ಗೋಸ್ವಾಮಿ ವಜಾ, ಗೋಯಲ್ ನೂತನ ಗೃಹ ಕಾರ್ಯದರ್ಶಿ
ಬಹುಕೋಟಿ ಶಾರದಾ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಅವರನ್ನು ಕೇಂದ್ರ ಸರ್ಕಾರ ಬುಧವಾರ ರಾತ್ರಿ ವಜಾ ಮಾಡಿದೆ.

ನವದೆಹಲಿ: ಬಹುಕೋಟಿ ಶಾರದಾ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಅವರನ್ನು ಕೇಂದ್ರ ಸರ್ಕಾರ ಬುಧವಾರ ರಾತ್ರಿ ವಜಾ ಮಾಡಿದೆ.
ಕೇಂದ್ರದ ಮಾಜಿ ಸಚಿವರೊಬ್ಬರ ಬಂಧನ ತಡೆಯಲು ಸಿಬಿಐ ಮೇಲೆ ಪ್ರಭಾವ ಬೀರಿದ ಆರೋಪದ ಹಿನ್ನೆಲೆಯಲ್ಲಿ ಗೋಸ್ವಾಮಿ ಅವರನ್ನು ವಜಾಗೊಳಿಸಲಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಎಲ್.ಸಿ. ಗೋಯಲ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ಇತ್ತೀಚಿಗಷ್ಟೇ ಬಂಧಿತರಾದ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಮಾತಂಗ್ ಸಿನ್ಹಾ ಪರ ಗೃಹ ಕಾರ್ಯದರ್ಶಿ ಗೋಸ್ವಾಮಿ ಸಿಬಿಐಗೆ ದೂರವಾಣಿ ಕರೆ ಮಾಡಿದ್ದರು. ಮಾತಂಗ್ ಬಂಧಿಸದಂತೆ ಸಿಬಿಐ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರು.
ಈ ವಿಚಾರಕ್ಕೆ ಸಂಬಂಧಿಸಿ ಸ್ವತಃ ಸಿಬಿಐ ಮುಖ್ಯಸ್ಥರೇ ಪ್ರಧಾನಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದರು. ಹಾಗಾಗಿ ಈ ಆರೋಪಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡುವಂತೆ ಗೋಸ್ವಾಮಿ ಅವರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಸೂಚಿಸಿದ್ದರು. ಅದರಂತೆ ರಾಜನಾಥ್ ಅವರನ್ನು ಭೇಟಿಯಾದ ಗೋಸ್ವಾಮಿ ತಪ್ಪೊಪ್ಪಿಕೊಂಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಗೋಸ್ವಾಮಿ ಅವರಿಗೆ ರಾಜಿನಾಮೆ ಕೊಟ್ಟು ಮನೆಗೆ ತೆರಳುವಂತೆ ಪ್ರಧಾನಿ ಕಾರ್ಯಾಲಯದಿಂದ ಸೂಚನೆ ಬಂದಿದೆ ಎನ್ನಲಾಗಿದೆ.
ಈ ವರ್ಷದ ಮೂರನೇ ಪ್ರಕರಣ!
ಉನ್ನತ ಹುದ್ದೆಗಳಲ್ಲಿದ್ದ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ ಮೂರನೇ ಪ್ರಕರಣ ಇದಾಗಿದೆ. ಕಳೆದ ತಿಂಗಳಷ್ಟೇ ಡಿಆರ್‌ಡಿಒ ಮುಖ್ಯಸ್ಥ ಅವಿನಾಶ್ ಚಂದರ್ ಅವರನ್ನು ದಿಢೀರ್ ಆಗಿ ಮನೆಗೆ ಕಳುಹಿಸಲಾಗಿತ್ತು. ವಾರದ ಹಿಂದೆ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರಿಗೆ ನಿವೃತ್ತಿಗೆ ಏಳು ತಿಂಗಳು ಇದೆ ಎನ್ನುವಾಗಲೇ ರಾಜಿನಾಮೆ ನೀಡುವಂತೆ ಸೂಚಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


