂದಿ ಹುಟ್ಟಿದ ಬಿಹಾರದ ಬಾಲಕಿ ಲಕ್ಷ್ಮಿ. ನಮ್ಮ ಸ್ಪರ್ಶ ಆಸ್ಪತ್ರೆಯಲ್ಲಿ ನಡೆದ ಆಕೆಯ ಶಸ್ತ್ರಚಿಕಿತ್ಸೆ ವಿಶ್ವದ ಗಮನವನ್ನೇ ಸೆಳೆದಿತ್ತು.
ಅಂದು ಗುಣಮುಖವಾಗಿ ಹೋಗಿದ್ದ ಅದೇ ಲಕ್ಷ್ಮಿಗೆ ಮತ್ತೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಮತ್ತೊಂದು ಪುಟ್ಟ ಶಸ್ತ್ರಚಿಕಿತ್ಸೆಗೆಂದು ಬೆಂಗಳೂರಿಗೆ ಮರಳುವುದು ಅನಿವಾರ್ಯವಾಗಿದೆ. ಆದರೆ ಹಣಕಾಸಿನ ಕೊರತೆ ಆಕೆಯ ಕಾಲನ್ನು ಕಟ್ಟಿಹಾಕಿದೆ. ಬಿಹಾರದ ಬಡ ಕುಟುಂಬದಲ್ಲಿ ಜನಿಸಿದ ಲಕ್ಷ್ಮಿ ತತ್ಮಾಳಿಗೆ 8 ಕೈ-ಕಾಲು ಮತ್ತು 2 ದೇಹಗಳಿದ್ದವು. 2008ರ ಫೆಬ್ರವರಿಯಲ್ಲಿ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಡಾ.ಶರಣ್ ಪಾಟೀಲ್ ನೇತೃತ್ವದ ನುರಿತ ವೈದ್ಯರ ತಂಡ 27 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿತ್ತು.
ಬಳಿಕ ಆಕೆ ಉಳಿದ ಮಕ್ಕಳಂತೆಯೇ ಆಗಿದ್ದಳು. ಪೋಷಕರಾದ ಶಂಭು ಮತ್ತು ಪೂನಂ ಬಳಿ ಎರಡನೇ ಶಸ್ತ್ರಚಿಕಿತ್ಸೆಗೆ ಹಣವಿಲ್ಲದಿದ್ದ ಕಾರಣ, ಹುಟ್ಟೂರು ಅರಾರಿಯಾ ಜಿಲ್ಲೆಯ ರಾಮ್‌ಪುರ್ ಕೊದರ್ ಕಟ್ಟಿ ಗ್ರಾಮಕ್ಕೆ ಮರಳಿದ್ದರು. ಇದೀಗ ಹೊಸತಾಗಿ, ಬೆನ್ನು ಮೂಳೆಯ ತುದಿಯಲ್ಲಿ ಹುಣ್ಣು ಮತ್ತು ನೋವು ಕಾಣಿಸಿಕೊಂಡಿದೆ. ಹೀಗಾಗಿ ಹೆಚ್ಚಿನ ಸಮಯ ಕುಳಿತುಕೊಳ್ಳಲು ಆಗದಂಥ ಪರಿಸ್ಥಿತಿ ಉಂಟಾಗಿದೆ.
ಮತ್ತೆ ಬೆಂಗಳೂರಿಗೆ?
ಮೊದಲನೆ ಶಸ್ತ್ರಚಿಕಿತ್ಸೆ ಸಂದರ್ಭದಲ್ಲೇ ಕೆಲ ವರ್ಷಗಳ ಬಳಿಕ ಲಕ್ಷ್ಮಿ ಬೆನ್ನು ಹುರಿಯ ಇನ್ನೊಂದು ಪುಟ್ಟ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ತಿಳಿಸಲಾಗಿತ್ತು. ಆದರೆ ಕೂಲಿಯನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ಆಕೆಯ ಕುಟುಂಬ ಅಂಥ ದುಬಾರಿ ಸಾಹಸಕ್ಕೆ ಮುಂದಾಗಲಿಲ್ಲ. ಕತಿಹಾರ್ ಜಿಲ್ಲೆಯ ನುರಿತ ವೈದ್ಯರೊಬ್ಬರು ಅಲ್ಲೇ ಲಕ್ಷ್ಮಿಯನ್ನು ಗುಣಪಡಿಸುವುದಾಗಿ ಹೇಳಿದ್ದರು. ಆದರೆ ಇದೀಗ ಮೊದಲ ಶಸ್ತ್ರಚಿಕಿತ್ಸೆ ಮಾಡಿದ್ದ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೇ ಮತ್ತೆ ಲಕ್ಷ್ಮಿಯನ್ನು ಕರೆದೊಯ್ಯುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಆಕೆಯ ಹೆತ್ತವರ ಬಂದಿದ್ದಾರೆ.
ಎರಡನೇ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೆಂದು ಮೊದಲ ಸಂದರ್ಭದಲ್ಲಿಯೇ ಅವರಿಗೆ ನಾನು ಸೂಚಿಸಿದ್ದೆ. 2008ರ ಶಸ್ತ್ರಚಿಕಿತ್ಸೆ ಬಳಿಕ ಒಂದು ವರ್ಷದವರೆಗೆ ಹಲವು ರೀತಿಯಲ್ಲಿ ಆಕೆಯ ಹೆತ್ತವರು ನಮ್ಮ ಜತೆ ಸಂಪರ್ಕದಲ್ಲಿದ್ದರು. ನಂತರ ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಪುತ್ರಿಯ ಸಮಸ್ಯೆ ಬಗ್ಗೆ ಬಿಹಾರದಲ್ಲಿಯೇ ವೈದ್ಯರೊಬ್ಬರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದರು ಎಂದು ಕೇಳಿದ್ದೆ. ಆದರೆ ಯಾವುದರ ಬಗ್ಗೆ ಗೊತ್ತಾಗಿರಲಿಲ್ಲ. ಇದೀಗ ಅವರು ನಮ್ಮನ್ನು ಸಂಪರ್ಕಿಸಿದರೆ, ಆಕೆಯಲ್ಲಿರುವ ಸಮಸ್ಯೆ ಏನು? ಅಲ್ಲಿ ಏನು ಚಿಕಿತ್ಸೆ ಪಡೆದಿದ್ದಾರೆ? ಈಗ ಆಕೆಯ ಪರಿಸ್ಥಿತಿ ಹೇಗಿದೆ ಇತ್ಯಾದಿಗಳನ್ನು ಪರಿಶೀಲಿಸಿದ ಬಳಿಕವಷ್ಟೇ ನಿರ್ಧಾರ ಕೈಗೊಳ್ಳಲು ಸಾಧ್ಯ.
-ಡಾ.ಶರಣ್ ಪಾಟೀಲ್ ಸ್ಪರ್ಶ್ ಆಸ್ಪತ್ರೆ ಮುಖ್ಯಸ್ಥ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


