ನಿತೀಶ್ ಆಯ್ಕೆಗೆ ಪಾಟ್ನಾ 'ಹೈ' ತಡೆ
ಮತ್ತೆ ಬಿಹಾರದ ಗದ್ದುಗೆ ಏರಲು ಹವಣಿಸುತ್ತಿರುವ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ತೀವ್ರ ಹಿನ್ನಡೆಯಾಗಿದ್ದು...

ಪಾಟ್ನಾ: ಮತ್ತೆ ಬಿಹಾರದ ಗದ್ದುಗೆ ಏರಲು ಹವಣಿಸುತ್ತಿರುವ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ತೀವ್ರ ಹಿನ್ನಡೆಯಾಗಿದ್ದು, ಜೆಡಿಯು ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಆಯ್ಕೆಗೆ ಪಾಟ್ನಾ ಹೈಕೋರ್ಟ್ ತಡೆ ನೀಡಿದೆ.
ನಿತೀಶ್ ಆಯ್ಕೆಯೇ ಅಸಾಂವಿಧಾನಿಕ ಎಂದು ಪಾಟ್ನಾ ಹೈಕೋರ್ಟ್ ಆದೇಶಿಸಿದ್ದು, ನಿತೀಶ್ ಆಯ್ಕೆಯನ್ನು ಸಿಂಧುಗೊಳಿಸಿದ ಸ್ಪೀಕರ್ ಕ್ರಮವನ್ನು ಕೂಡ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಜೆಡಿಯು ಶಾಸಕ ರಾಜೇಶ್ವರ ರಾಜ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ ಈ ವಿಚಾರದಲ್ಲಿ ರಾಜ್ಯಾಪಾಲರ ನಿರ್ಧಾರವೇ ಅಂತಿಮ ಎಂದು ತೀರ್ಪು ನೀಡಿದೆ.
ನಿತೀಶ್ ಕುಮಾರ್ ಅವರು ಸೋಮವಾರ ಜೆಡಿಯು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಬಿಹಾರ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಆದರೆ ಇಂದು ಪಾಟ್ನಾ ಹೈಕೋರ್ಟ್ ನೀಡಿದ ಆದೇಶದಿಂದಾಗಿ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ತೀವ್ರ ಹಿನ್ನಡೆಯಾಗಿದೆ.
ತಮಗೆ 130 ಶಾಸಕರ ಬೆಂಬಲವಿದೆ ಎಂದು ಪ್ರತಿಪಾದಿಸಿದ್ದ ನಿತೀಶ್ ಕುಮಾರ್, ಎಲ್ಲ ಶಾಸಕರನ್ನು ರಾಜಭವನದಲ್ಲಿ ಪೆರೇಡ್ ಮಾಡಿಸಿದ್ದರು ಮತ್ತು ಬಹುಮತ ಸಾಬೀತಿಗೆ ತಮಗೆ ಅವಕಾಶ ನೀಡಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ದರು. ಇದಕ್ಕೂ ಮೊದಲು ಹಾಲಿ ಮುಖ್ಯಮಂತ್ರಿ ಮಾಂಝಿ ಕೂಡ ಸೋಮವಾರ ರಾಜ್ಯಪಾಲರನ್ನು ಭೇಟಿಮಾಡಿ ಬಹುಮತ ಸಾಬೀತಿಗೆ ತಮಗೆ ಅವಕಾಶ ನೀಡಬೇಕೆಂದು ಕೋರಿದ್ದರು.
ಹೀಗಾಗಿ ಪ್ರಸ್ತುತ ಚೆಂಡು ರಾಜ್ಯಪಾಲರ ಅಂಗಳದಲ್ಲಿದ್ದು, ರಾಜ್ಯಪಾಲರು ಯಾವ ನಿರ್ಧಾರ ಕೈಗೊಳ್ಳಲ್ಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಜೆಡಿಯು ಪಕ್ಷವನ್ನು ಬಿಜೆಪಿ ಒಡೆಯಲು ಯತ್ನಿಸುತ್ತಿದೆ
ಕೇಂದ್ರ ಬಿಜೆಪಿ ಸರ್ಕಾರ ಜೆಡಿಯು ಪಕ್ಷದಲ್ಲಿ ಒಡಕನ್ನುಂಟು ಮಾಡಿ ಬಿಹಾರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಜೆಡಿಯು ನಾಯಕ ನಿತೀಶ್ ಕುಮಾರ್ ಆರೋಪಿಸಿದ್ದಾರೆ.
ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಭೇಟಿಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್ ಅವರು, ಬಿಹಾರದಲ್ಲಿ ಸರ್ಕಾರ ರಚಿಸಲು 130 ಶಾಸಕರ ಬೆಂಬಲವಿದ್ದರೂ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಬಹುಮತ ಸಾಬೀತು ಪಡಿಸಲು ಅವಕಾಶ ನೀಡುತ್ತಿಲ್ಲ. ಬಿಹಾರ ರಾಜಕೀಯ ಬಿಕ್ಕಟ್ಟಿನ ಹಿಂದೆ ಬಿಜೆಪಿ ಕೈವಾಡವಿದ್ದು, ಬಿಜೆಪಿ ಜೆಡಿಯು ಪಕ್ಷವನ್ನು ಒಡೆಯಲೆತ್ನಿಸುತ್ತಿದೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


